ಶೆಟ್ಟರ್ ಆಗಮನ, ಕಾಂಗ್ರೆಸ್ ಗೆ ಉತ್ತರ ಕರ್ನಾಟಕದಲ್ಲಿ ವರವಾಗಬಹುದೇ..?

kannada t-shirts

ಬೆಂಗಳೂರು,ಏಪ್ರಿಲ್,17,2023(www.justkannada.in):  ಪ್ರಬಲ ಲಿಂಗಾಯಿತ ನಾಯಕ ಜಗದೀಶ್ ಶೆಟ್ಟರ್, ತಾವು ಇದುವರೆವಿಗೆ ಪ್ರತಿಪಾದಿಸಿಕೊಂಡು ಬಂದಿದ್ದ ಆರ್ ಎಸ್ ಎಸ್ ತತ್ವ ಸಿದ್ಧಾಂತ, ಹಿಂದುತ್ವ, ಹಾಗೂ ಕಾಂಗ್ರೆಸ್ ವಿರೋಧಿ ನೀತಿ ಎಲ್ಲವನ್ನೂ ಸಮುದ್ರದ ಅಲೆಗೆ ತೂರಿ, ‘ಕೈ’ ಪಕ್ಷವನ್ನು ಬಲು ಕಷ್ಟದಿಂದ ಒಪ್ಪಿಕೊಂಡಿದ್ದಾರೆ. ತಾನು ತನು ಮನ ಧನ ವ್ಯಯಿಸಿ ನಾಲ್ಕು ದಶಕಗಳ ಕಾಲ ಕಟ್ಟಿ ಬೆಳೆಸಿದ ಬಿಜೆಪಿ, ತನಗೊಂದು ಟಿಕೆಟ್ ನೀಡಲೂ ನಿರಾಕರಿಸಿದಕ್ಕೆ ವ್ಯಘ್ರಗೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ‘ಕೈ’ ಪಕ್ಷ ಆಲಂಗಿಸಿಕೊಳ್ಳುವ ಸಂದರ್ಭದಲ್ಲಿ ಬಿಜೆಪಿಯಿಂದ ತಾವು ಪಡೆದ ಸವಲತ್ತುಗಳು, ಪಕ್ಷಕ್ಜಾಗಿ ತಾವು ಪಟ್ಟ ಶ್ರಮ ಎಲ್ಲವನ್ನೂ ಸ್ಮರಿಸಿಕೊಂಡಿದ್ದಾರೆ.

ಮತ್ತೋರ್ವ ಪ್ರಮುಖ ಲಿಂಗಾಯತ ನಾಯಕ ಲಕ್ಷಣ ಸವದಿ ಟಿಕೆಟ್ ನಿರಾಕರಿಸಿದ ಕಾರಣಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮೂರೇ ದಿನದಲ್ಲಿ ಶೆಟ್ಟರ್ ನಡೆ ಕೇಸರಿ ಕಲಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಂದುಕೊಂಡದ್ದು ಒಂದು, ಆದುದ್ದೇ ಇನ್ನೊಂದು ಎಂಬಂತಾಗಿದೆ.  ಇಬ್ಬರು ಪ್ರಬಲ ರಾಜಕೀಯ ಶಕ್ತಿ ಕೇಂದ್ರವಾಗಿದ್ದ ಸವದಿ ಹಾಗೂ ಶೆಟ್ಟರ್ ನಿರ್ಗಮನ, ಭಾಜಪದಲ್ಲಿ ತಳಮಳ ಸೃಷ್ಟಿಸಿದೆ. ಏನೂ ಅಗಿಲ್ಲ ಎಂಬಂತೆ ಬಣ್ಣ ಹಚ್ಚದೆ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ.

ಲಿಂಗಾಯಿತ ಸಮುದಾಯದ ಮತ ಶಿಕಾರಿಗೆ ಇದುವರೆವಿಗೂ ಇನ್ನಿಲ್ಲದ ಸರ್ಕಸ್ ಮಾಡಿ ಸೋತಿದ್ದ ಕಾಂಗ್ರೆಸ್ ಗೆ ಈಗ ಆನೆ ಬಲ ಸವದಿ, ಶೆಟ್ಟರ್ ಸೇರ್ಪಡೆ. ಸವದಿ , ಶೆಟ್ಟರ್ ಪಕ್ಷ ತ್ಯಜಿಸಿದ್ದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಹಿನ್ನಡೆ ಆಗವುದು ನಿಶ್ಚಿತ ಎಂಬುದು ರಾಜಕೀಯ ಪರಿಣತರ ಅಭಿಮತ.

ಸವದಿಯವರಿಗೆ ಟಿಕೆಟ್ ತಪ್ಪಿಸಿದ್ದು ರಮೇಶ್ ಜಾರಕಿಹೊಳಿ. ತಮ್ಮ ಶಿಷ್ಯ ಮಹೇಶ್ ಕುಮಟಳ್ಳಿ ರಾಜಕೀಯ ಭವಿಷ್ಯ ಕಾಪಾಡಲು, ಅವರು ಏನು ಮಾಡಬೇಕೊ ಅದನ್ನು ಮಾಡಿ ಸಫಲರಾದರು. ಹಾಗಾದರೆ ಶೆಟ್ಟರ್ ರವರ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ, ಅಥಣಿಯ ಪರಿಸ್ಥಿತಿ ಇರಲಿಲ್ಲ. ಅಲ್ಲಿ ಶೆಟ್ಟರ್ ಏಕಮೇವ. ಹಾಗಿದ್ದರೂ ಬಿಜೆಪಿ ಏಕೆ ಅವರಿಗೆ ಟಿಕೆಟ್ ನಿರಾಕರಿಸಿತು. ಶೆಟ್ಟರ್ ಗೆ ಟಿಕೆಟ್ ತಪ್ಪಿಸುವಲ್ಲಿ ಶ್ರಮಿಸಿದ ವ್ಯಕ್ತಿಗಳೆ ಅವರನ್ನು ಪಕ್ಷ ಬಿಡದಂತೆ ಮನವೊಲಿಸುವ ನಾಟಕ ಮಾಡಿದರು. ಇದೊಂದು ಅಣಕು  ಪ್ರದರ್ಶನದಂತೆ ಕಂಡಿತು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಪ್ರಕಾರ, ಶೆಟ್ಟರ್ ಗೆ ಟಿಕೆಟ್ ತಪ್ಪಿದ್ದು ಅವರ ಹಿರಿತನದ ಕಾರಣಕ್ಕೆ. ಇದನ್ನು ಯಾರಾದರೂ ನಂಬುವರೆ? ಶೆಟ್ಟರ್ ರವರಿಗೆ 67 ವರ್ಷ. ಬೊಮ್ಮಾಯಿಯವರಿಗೆ 63 ವಯಸ್ಸು. ಜಿ.ಹೆಚ್ ತಿಪ್ಪಾರೆಡ್ಡಿ, ವಿ. ಸೋಮಣ್ಣ, ಗೋವಿಂದ ಕಾರಜೋಳ ಬೊಮ್ಮಾಯಿಯವರಿಗಿಂತಲೂ ಕಿರಿಯರು ಎಂದು ಭಾವಿಸಬಹುದೇ?  ಇವರೆಲ್ಲರಿಗೂ ಅನ್ವಯವಾಗದ ಹಿರಿತನ, ಶೆಟ್ಟರ್ ರವರಿಗೆ ಲಾಗು ಆಗಿದ್ದು ಅದ್ಭುತವೇ ಸರಿ.

ಅಕಸ್ಮಾತ್ತಾಗಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಶೆಟ್ಟರ್ ಹಿರಿತನವನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕಾಗುತ್ತದೆ. ಇದು ಕೇಂದ್ರದಲ್ಲಿ ಉತ್ತರ ಕರ್ನಾಟಕ ಪ್ರತಿನಿಧಿಸುವವರೊಬ್ಬರಿಗೆ, ಹಾಗೂ ಪಕ್ಷದಲ್ಲಿ ಪ್ರಮುಖ ಸ್ಥಾನ ಅಲಂಕರಿಸಿರುವ ಮತ್ತೊಬ್ಬರಿಗೆ ಇದು ಇಷ್ಟವಿರಲಿಲ್ಲ, ಹಾಗಾಗಿ ಶೆಟ್ಟರ್ ರಿಗೆ ಪಕ್ಷ ಟಿಕೆಟ್ ನೀಡದಂತೆ ಪ್ರಭಾವ ಬೀರಿದರು ಎಂಬ ಗುಮಾನಿ ಇದೆ.

1990 ರಲ್ಲಿ ವೀರೇಂದ್ರ ಪಾಟೀಲ್ ರವರನ್ನು ಅನಾರೋಗ್ಯ ನೆಪ ನೀಡಿ ಮುಖ್ಯಮಂತ್ರಿ ಸ್ಥಾನದಿಂದ ಕಾಂಗ್ರೆಸ್ ಇಳಿಸಿದ ನಂತರ ಲಿಂಗಾಯತ ಸಮುದಾಯ ಕಾಂಗ್ರೆಸ್ ನಿಂದ ದೂರವಾಗುತ್ತಾ ಬಂತು. ಎಸ್ ಆರ್ ಬೊಮ್ಮಾಯಿ, ಮತ್ತು ಜೆ.ಹೆಚ್ ಪಟೇಲ್ ಸರ್ಕಾರಗಳನ್ನು ಉರುಳಿಸಿದರು ಎಂಬ ಅಪಾದನೆ ಹೊತ್ತ ಜೆಡಿಎಸ್ ಪಕ್ಷಕ್ಕೂ ಲಿಂಗಾಯತ ಸಮುದಾಯದ ಬೆಂಬಲ ಸಿಗಲಿಲ್ಲ. ಲಿಂಗಾಯತ ಸಮುದಾಯ ಮೊದಲಿಗೆ ರಾಮಕೃಷ್ಣ ಹೆಗಡೆಯವರಿಗೆ ನಿಷ್ಠೆ ತೋರಿತ್ತು. ನಂತರ ಯಡಿಯೂರಪ್ಪ ಬಿಜೆಪಿಯಲ್ಲಿ ಬೆಳೆದ ನಂತರ, ಸಂಪೂರ್ಣವಾಗಿ ಕಮಲ ಪಕ್ಷಕ್ಕೆ ಬೆಂಬಲಿಸಿದರು.

ಬಿಜೆಪಿ ತಮ್ಮನ್ನು ಅವಮಾನಿಸಿತು, ಅದಕ್ಕೆ ತಕ್ಕ ಪಾಠ ಕಲಿಸುವೆ ಎಂದು 2012 ರಲ್ಲಿ ಬಿಜೆಪಿ ತೊರೆದು ಕೆಜೆಪಿ ಕಟ್ಟಿ, ಕಮಲ ಪಕ್ಷವನ್ನು ಸೋಲಿಸಿದ ಯಡಿಯೂರಪ್ಪ ಇಂದು ಶೆಟ್ಟರ್ ರವರಿಗೆ ನೀತಿ ಪಾಠ ಬೋಧಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಶೆಟ್ಟರ್ ಸವದಿಯವರು ಕಾಂಗ್ರೆಸ್ ಗೆ ಲಿಂಗಾಯತ ಮತಗಳನ್ನು ತಂದುಕೊಡುವಲ್ಲಿ ಯಶಸ್ವಿಯಾಗುವರೇ? ಕಾದು ನೋಡಬೇಕು.

M.SIDDARAJU, SENIOR JOURNALIST
  • ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು

 

 

 

 

Key words: Jagadish Shettar- arrival -Congress – North Karnataka

website developers in mysore