ಕಾರ್ಯಾಂಗದ ಸೊಕ್ಕು ನ್ಯಾಯಾಂಗದ ಕೆಚ್ಚು

ರಾಜ್ಯದ ಅಧಿಕಾರಶಾಹಿ ವಿರುದ್ಧ ನ್ಯಾಯಾಂಗ ನಿರಂತರ ಗದಾಪ್ರಹಾರ

ನ್ಯಾಯಾಂಗವು ಪದೇ ಪದೆ ಸರಕಾರದ ವಿರುದ್ಧಗದಾಪ್ರಹಾರನಡೆಸುತ್ತಿದೆ. ಪ್ರತಿದಿನವೂ ಒಂದಿಲ್ಲೊಂದು ಪ್ರಕರಣದಲ್ಲಿ ಸರಕಾರ, ನಾನಾ ಇಲಾಖೆಗಳು, ಹಿರಿಯ ಅಧಿಕಾರಿಗಳನ್ನು
ಹೈಕೋರ್ಟ್ ತೀವ್ರ ತರಾಟೆಗೆ ತಗೆದುಕೊಳ್ಳುವುದು ಮಾಮೂಲಿಯಾಗಿದೆ. ಇತ್ತೀಚಿನ ದಿನಗಳಲ್ಲಂತೂ ಅದು ಮತ್ತಷ್ಟು ಹೆಚ್ಚಾಗಿದ್ದು, ಭಂಡ ಸರಕಾರಕ್ಕೆ ನಾಚಿಕೆ ಆಗಲ್ವೇ? ದಪ್ಪ ಚರ್ಮದ ಅಧಿಕಾರಿಗಳಿಗೆ
ಕೋರ್ಟ್ ಆದೇಶಗಳು ಅರ್ಥವಾಗುತ್ತಿಲ್ಲವೇ? ಒಬ್ಬ ಐಎಎಸ್ ಅಧಿಕಾರಿಯನ್ನು ಜೈಲಿಗೆ ಕಳಿಸಿದರೆ ಬುದ್ಧಿ ಬರುತ್ತದೆ. ಸರಕಾರದ ವರ್ತನೆ ಬೇಸರ ತಂದಿದೆ. ಅಧಿಕಾರಿಗಳನ್ನು ಕಾರಾಗೃಹಕ್ಕೆ
ಕಳಿಸಲು ಇದು ಸಕಾಲಹೀಗೆ ನ್ಯಾಯಮೂರ್ತಿಗಳು ಕಠಿಣಾತಿ ಕಠಿಣ ಶಬ್ದಗಳನ್ನು ಬಳಕೆ ಮಾಡಿದ ಬಳಿಕ ಸರಕಾರ ಎಚ್ಚೆತ್ತುಕೊಂಡಿದೆ. ಸೋಮವಾರ ಇಬ್ಬರು ಅಧಿಕಾರಿಗಳ ಬಂಧನವಾಗಿದೆ.
ಕೋರ್ಟ್ ಆದೇಶಗಳನ್ನು ಗೌರವಿಸದ, ನ್ಯಾಯಾಲಯಗಳಿಗೆ ಬೆಲೆ ಕೊಡದ, ತೀರ್ಪುಗಳನ್ನು ನಿರ್ಲಕ್ಷಿಸುವ ಸರಕಾರದ ಮತ್ತು ಅಧಿಕಾರಿಗಳ ವರ್ತನೆ ಗಮನಿಸಿದರೆ, ಸರಕಾರವೇನೂ ಸೂಕ್ಷ್ಮ ಸಂವೇದನೆ ಕಳೆದುಕೊಂಡಿದೆಯೋ ಎಂಬ ಅನುಮಾನ ಮೂಡುತ್ತದೆ. ಹಾಗಾಗಿ ನ್ಯಾಯಾಲಯವು ಸರಕಾರದಜಡತ್ವವನ್ನು ಅರ್ಥ ಮಾಡಿಕೊಂಡು, ತಾನೇ ಸರಕಾರದ ಹಿರಿಯ ಅಧಿಕಾರಿಗಳನ್ನು ಕರೆಯಿಸಿ ಅವರಿಗೆ ಚಳಿ ಬಿಡಿಸುವುದು, ಚಾಟಿ ಬೀಸುವುದು, ಬೆವರಿಳಿಸುವುದು ಮಾಡುತ್ತಿದೆ. ರಾಜ್ಯದ ಎಲ್ಲ ಗ್ರಾಮಗಳಿಗೆ ಸ್ಮಶಾನ ಒದಗಿಸುವುದು, ಎಸಿಬಿಯಲ್ಲಿ ಭ್ರಷ್ಟಾಚಾರ, ಕಂದಾಯ ದಾಖಲೆಗಳಲ್ಲಿನ ಎಂಟ್ರಿ ವಿಚಾರ ಹೀಗೆ ಬಹುತೇಕ ಪ್ರಕರಣಗಳಲ್ಲಿ ಚಾಟಿ ಬೀಸುವುದು ಮುಂದುವರಿದಿದೆ. ಕಳೆದ ಮೂರು ತಿಂಗಳಲ್ಲಿ ಆಯ್ದ ಕೆಲ ಪ್ರಕರಣಗಳಲ್ಲಿ ಕೋರ್ಟ್ ಸರಕಾರದ ವಿರುದ್ಧ ಖಡಕ್ ನುಡಿಗಳನ್ನಾಡಿದೆ.

., ೨೦೨೨
ಪ್ರಕರಣ: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ ಎಂಆರ್ ಮಷಿನ್ ಅಳವಡಿಕೆ ಹೈಕೋರ್ಟ್ ಹೇಳಿದ್ದು: ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರನ್ನು ಖುದ್ದು ಕರೆಸಿ ತರಾಟೆಗೆ ತೆಗೆದುಕೊಂಡು, ಹಲವು ವರ್ಷಗಳಿಂದ ನಿಮಗೆ ಒಂದು ಯಂತ್ರ ಅಳವಡಿಸಲು ಸಾಧ್ಯವಾಗಿಲ್ಲವೆಂದರೆ ಎಂತಹ ಕೆಲಸ ಮಾಡುತ್ತಿದ್ದೀರಿ ಎಂಬುದು ಗೊತ್ತಾಗುತ್ತಿದೆ. ಅಧಿಕಾರಿಗಳು ದಪ್ಪ ಚರ್ಮದ ಜನರು. ವಿಳಂಬಕ್ಕೆ ಯಾರು ಕಾರಣ, ಅವರನ್ನು ಸುಮ್ಮನೆ ಬಿಡಲಾಗದು. ಯಂತ್ರ ಅಳವಡಿಸಲು ವಿಫಲವಾಗಿರುವ ಎಲ್ಲ ಅಧಿಕಾರಿಗಳ ವೇತನ ತಡೆ ಹಿಡಿಯುತ್ತೇವೆ.

ಜೂನ್ , ೨೦೨೨
ಪ್ರಕರಣ: ರಾಜ್ಯದ ಎಲ್ಲ ತಾಲೂಕುಗಳಲ್ಲಿ ಗೋಶಾಲೆಗಳ ಆರಂಭಿಸಿರುವ ಕುರಿತ ಪಿಐಎಲ್ ವಿಚಾರಣೆ ಕೋರ್ಟ್ ಹೇಳಿದ್ದು: ಗೋಶಾಲೆ ಆರಂಭಿಸಲು ಇನ್ನೆಷ್ಟು ವರ್ಷ ಬೇಕು. ಇದೇನು ಪಂಚವಾರ್ಷಿಕ ಯೋಜನೆಯೇ? ಒಂದೂವರೆ ವರ್ಷದಿಂದ ಬಾಯಿಯಲ್ಲಿ ಹೇಳುತ್ತಿದ್ದೀರಿ. ಏನೂ ಮಾಡುತ್ತಿಲ್ಲ. ಹೀಗಾದರೆ ಹೇಗೆ? ಗೋಶಾಲೆ ಆರಂಭಿಸಿ ಎಂದು ನಾವು ಆದೇಶಿಸಿದ್ದರೆ, ನೀವು ಭೂಮಿ ಹುಡುಕ್ತಾ ಇದ್ದೀವಿ, ಕೊಳೆವೆ ಬಾವಿ ಕೊರೆಸುತ್ತಿದ್ದೇವೆ ಎಂದೆಲ್ಲಾ ಕತೆ ಹೇಳುತ್ತಿದ್ದೀರಿ. ಕೋರ್ಟ್ಗೆ ಅದೆಲ್ಲಾ ಬೇಡ, ಯಾವ ಗೋಶಾಲೆಗಳು ಎಲ್ಲ ಜಿಲ್ಲೆಗಳಲ್ಲಿ ಸಿದ್ಧವಾಗುತ್ತವೆ ಹೇಳಿ, ವೇಳಾಪಟ್ಟಿ ಕೊಡಿ.

.೧೯, ೨೦೨೨
ಪ್ರಕರಣ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿರುವ ಕಾಮಗಾರಿಗೆ ಗುತ್ತಿಗೆ ಹಣ ಪಾವತಿಸದ ವಿಚಾರ ಹೈಕೋರ್ಟ್ ಹೇಳಿದ್ದು: ಗುತ್ತಿಗೆ ಹಣ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣವನ್ನು ಪ್ರಸ್ತಾಪಿಸಿತು. ಅದಕ್ಕೆ ಹೈಕೋರ್ಟ್ ‘‘ಇನ್ನೂ ಎಷ್ಟು ಜನ ಗುತ್ತಿಗೆದಾರರು ಸಾಯಬೇಕೆಂದುಕೊಂಡಿದ್ದೀರಿ. ಕೆಲಸ ಮಾಡಿದರೂ ಹಣ ಪಾವತಿಗೆ ಯಾಕೆ ಮೀನಮೇಷ ಎಣಿಸುತ್ತಿದ್ದೀರಿ. ಪ್ರಕರಣವನ್ನು ಸುಮ್ಮನೆ ಬಿಡಲಾಗುವುದಿಲ್ಲ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲೇಬೇಕು. ಹಣ ಯಾಕೆ ಪಾವತಿ ಮಾಡಿಲ್ಲ ಎಂಬ ಬಗ್ಗೆ ಸೂಕ್ತ ವಿವರಣೆ ನೀಡಬೇಕು. ಇಲ್ಲದೇ ಹೋದಲ್ಲಿ ಆಯುಕ್ತರೇ ಖುದ್ದು ಹಾಜರಾಗುವಂತೆ ಆದೇಶಿಸಲಾಗುವುದು.

ಜೂನ್ , ೨೦೨೨
ಪ್ರಕರಣ: ರಾಜ್ಯದ ಎಲ್ಲ ಗ್ರಾಮಗಳಿಗೆ ಸ್ಮಶಾನದ ಜಾಗ ಒದಗಿಸಲು ಆದೇಶಿಸಿ ಮೂರು ವರ್ಷವಾದರೂ ಪಾಲನೆ ಮಾಡದ್ದಕ್ಕೆ ಹೂಡಿರುವ ನ್ಯಾಯಾಂಗ ನಿಂದನೆ ಕೋರ್ಟ್ ಹೇಳಿದ್ದು: ಭಂಡ ಸರಕಾರಕ್ಕೆ ನಾಚಿಕೆ ಆಗಲ್ಲವೇ? ಹೆಣಗಳನ್ನು ರಸ್ತೆಗಳಲ್ಲಿ ಹೂಳಬೇಕಾ? ಸರಕಾರ ಮಾಡಬೇಕಾದ ಕೆಲಸವನ್ನು ಕೋರ್ಟ್ ಮಾಡಬೇಕಾಗಿದೆ. ಸರಕಾರಕ್ಕೆ ನಾಚಿಕೆ ಆಗಬೇಕು. ಸತ್ತವರಿಗೆ ಸ್ಮಶಾನದಲ್ಲಿ ಜಾಗ ಒದಗಿಸಲು ಸರಕಾರ ಇಷ್ಟೊಂದು ಬೇಜಾಬ್ದಾರಿಯಿಂದ
ನಡೆದುಕೊಳ್ಳುತ್ತಿರುವುದು ಕಳವಳಕಾರಿ. ಒಳ್ಳೆಯ ಕೆಲಸ ಮಾಡಿದರೆ ಜನ ಮೆಚ್ಚಿ ಮತ ಹಾಕುತ್ತಾರೆ. ಮೂರು ವರ್ಷ ಕಳೆದರೂ ಕೋರ್ಟ್ ಆದೇಶ ಪಾಲನೆ ಮಾಡದ ಸರಕಾರದ ಧೈರ್ಯ ಮೆಚ್ಚಬೇಕು. ಇಂತಹ ಭಂಡ ಸರಕಾರವನ್ನು ನೋಡಿಲ್ಲ.

ಜೂನ್ , ೨೦೨೨
ಪ್ರಕರಣ: ಪೌರಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಗ್ರೂಪ್ಸಿ ಸಿಬ್ಬಂದಿಗ್ರೂಪ್ಬಿಗೆ ವಿಲೀನ ವಿಚಾರ ಹೈಕೋರ್ಟ್ ಹೇಳಿದ್ದು: ಕೋರ್ಟ್ ಆದೇಶ ಪಾಲಿಸದ ಸರಕಾರ ಮತ್ತು ಅಧಿಕಾರಿಗಳ ವರ್ತನೆಯಿಂದ ಬೇಸತ್ತಿದ್ದೇವೆ. ಹಿರಿಯ ಐಎಎಸ್ ಅಕಾರಿಯೊಬ್ಬರನ್ನು ಜೈಲಿಗೆ ಕಳುಹಿಸದ ಹೊರತು ಸರಕಾರ ಎಚ್ಚೆತ್ತುಕೊಳ್ಳುವುದಿಲ್ಲ. ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ಇದು ಸಕಾಲ. ಕೋರ್ಟ್ ಆದೇಶ ಪಾಲಿಸಲು ನಿರ್ಲಕ್ಷ್ಯ ತೋರುವ ಅಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ. ಅಧಿಕಾರಿ ಜೈಲಿಗೆ ಹೋಗುವ ದಿನ ಯಾವಾಗ ಬೇಕಾದರೂ ಬರಬಹುದು’.

ಜೂನ್ ೧೦,೨೦೨೨
ಪ್ರಕರಣ: ಆರ್ಟಿಸಿಯಲ್ಲಿ ಜಮೀನು ಖರೀದಿಸಿದವರ ಹೆಸರು ನಮೂದಿಸದಿರುವುದು. ಕೋರ್ಟ್ ಹೇಳಿದ್ದು: ಕೆಜಿಎಫ್ ತಹಸೀಲ್ದಾರ್ ಸುಜಾತಾ ರಾಮ್ ಅವರನ್ನು ಕೋರ್ಟ್ಗೆ ಕರೆಯಿಸಿ, ಕೋರ್ಟ್ ಆದೇಶ ಪಾಲಿಸದಿದ್ದರೆ ಜೈಲಿಗೆ ಹೋಗಲು ಸಿದ್ಧರಾಗಿ. ಜೈಲಿನಲ್ಲಿ ಅವರಿಗೆ ಕೋರ್ಟ್ ಘನತೆಯ ಅರಿವಾಗಲಿ. ಪೊಲೀಸರನ್ನು ಕರೆಸಿ ಈಗಲೇ ಜೈಲಿಗೆ ಕಳುಹಿಸುತ್ತೇವೆ. ಕೋರ್ಟ್ ಆದೇಶಗಳ ಬಗ್ಗೆ ಅಧಿಕಾರಿಗಳು ಇಷ್ಟೊಂದು ತಾತ್ಸಾರ ಧೋರಣೆ ತೋರುತ್ತಿರುವುದು ಕರ್ನಾಟಕದಲ್ಲಿ ಮಾತ್ರ. ಕೋರ್ಟ್ ಘನತೆ ಬಗ್ಗೆ ಅಕಾರಿಗಳಲ್ಲಿ ಕಿಂಚಿತ್ತೂ ಪರಿಜ್ಞಾನವಿಲ್ಲ. ಹೈಕೋರ್ಟ್ ಪರಮಾಕಾರ ಏನು ಅನ್ನೋದನ್ನು ಅಕಾರಿಗಳನ್ನು ಜೈಲಿಗೆ ಕಳುಹಿಸಿ ಜ್ಞಾನೋದಯ ಮಾಡಿಸಬೇಕಾಗುತ್ತದೆ.

ಅಧಿಕಾರಿಗಳ ಅಸಡ್ಡೆಯೇ ಕಾರಣ!
ಸರಕಾರಕ್ಕೆ ಹೈಕೋರ್ಟ್ ರೀತಿ ಚಾರ್ಜ್ ಮಾಡಲು ಅಧಿಕಾರಿಗಳ ಉಡಾಫೆಯೇ ಮುಖ್ಯ ಕಾರಣ. ಏಕೆಂದರೆ ಮೊದಲಿಗೆ ಕೋರ್ಟ್ ಆದೇಶ ಪಾಲನೆ ಮಾಡುವುದಿಲ್ಲ. ಏನಾದರೂ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಾರೆ ಮತ್ತು ಎಷ್ಟೋ ವಿಚಾರಗಳನ್ನು ಸಂಬಂಧಿಸಿದ ಸಚಿವರು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ. ತಾವೇ ಇಲ್ಲ ಸಲ್ಲದ ಕಾರಣ ಹುಡುಕಿ, ಕಾನೂನಾತ್ಮಕ ಅಂಶ ಹುಡುಕಿ ಕೊಕ್ಕೆ ಹಾಕುತ್ತಾರೆ. ಜೊತೆಗೆ ಸರಕಾರಿ ವಕೀಲರಿಗೆ ಕೋರ್ಟ್ನಲ್ಲಿ ಸಮರ್ಥವಾದ ವಾದ ಮಂಡನೆಗೆ ಸರಿಯಾದ ಮಾಹಿತಿ ಒದಗಿಸುವುದಿಲ್ಲ. ಸರಕಾರದ ಮತ್ತು ಇಲಾಖೆಗಳ ನೀತಿ ನಿಲುವುಗಳನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳಲಾಗದ ಸರಕಾರಿ ವಕೀಲರ ತಂಡವೂ ಇದಕ್ಕೆ ಮತ್ತೊಂದು ಕಾರಣ ಎಂಬ ಮಾತು ವಕೀಲರ ವೃಂದದಲ್ಲಿಯೇ ಕೇಳಿಬರುತ್ತಿದೆ.

ಕೃಪೆ: ಶ್ರೀಕಾಂತ್ ಹುಣಸವಾಡಿ, ವಿಜಯ ಕರ್ನಾಟಕ