ಜಿ.ಎನ್.ಮೋಹನ್ ಕ್ವಾರಂಟೈ ನ್ ಮೆಲುಕು : ಮಣ್ಣು ಹುಡುಕಿದೆ..

ಬೆಂಗಳೂರು, ಮೇ 25, 2020 : (www.justkannada.in news)

ಅವತ್ತು ತುಂಬಾ ಜೋಷ್ ನಲ್ಲಿ ಮಾತನಾಡುತ್ತಿದ್ದೆ.

ಯಾಕೋ ಹುಕಿ ಬಂದಿತ್ತು.

ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಎಲ್ಲರ ಕಣ್ಣೂ ಅರಳುವಂತೆ ಅದೂ ಇದು ಹೇಳುತ್ತಿದ್ದೆ.

ನಾನು ನಿಜಕ್ಕೂ ಸಂಭ್ರಮದಲ್ಲಿದ್ದೇನೆ ಎನ್ನುವುದು ಎಂತಹವರಿಗೂ ಗೊತ್ತಾಗಿ ಹೋಗುವಂತಿತ್ತು. ನನ್ನ ಹಾವ ಭಾವ, ಒಂದಿಷ್ಟು ಹೆಚ್ಚೇ ಎನ್ನುವಂತಿದ್ದ ನಗು, ಎಲ್ಲವೂ..

ಆಗ, ಆಗ ಆತ ಬಂದ. ಬಂದವನೇ ನನ್ನ ಕೈಗೆ ಒಂದು ಪುಟ್ಟ ಬಾಟಲಿ ನೀಡಿದ.

ನಾನು ಅದರ ಮುಚ್ಚಳ ತಿರುಗಿಸಿದೆ ಅಷ್ಟೇ . ಮಾತು ಗಕ್ಕನೆ ನಿಂತಿತು.
ಆಡುತ್ತಿದ್ದ ಮಾತುಗಳು ಸಿಕ್ಕಿ ಹಾಕಿಕೊಂಡಿತು. ಕಣ್ಣಲ್ಲಿ ಒಂದಿಷ್ಟು ಹನಿ ತುಳುಕಿತೇನೋ ಗೊತ್ತಿಲ್ಲ..

ಅದು ‘ಈಟಿವಿ’ ದಿನಗಳು.

ದಿನಾ ಮಧ್ಯಾಹ್ನ ನಾನು ಎಲ್ಲರನ್ನೂ ಸೇರಿಸಿ ಅದೂ ಇದೂ ಮಾತನಾಡುತ್ತಿದ್ದೆ. ಬೆಂಗಳೂರಿನಿಂದ ಬಂದವರನ್ನುಕರೆದುಕೊಂಡು ಬಂದು ಕೂರಿಸಿ ಹರಟೆ ಹೊಡೆಯುವಂತೆ ಮಾಡುತ್ತಿದ್ದೆ. ದೂರದ ಹೈದ್ರಾಬಾದ್ ನಲ್ಲಿದ್ದು ಕನ್ನಡವನ್ನು ಉಣ್ಣಲೂ ಆಗದ, ತಿನ್ನಲೂ ಆಗದ ಪರಿಸ್ಥಿತಿಯಲ್ಲಿರುವವರಿಗೆ ಅವರ ಊರುಗಳು ಕಾಡಬಾರದಲ್ಲಾ. ಹಾಗಾಗಿ ಅವರ ಊರನ್ನೇ ಇಲ್ಲಿಗೆ ತಂದು ಕೊಡುವ ಕೆಲಸ ಮಾಡುತ್ತಿದ್ದೆ. ಒಂದಿಷ್ಟು ಮಾತಿನ ಮೂಲಕ..

ಅವತ್ತೂ ಹಾಗೆ..

ಆದರೆ ಒಂದು ಬದಲಾವಣೆ ಇತ್ತು. ಆ ದಿನ ಬೇರೆಯವರ ಬದಲು ನನ್ನ ಕಚೇರಿಯಲ್ಲಿ ನಾನೇ ಅತಿಥಿಯಾಗಿದ್ದೆ.

ಎಲ್ಲರೂ ನನ್ನ ಮಾತು ಕೇಳಲು ಸಜ್ಜಾಗಿದ್ದರು. ಅವರೇ ನಿಂತು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.

ಅಂದು ರಾತ್ರಿ ನಾನು ಅಮೆರಿಕಾಗೆ ಹೋಗಲು ಸಜ್ಜಾಗಿದ್ದೆ. ಅಲ್ಲಿನ ಸಿ ಎನ್ ಎನ್ ಚಾನಲ್ ನನ್ನನ್ನು ಆಹ್ವಾನಿಸಿತ್ತು. ಅಮೆರಿಕಾದಲ್ಲಿ ಇದ್ದು ಅವರೊಂದಿಗೆ ಒಂದಷ್ಟು ದಿನ ಕೆಲಸ ಮಾಡುತ್ತಾ ಅವರ ಕಾರ್ಯ ವೈಖರಿ ತಿಳಿಯುವ ಅವಕಾಶ. ಹಾಗಾಗಿ ಅದು ನನಗೆ ಶುಭ ಹಾರೈಸಿ ಬೀಳ್ಕೊಡುವ ಕಾರ್ಯಕ್ರಮ.

ಆಗಲೇ ಈ ಘಟನೆ ನಡೆದಿದ್ದು. ನನ್ನ ಕುಲು ಕುಲು ಮಾತಿಗೆ ಒಂದಿಷ್ಟು ಬ್ರೇಕ್ ಹಾಕಿದ್ದು.

ಎಲ್ಲರ ಪರವಾಗಿ ಈಗ ಒಂದು ನೆನಪಿನ ಕಾಣಿಕೆ ಎಂದು ಘೋಷಿಸಿದರು.

ಆಗಲೇ ಆತ ಬಂದದ್ದು. ಜಯಪ್ರಕಾಶ್ ಶೆಟ್ಟಿ. ತನ್ನದೇ ಆದ ಚುರುಕುತನದಿಂದ, ಸದಾ ಹೊಸತನದಿಂದ ಕೂಡಿದ ಹುಡುಗ. ಎಲ್ಲರ ಪರವಾಗಿ ಒಂದು ಪುಟ್ಟ ಗಾಜಿನ ಬಾಟಲಿಯನ್ನು ನನ್ನ ಕೈಗಿತ್ತ. ನನಗೆ ಏನೆಂದು ಅರ್ಥವಾಗಲಿಲ್ಲ.

ಈ ಹಿಂದೆ ಯಾರ್ಯಾರೋ ನನಗೆ, ನಾನೆಂದೂ ಬಳಸದ ಅತ್ತರ್ ಬಾಟಲಿಗಳನ್ನು ತಂದು ಕೊಟ್ಟಿದ್ದು ನೆನಪಾಯಿತು. ನಾನು ಮನಸ್ಸಿನಲ್ಲೇ ಮತ್ತೊಂದು ಎಂದು ಗೊಣಗಿಕೊಂಡೇ ಮುಚ್ಚಳ ತಿರುವಿದೆ.

ಆಗಲೇ ಆಗಲೇ ನನ್ನ ಮಾತು ನಿಂತು ಹೋಗಿದ್ದು. ಕಣ್ಣಲ್ಲಿ ನಾನು ಬೇಡ ಬೇಡ ಎಂದರೂ ಕೇಳದೆ ನೀರು ಜಿನುಗಿದ್ದು..

ಅದರಲ್ಲಿದ್ದದ್ದು ಮಣ್ಣು..

ನಾನಿದ್ದ ನೆಲದ ಮಣ್ಣು. ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯ ಮಣ್ಣು

ನಾನು ಮಾತಿಲ್ಲದವನಾಗಿ ಆ ಮಣ್ಣನ್ನು ನನ್ನ ಎದೆಗೆ ಒತ್ತಿಕೊಂಡೆ.

ನನ್ನ ಮನಸ್ಸು ಹಿಂದಕ್ಕೆ, ಬಹು ಹಿಂದಕ್ಕೆ, ಅಂದರೆ ಮತ್ತೂ ಹಿಂದಕ್ಕೆ.. ಅಂದರೆ ನೀವು ಊಹಿಸಲೂ ಆಗದ ಕಾಲಕ್ಕೆ ಜಾರಿಹೋಯಿತು

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಬೇಕು
ಅಲ್ಲಿ ಎಲ್ಲಾದರೂ ಮರದ ನೆರಳಿಗೆ ಕುಳಿತು
ರಾಮಭದ್ರನ ಮಹಿಮೆ ಹಾಡಬೇಕು

ಹಾಗೆ ನನ್ನ ಮನಸ್ಸು ಎಕ್ಕುಂಡಿಯವರ ಕಾಲಕ್ಕೆ ಜಾರಿಹೋಯಿತು. ಹಾಗೆ ನನ್ನ ಮನಸ್ಸು ಆ ಕ್ಷಣಕ್ಕೆ ಅಲ್ಲಿ ನಿಲ್ಲದೆ ಹಕ್ಕಿಯಂತೆ ರೆಕ್ಕೆ ಬಿಡಿಸಿಕೊಂಡಿತು.

ಒಂದಷ್ಟು ತಿಂಗಳ ಹಿಂದಿನ ಮಾತಷ್ಟೇ, ನಾನೇ ಆ ಹುಡುಗರಿಗೆ ಇಂತಹದೇ ಒಂದು ಮಧ್ಯಾಹ್ನ ಒಂದು ಕಥೆ ಹೇಳಿದ್ದೆ. ಜನಕರಾಜನ ಕಥೆ.

ಸೀತೆಯ ಸ್ವಯಂವರಕ್ಕೆ ಮಿಥಿಲೆ ಸಜ್ಜಾಗುತ್ತದೆ. ಎಲ್ಲೆಲ್ಲಿಗೋ ಸಂದೇಶ ಹೋಗುತ್ತದೆ. ನೂರೆಂಟು ರಾಜಕುಮಾರರು ಮಿಥಿಲೆಯತ್ತ ಹೆಜ್ಜೆ ಹಾಕುತ್ತಾರೆ. ಜನಕರಾಜನ ಷರತ್ತೊಂದಿದೆ. ತನ್ನ ಮುಂದಿಟ್ಟಿರುವ ಶಿವ ಧನುಸ್ಸನ್ನು ಯಾರು ಎತ್ತುತ್ತಾರೋ ಅವರಿಗೆ ಮಗಳು ಸೀತೆಯನ್ನು ಕೊಟ್ಟು ಮದುವೆ . ಅದೇನು ಮಹಾ ಎಂದು ಬಂದವರೆಲ್ಲರೂ ಬಿಲ್ಲು ಎತ್ತಲೂ ಹಾಗದೆ ಕೈ ಚೆಲ್ಲುತ್ತಾರೆ.

ಆಗ ಬರುತ್ತಾನೆ ರಾಮ. ಹೂವಿನಂತೆ ಮೇಲೆತ್ತಿ, ಬಿಲ್ಲು ತುಂಡರಿಸುತ್ತಾನೆ.

ಜನಕರಾಜನಷ್ಟೇ ಸೀತೆಯೂ ಸಂಪ್ರೀತೆ. ನಾಚಿಕೆಯಿಂದ ಬಂದು ರಾಮನಿಗೆ ಮಾಲೆ ಹಾಕುತ್ತಾಳೆ.

ಜನಕರಾಜ ಮದುವೆಯನ್ನು ಮುಗಿಸಿಕೊಟ್ಟು ಇನ್ನೇನು ಸೀತೆ ಅಯೋಧ್ಯೆಯತ್ತ ತೆರಳಬೇಕು ಕಣ್ಣೀರಾಗಿ ಹೋಗುತ್ತಾಳೆ.

ಆಗ ಜನಕರಾಜ ನೆನಪಿನ ಕಾಣಿಕೆಯಾಗಿ ಒಂದು ಪುಟ್ಟ ಕರಡಿಗೆಯನ್ನು ಕೈಗಿಡುತ್ತಾನೆ.

ಸೀತೆಗೂ ಸಂಕೋಚ. ಇಂತಹ ರಾಜಾಧಿರಾಜ ನನಗೆ ನೆನಪಿನ ಕಾಣಿಕೆಯಾಗಿ ಒಂದು ಪುಟ್ಟ ಭರಣಿ. ಏನೆಂದುಕೊಳ್ಳುತ್ತಾರೋ ನೆರೆದ ಜನ, ಪತಿ ರಾಮ ಎಂದು ಮುದುಡಿ ಹೋಗುತ್ತಾಳೆ,

ಹಾಗೆ ಕುಗ್ಗಿಯೇ ಆ ಭರಣಿಯ ಮುಚ್ಚಳ ತೆರೆಯುತ್ತಾಳೆ. ಅವಳ ದುಃಖದ ಕಟ್ಟೆಯೊಡೆದು ಹೋಗುತ್ತದೆ. ಭಿಕ್ಕಿ ಭಿಕ್ಕಿ ಅಳಲಾರಂಭಿಸುತ್ತಾಳೆ. ಯಾರಿಂದಲೂ ತಡೆಯಲಾಗದ ಅಳು ಅದು. ಆ ಭರಣಿಯನ್ನು ಎದೆಗೊತ್ತಿಕೊಳ್ಳುತ್ತಾಳೆ.

ಅಲ್ಲಿದ್ದದ್ದು ಮಣ್ಣು,
ಮಿಥಿಲೆಯ ನೆಲದ ಮಣ್ಣು

ತವರ ನೆನಪಾಗಿ ಅದಕ್ಕಿಂತ ಮಿಗಿಲಾದ ಇನ್ನಾವ ಉಡುಗೊರೆ ಕೊಡಲು ಸಾಧ್ಯ?

ಈ ಕಥೆ ಹೇಳಿದ್ದೆ.
ಊರ ಹಂಗು ಕತ್ತರಿಸಿಕೊಂಡು ಭಾಷೆ ಇಲ್ಲದ ಲೋಕದಲ್ಲಿ ಬದುಕುತ್ತಿದ್ದವರಿಗೆ ಈ ಕಥೆಯಲ್ಲದೆ ಇನ್ನೇನು ಹೇಳಲು ಸಾಧ್ಯ.

ಈಗ ಕಣ್ಣು ಒದ್ದೆಯಾಗುವ ಸರದಿ ನನ್ನದಾಗಿತ್ತು.

ಆ ಹುಡುಗರು, ಆ ಕಥೆ ಕೇಳಿದ್ದ ಹುಡುಗರು, ತಮ್ಮ ಊರಿನ ಮಣ್ಣು ನೆನಪಿಸಿ ಗಂಟಲು ಕಟ್ಟಿಕೊಂಡಿದ್ದ ಹುಡುಗರು ಈಗ ನಾನು ದೂರ ಬಹುದೂರ ಹಾರಿಹೋಗಲು ಸಜ್ಜಾಗಿದ್ದಾಗ ನನಗೆ ಅದೇ ನೆಲದ ಮಣ್ಣನ್ನು ಕಾಣಿಕೆಯಾಗಿ ನೀಡಿದ್ದರು.

ನಾನು ಅವರತ್ತ ಒಮ್ಮೆ ಕೃತಜ್ಞತೆಯ ನೋಟ ಬೀರಿದೆ.

ಆಮೇಲೆ ಆ ಮಣ್ಣಿನ ಬಾಟಲಿ ನನ್ನ ಸೂಟ್ ಕೇಸ್ ಸೇರಿತು. ಹೈದರಾಬಾದ್ ನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಜರ್ಮನಿಗೆ, ಜರ್ಮನಿಯಿಂದ ಅಮೆರಿಕಾಗೆ ಹೀಗೆ ಅದು ನನ್ನೊಡನೆ ಹಾರುತ್ತಿತ್ತು.

ಯಾವುದೇ ಪಾಸ್ ಪೋರ್ಟ್, ಯಾವುದೇ ವೀಸಾ ಇಲ್ಲದೆ ನನ್ನ ನೆಲ ನನ್ನೊಂದಿಗೆ ಬೆಚ್ಚಗೆ ಪಯಣಿಸುತ್ತಿತ್ತು. ದೇಶಗಳ ಗಡಿಗಳಿಗೆ ಕಿಮ್ಮತ್ತೇ ಕೊಡದೆ ನನ್ನ ನೆಲದ ಹಾಡು ನನ್ನೊಳಗೆ ರಾಗವಾಗಿತ್ತು.

ಅಟ್ಲಾಂಟಾದಲ್ಲಿ ಬಂದಿಳಿದೆ. ಕಸ್ಟಮ್ಸ್ ಬಾಗಿಲು ದಾಟಬೇಕು. ಆಗಲೇ 'ಕುಂಯ್ ಕುಂಯ್' ಸದ್ದು ಕೇಳಿಸಿದ್ದು.

ನನ್ನನ್ನು ಬದಿಗೆ ಕರೆದರು. ನಾನು ಹೊತ್ತು ತಂದಿದ್ದ ಸೂಟ್ ಕೇಸ್ ಮೇಲೆ ಸ್ಕ್ಯಾನರ್ ಗಳು ಓಡಾಡಿದವು. ಕೊನೆಗೆ ಸೂಟ್ ಕೇಸ್ ತೆರೆಯಲು ಹೇಳಿದರು. ನಾನು ಮುದ್ದಾಗಿ ಜೋಡಿಸಿದ್ದ ನನ್ನೆಲ್ಲಾ ಬಂಡವಾಳವೂ ಅವರಿಗೆ ದರ್ಶನವಾಯಿಯು.

ನಾನೂ ಸಹಾ ಅಂತಹದ್ದೇನು ಹೊತ್ತು ತಂದಿರಬಹುದು ಎಂದು ತಲೆ ಬಿಸಿ ಮಾಡಿಕೊಂಡೇ ನೋಡುತ್ತಿದ್ದೆ. ಆಗ ಒಹೋ ಸಿಕ್ಕೇ ಹೋಯ್ತು ಎನ್ನುವಂತೆ ಹೊರತೆಗೆದರು.

kannada-journalist-g.n.mohan-quarentine-read-bangalore-media

ಅದೇ ಬಾಟಲಿಯನ್ನು. ನನ್ನ ನೆಲದ ಮಣ್ಣು ಹೊತ್ತ ಬಾಟಲಿಯನ್ನು.
ಏನು ಎನ್ನುವಂತೆ ನನ್ನೆಡೆ ನೋಡಿದರು.

ಅದು ಉಪ್ಪಿನಕಾಯಿ ಅಲ್ಲ, ಮೊಸರಲ್ಲ, ಮದ್ದೂರು ವಡೆಯಲ್ಲ. ಹಾಗಿದ್ದರೆ ಇದೇನು? ಎನ್ನುವಂತಿತ್ತು ಅವರ ಮುಖ.

ನಾನು 'ಮಣ್ಣು' ಎಂದೆ

ಮತ್ತೆ ಅವರ ಹುಬ್ಬೇರಿತು. ನಂತರ ಹೇಳಿದೆ. ಇದು ಮಣ್ಣೆಂದರೆ ಮಣ್ಣಲ್ಲ ನನ್ನ ತವರಿನ ನೆನಪು. ಮತ್ತೆ ನನಗೆ ಇದು ಸಿಕ್ಕ ರೀತಿ ಹೇಳಿದೆ.

ಅವರ ಮುಖ ನೋಡಬೇಕಿತ್ತು. ಒಂದು ಮುಗುಳ್ನಗು ಚೆಲ್ಲಿದವರೇ ಕೈ ಕುಲುಕಿ ‘ಹ್ಯಾಪಿ ಟೈಮ್’ ಎಂದರು. ಅಷ್ಟೇ ಜೋಪಾನವಾಗಿ ಅದನ್ನು ನನ್ನ ಸೂಟ್ ಕೇಸ್ ಸೇರಿಸಿದರು.

ನಾನು ಅಲ್ಲಿಂದ ಸಿ ಎನ್ ಎನ್ ಗೂಡು ಸೇರಿಕೊಂಡೆ. ನನ್ನೊಡನೆ ಅದೂ.. ‘ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎನ್ನುವಂತೆ.

ಹಾಗೆ ಹಾರುತ್ತಾ ಹಾರುತ್ತಾ ಮರಳಿ ಗೂಡು ಸೇರಿಕೊಂಡೆ.

ಹೋದಾಗ ಹೇಗೆ ಬೀಳ್ಕೊಟ್ಟರೋ ಅದೇ ಸಂಭ್ರಮದಿಂದ ಎಲ್ಲರೂ ನನ್ನ ಅನುಭವದ ಕಥೆ ಕೇಳಲು ಸಜ್ಜಾದರು.

ಎಂದಿನಂತೆ ಒಂದು ಮಧ್ಯಾಹ್ನ ನಾನು ಇಡೀ ಅಮೆರಿಕಾವನ್ನು ಅವರೆದುರು ಹರಡತೊಡಗಿದೆ.

ಆ ಊರು ಆ ದೇಶ ಎಲ್ಲವನ್ನೂ.. ಮಾತಾಡಿದ್ದೆಲ್ಲಾ ಮುಗಿಯಿತು.

ನಂತರ ಎಲ್ಲರೂ ಫಾರಿನ್ ನಿಂದ ನಮಗೇನು ತಂದಿದ್ದೀರಿ ಎಂದು ಕೂಗಿದರು

ನಾನು ನನ್ನ ಜೋಬಿನಿಂದ ಒಂದು ಬಾಟಲಿ ಹೊರ ತೆರೆದೆ . ಅವರು ಬಿಚ್ಚಿ ನೋಡಿದರು.

ಅರೆ ಅದೂ ಮಣ್ಣು.. ಅಮೆರಿಕಾದ ಮಣ್ಣು.

ಮಣ್ಣಿಗಿಂತ ಇನ್ನೊಂದಿಲ್ಲ ಎಂದು ತಿಳಿಸಿಕೊಟ್ಟವರಿಗೆ ನಾನು ಮಣ್ಣನ್ನೇ ಹೊತ್ತು ತಂದಿದ್ದೆ.

ಎಲ್ಲರೂ ಬೆರಗಾಗಿ ನೋಡುತ್ತಿದ್ದರು.

ನಾನು ಹೇಳಿದೆ ಇದು ಸುಲಭದ ಕೆಲಸವಾಗಿರಲಿಲ್ಲ. ಎಲ್ಲೆಲ್ಲೂ ಕಾಂಕ್ರೀಟ್ ನ ನೆಲ ಹೊಂದಿರುವ ದೇಶದಲ್ಲಿ ಮಣ್ಣೆಲ್ಲಿ ಕಾಣಬೇಕು. ನಾನು ಹುಡುಕಿಯೇ ಹುಡುಕಿದ್ದೆ. ರಸ್ತೆ ಬದಿಯಲ್ಲಿ ನಡೆಯುತ್ತಿದ್ದರೆ ನಾನು ಹಾಗೆ ಕಣ್ಣು ನೆಲಕ್ಕೆ ಊರಿ ಬದಿಗೆ ಹೋಗುತ್ತಿದ್ದೆ. ನನ್ನೊಂದಿಗಿದ್ದ ಸಿ ಎನ್ ಎನ್ ಹುಡುಗರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು.

ಒಂದು ರಾತ್ರಿಯಂತೂ ಎಲ್ಲರೂ ಬಾರ್ ಹಾಪಿಂಗ್ ಮಾಡಲು ಸಜ್ಜಾಗುತ್ತಿದ್ದಾಗ ನಾನು ಬರುವುದಿಲ್ಲ ಎಂದೆ ಯಾಕೆ ಹುಷಾರಿಲ್ಲವಾ ಎಂದರು. ಇಲ್ಲ ನಾನು ಮಣ್ಣು ಹುಡುಕಬೇಕು ಎಂದೆ. ಅವರ ತೆರೆದ ಬಾಯಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನಾನು ಹುಡುಕಿ ಹುಡುಕಿ ಮಣ್ಣು ಸಂಗ್ರಹಿಸಿದ್ದೆ. ಅದು ಮಣ್ಣೋ ಗೊಬ್ಬರವೋ ಏನೂ ತಿಳಿಯದಾಗಿ ಹೋಗಿತ್ತು.

ನನ್ನ ಸೂಟ್ ಕೇಸ್ ನಲ್ಲಿದ್ದ ನನ್ನ ‘ಬನವಾಸಿ’ಯ ಜೊತೆಗೆ ಈಗ ಎರಡನೆಯ ಬಾಟಲಿಯೊಂದು ಕೂಡಿಕೊಂಡಿತ್ತು.

ಅಲ್ಲಿಂದ ಎರಡೂ ಪಕ್ಕ ಪಕ್ಕವೇ ಊರೂರು ಅಲೆಯಿತು. ಅದೇನು ಕಷ್ಟ ಸುಖ ಮಾತಾಡಿಕೊಂಡವೋ, ಅದೆಷ್ಟು ಬಾರಿ ನಕ್ಕವೋ, ಅದೆಷ್ಟು ಪಿಸು ಮಾತು ಸೇರಿಸಿದವೋ, ಇಲ್ಲಾ ಎಷ್ಟು ಒಡಂಬಡಿಕೆಗಳಿಗೆ ಸಹಿ ಮಾಡಿದವೋ ಗೊತ್ತಿಲ್ಲ.

ಆ ಎರಡೂ ಸಹಾ ಅಟ್ಲಾಂಟಾ, ವಾಷಿಂಗ್ಟನ್, ನ್ಯೂಯಾರ್ಕ್ , ಜರ್ಮನಿ, ಬೆಂಗಳೂರು ಹಾದು ಹೈದರಾಬಾದ್ ಸೇರಿದವು.

ಹುಡುಗರೆಲ್ಲ 'ಹೋ' ಎಂದು ಕೂಗಿ ‘ಅಂದರೆ ನಾವು ಕೊಟ್ಟಿದ್ದು ಅಲ್ಲೇ ಬಿಟ್ಟು ಹೋಯಿತು ಅಲ್ಲವಾ’ ಎಂದರು.

ಆಗ ನಾನು ಮತ್ತೆ ನನ್ನ ಜೋಬಿನಿಂದ ಇನ್ನೊಂದು ಬಾಟಲಿ ತೆಗೆದೆ. ಅದೇ ಆ ಹುಡುಗರು ಕೊಟ್ಟು ಕಳಿಸಿದ ಮಣ್ಣು. ಎಲ್ಲರಿಗೂ ಡಬಲ್ ಸಂಭ್ರಮ. ಮತ್ತೆ ಕೇಕೆ ಹಾಕಿದರು.

ನಾನು ಹೇಳಿದೆ 'ನಿಮ್ಮನ್ನು ಹೊತ್ತೊಯ್ದಿದ್ದೇನೆ. ನನ್ನ ಹೃದಯದಲ್ಲಿ ಭದ್ರವಾಗಿಟ್ಟುಕೊಂಡು.. ಜೊತೆಗೆ ಅವರನ್ನೂ ಕರೆ ತಂದಿದ್ದೇನೆ ನಿಮ್ಮ ಕೈ ಕುಲುಕಲೆಂದು..' ಅಂತ.

ಅವರು ಏನು ಹೇಳುತ್ತಿದ್ದರೋ ಗೊತ್ತಿಲ್ಲ. ನನ್ನ ಕಿವಿಯೊಳಗೆ ಅದೇ ಎಕ್ಕುಂಡಿ ಕವಿತೆ

ಮಗಳ ಮನೆತುಂಬಿಸುತ ಬೀಳ್ಕೊಡಲು ಜನಕನು
ಹನಿದುಂಬಿದವು ಮಿಥಿಲೆಯ ಹೃದಯ – ಕಣ್ಣು
‘‘ಮಗಳೆ ಮಂಗಲವಿರಲಿ’’ ಎಂದು ಉಡುಗೊರೆಯಿತ್ತ
ಬಂಗಾರದ ಕರಡಿಗೆ ತುಂಬ ಹೊಲದ ಮಣ್ಣು

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಿ ಬರುವೆ
ರಾಮಭದ್ರನ ಕಥೆಯ ಹಾಡಿ ಕರಡಿಗೆಯಲ್ಲಿ
ಜನಕರಾಜನ ಹೊಲದ ಮಣ್ಣು ತರುವೆ..

key words : kannada-journalist-g.n.mohan-quarantine-read-bangalore-media