ಕನ್ನಡ ಪ್ರಭ  ಟೈಟಲ್ ನಾನೇ ಸೂಚಿಸಿದ್ದೆ- ಕೆ. ಸತ್ಯನಾರಾಯಣ.

ಬೆಂಗಳೂರು,ಆಗಸ್ಟ್,19,2022(www.justkannada.in):  ಅಮೃತ ಸ್ವಾತಂತ್ರ್ಯದ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರಿಗೆ ಗೌರವ ಸಮರ್ಪಣೆ ಮಾಡುವ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ (ಕನ್ನಡ ಪ್ರಭ ಸತ್ಯ)ಅವರಿಗೆ ಎಂಬತ್ತೇಳು ವಸಂತ ತುಂಬಿರುವ ಸಂದರ್ಭದಲ್ಲಿ ಜಯನಗರದ ಅವರ ಮನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಗೌರವಿಸಿದರು.

ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ಅವರು, ಕನ್ನಡ ಪ್ರಭ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಸುಧೀರ್ಘ ಅವಧಿಗೆ ನಾನಾ ಹಂತದಲ್ಲಿ ದುಡಿದವರು. ತಮ್ಮ ಬದುಕನ್ನು ಸುದ್ದಿ ಮನೆಗೆ ಸಮರ್ಪಣೆ ಮಾಡಿದ ಹಿರಿಯ ಚೇತನ. ಇಳಿವಯಸ್ಸಿನಲ್ಲೂ ಅಂಕಣ ಬರೆಯುತ್ತಾ ತಮ್ಮೊಳಗಿನ ಪತ್ರಕರ್ತನನ್ನು ಜಾಗೃತವಾಗಿ ಕಾಪಿಟ್ಟುಕೊಂಡವರು.

ಜಯನಗರದ ಅದೇ ರೆಡ್ ಆಕ್ಸೈಡ್ ನೆಲವಿರುವ ಮನೆಯಲ್ಲಿ ವಾಸ. ಇಳಿವಯಸ್ಸಿನಲ್ಲೂ ವೆಂಕಮ್ಮ ಸತ್ಯನಾರಾಯಣ ದಂಪತಿಗಳು ಸರಳ ಸಜ್ಜನಿಕೆಯಲ್ಲಿ ಆದರ್ಶಪ್ರಾಯವಾದ ಬದುಕು ಬದುಕುತ್ತಿದ್ದಾರೆ.

ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಪತ್ರಕರ್ತ ಎಂದ ಮೇಲೆ ಪತ್ರಕರ್ತ ಅಷ್ಟೇ. ಕಿರಿಯ, ಹಿರಿಯ ಎಂದು ಹೇಳುವುದು ನನಗೆ ಸರಿ ಕಾಣುವುದಿಲ್ಲ ಎಂದು ಮಾತು ಆರಂಭಿಸಿದರು.

ನಮ್ಮ ಕಾಲದಲ್ಲಿ ಇಷ್ಟು ಅನುಕೂಲ ಇರಲಿಲ್ಲ. ಕಷ್ಟ ಪಟ್ಟು ವರದಿಗಾರಿಕೆ, ಪತ್ರಿಕೆಯ ಕೆಲಸ ಮಾಡುತ್ತಿದ್ದೆವು. ಪೈಪೋಟಿ ಕಡಿಮೆ ಇತ್ತು. ಈಗ ಪೈಪೋಟಿ ಹೆಚ್ಚಾಗಿದೆ. ಪತ್ರಕರ್ತರಿಗೆ ಸಂಬಳವೂ ಸಿಗುತ್ತಿದೆ. ಹಾಗೆ ನೋಡಿದರೆ ಪತ್ರಕರ್ತರ ಪಾಲಿಗೆ ಈಗ ಒಳ್ಳೆಯ ಕಾಲ ಬಂದಿದೆ. ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಂಡು ಬೆಳೆಯಲು ಅವಕಾಶವಿದೆ ಎಂದರು.

ಕನ್ನಡ ಪ್ರಭ:

1967 ರಲ್ಲಿ ಪತ್ರಿಕೆ ಪ್ರಾರಂಭಿಸಬೇಕು ಎಂದು ಎಲ್ಲರೂ ಟೈಟಲ್ ಗಾಗಿ ಚರ್ಚೆ ನಡೆಸಿದ್ದರು. ಆಗ ನಾನೆ ಕನ್ನಡ ಪ್ರಭ ಎನ್ನುವ ಹೆಸರು ಸೂಚಿಸಿದೆ. ನೋಡಿದರೆ, ದೆಹಲಿಯಿಂದ ಕನ್ನಡ ಪ್ರಭ ಹೆಸರೇ ಒಪ್ಪಿಗೆಯಾಗಿ ಬಂತು ಎಂದು ಹಳೆಯ ನೆನಪು ಮೆಲುಕು ಹಾಕಿದರು.

ಪತ್ರಕರ್ತರು ಯಾರ ಮುಲಾಜಿಗೂ ಒಳಗಾಗಬಾರದು. ಸರ್ಕಾರ ಕೂಡ ಪತ್ರಕರ್ತರ ವೃತ್ತಿಯಲ್ಲಿ ಮೂಗು ತೂರಿಸಬಾರದು. ಹಸ್ತಕ್ಷೇಪ ಹೆಚ್ಚಿದರೆ ಪತ್ರಕರ್ತರ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತದೆ. ‌ಅದನ್ನು ಯಾರೂ ಮಾಡಬಾರದು ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಹಿರಿಯರ ಮನೆಯಂಗಳಕ್ಕೆ ತೆರಳಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಗೌರವ ನೀಡುವ ಮೂಲಕ ಕೆಯುಡಬ್ಲ್ಯೂಜೆ ಸ್ತುತ್ಯರ್ಹವಾದ ಕೆಲಸ ಮಾಡುತ್ತಿದೆ ಎಂದರು.

ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ನರೇಂದ್ರ ಪಾರಿಕಟ್, ಬೀದರನ ಶಿವಕುಮಾರ ಸ್ವಾಮಿ ಮತ್ತಿತರರು ಹಾಜರಿದ್ದರು.

Key words: Kannada Prabha- title – suggested –journalist- K. Satyanarayana