ಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ  ಹಾಗೂ ಮಾಗಡಿ ಕೋಟೆ ಸಂರಕ್ಷಣೆ – ಸಚಿವ ಅಶ್ವಥ್ ನಾರಾಯಣ್.

ಮಾಗಡಿ,ಜೂನ್,23,2022(www.justkannada.in): ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಈ ವರ್ಷದಿಂದ ಮೂವರು ಸಾಧಕರಿಗೆ ತಲಾ 5 ಲಕ್ಷ ರೂ. ನಗದುಸಹಿತ ಅಂತಾರಾಷ್ಟ್ರೀಯ ಪ್ರಶಸ್ತಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಇಲ್ಲಿನ ಕೋಟೆಯಲ್ಲಿ ಗುರುವಾರ ಏರ್ಪಡಿಸಿದ್ದ ಕೆಂಪೇಗೌಡರ 513ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಕೆಂಪೇಗೌಡರು ಕಟ್ಟಿಸಿರುವ ಇಲ್ಲಿನ ಐತಿಹಾಸಿಕ ಕೋಟೆಯನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿ, ಸಂರಕ್ಷಿಸಲಾಗುವುದು’ ಎಂದು ಭರವಸೆ ನೀಡಿದರು.

ಕೆಂಪೇಗೌಡರ ವೀರಸಮಾಧಿ ಇರುವ ತಾಲ್ಲೂಕಿನ ಕೆಂಪಾಪುರ ಗ್ರಾಮದಲ್ಲಿ ಪರಂಪರೆಯ ಸಂರಕ್ಷಣೆಯನ್ನು ಸರಕಾರ ಮಾಡುತ್ತಿದೆ. ಜತೆಗೆ, ನಾಡಪ್ರಭುವಿಗೆ ಸೇರಿದ ಸಾವನದುರ್ಗ, ಹುಲಿಯೂರುದುರ್ಗ ಮುಂತಾದ ಸ್ಥಳಗಳನ್ನು ಕೂಡ ಆಕರ್ಷಕವಾಗಿ ಅಭಿವೃದ್ಧಿ ಮಾಡಲಾಗುವುದು. ಜತೆಗೆ, ಇದೇ 27ರಂದು  ಕೆಂಪೇಗೌಡರ ಜಯಂತಿಯನ್ನು ವಿಧಾನಸೌಧದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಅವರು ತಿಳಿಸಿದರು.

ಕೆಂಪೇಗೌಡರಿಗೆ ಸೂಕ್ತ ಗೌರವ ನೀಡುವ ಉದ್ದೇಶದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಬೃಹತ್ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಸಾವಿರಾರು ಕೆರೆಗಳನ್ನು ಪುನಶ್ಚೇತನಗೊಳಿಸುವ ಮತ್ತು ಅವುಗಳಿಗೆ ನೀರು ತುಂಬುವ ಕೆಲಸ ಮಾಡಲಾಗುವುದು. ಈ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಜೀವ ತುಂಬಲಾಗುವುದು ಎಂದು ಅಶ್ವಥ್ ನಾರಾಯಣ್ ಹೇಳಿದರು.

ಕೆಂಪೇಗೌಡರ ದೂರದೃಷ್ಟಿಯಿಂದಾಗಿ ಬೆಂಗಳೂರು ನಗರವು ಇಂದು ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಇಂತಹ ಕೀರ್ತಿ ಭಾರತದ ಬೇರಾವ ನಗರಗಳಿಗೂ ಇಲ್ಲ ಎಂದು ಅಶ್ವತ್ಥ ನಾರಾಯಣ್ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು. ಅದ್ಧೂರಿ ಕಾರ್ಯಕ್ರಮವನ್ನು ಅಯೋಜಿಸಿದ್ದ ಬಿಜೆಪಿ ಮುಖಂಡ ಎಚ್.ಎಂ.ಕೃಷ್ಣಮೂರ್ತಿ ಅವರು ಸ್ವಾಗತ ಕೋರಿದರು.

Key words: International award – name -Kempegowda -preservation -Magadi Fort.