‘ ವಿಶ್ವವಾಣಿ’ ಆಯ್ತು, ಇದೀಗ ‘ ಟ್ರೋಲ್ ಮಗಾ ‘ ಸರದಿ…….

 

ಬೆಂಗಳೂರು, ಮೇ 30, 2019 :(www.justkannada.in news ) ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಫೇಕ್ ನ್ಯೂಸ್ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಪತ್ರಿಕೆಯೊಂದರ ಸಂಪಾದಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಬೆನ್ನಲ್ಲೇ ಮತ್ತೆ ಅಂಥದ್ದೆ ಒಂದು ದೂರನ್ನು ಜೆಡಿಎಸ್ ನೀಡಿದೆ.
ಈ ಬಾರಿ ‘ ಟ್ರೋಲ್ ಮಗಾ ‘ ಫೇಸ್ ಬುಕ್ ಪೇಜ್ ನ ಅಡ್ಮಿನ್ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ. ನಗರದ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ಏನಿದು ಘಟನೆ :

ಜೆಡಿಎಸ್ ಮುಖಂಡರ ಬಗ್ಗೆ ‘ಟ್ರೋಲ್ ಮಗಾ‘ ಫೇಸ್‌ಬುಕ್ ಪುಟದಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಅದರ ಅಡ್ಮಿನ್ ವಿರುದ್ಧ ದೂರು ನೀಡಲಾಗಿದೆ. ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆಡಿಎಸ್ ಮುಖಂಡ ಎಚ್‌.ಡಿ. ದೇವೇಗೌಡ (ಮಾಜಿ ಪ್ರಧಾನಿ ), ಎಚ್‌.ಡಿ.ಕುಮಾರಸ್ವಾಮಿ ( ಮುಖ್ಯಮಂತ್ರಿ ), ಎಚ್.ಡಿ.ರೇವಣ್ಣ ( ಸಚಿವ ) ಹಾಗೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳನ್ನು ‘ಟ್ರೋಲ್‌ ಮಗಾ’ ಪುಟದಲ್ಲಿ ಪ್ರಕಟಿಸಿ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ಪ್ರದೀಪ್‌ಕುಮಾರ್ ದೂರು ನೀಡಿದ್ದಾರೆ.

ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ದೂರು ದಾಖಲಿಸಲಾಗಿತ್ತು. ಚುನಾವಣೆ ಸೋಲಿನಿಂದ ಕಂಗೆಟ್ಟ ಸಿಎಂ ಪುತ್ರ ನಿಖಿಲ್ , ಮೈಸೂರಿನ ಹೋಟೆಲ್ ಒಂದರಲ್ಲಿ ಕುಡಿದು ರಂಪಾಟ ಮಾಡಿದ ಬಗ್ಗೆ ಪತ್ರಿಕೆ ವರದಿ ಮಾಡಿತ್ತು. ಇದು ಸುಳ್ಳು ಸುದ್ಧಿ, ಕುಟುಂಬವನ್ನು ತೇಜೋವಧೆ ಮಾಡುವ ಸಲುವಾಗಿ ಸುದ್ದಿ ಪ್ರಕಟಿಸಲಾಗಿದೆ ಎಂದು ಪತ್ರಿಕೆ ವಿರುದ್ಧ ಜೆಡಿಎಸ್ ಪ್ರಕರಣ ದಾಖಲಿಸಿತ್ತು ಎಂಬುದನ್ನು ಈ ವೇಳೆ ಸ್ಮರಿಸಬಹುದು.

JDS has filed a complaint against ‘Troll Maga’ Facebook page Admin. A complaint has been lodged in the city’s Srirampur police station. JDS complained that ‘Trol Maga’ Facebook page admin had posted a “derogatory” text against our leaders