ನಾಲ್ವಡಿ ಹೆಸರಿಗೆ ಅಪಸ್ವರದ ಅಪಚಾರ- ಸಂಸದ ಪ್ರತಾಪ್ ಸಿಂಹಗೆ ಟ್ವೀಟ್ ಮೂಲಕ ರಘು ಕೌಟಿಲ್ಯ ಟಾಂಗ್.

Promotion

ಮೈಸೂರು,ಜನವರಿ,7,2023(www.justkannada.in): ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ಕೃಷ್ಣರಾಜ ಒಡೆಯರ್  ಅವರ ಹೆಸರಿನ ಬದಲು ಕಾವೇರಿ ನದಿಯ ಹೆಸರನ್ನಿಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹಗ ಮೈಲಾಕ್ ಅಧ್ಯಕ್ಷ ರಘು ಕೌಟಿಲ್ಯ ಸರಣಿ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.

‘ನಾಲ್ವಡಿ ಹೆಸರಿಗೆ ಅಪಸ್ವರದ ಅಪಚಾರ’ ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಮಾಡಿರುವ ರಘು ಕೌಟಿಲ್ಯ, ಈ ಯುಗದಲ್ಲಿ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಿದ ಭಾರತದ ಏಕೈಕ ರಾಜ ಶ್ರೇಷ್ಠ ,ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಅವರ ಹೆಸರಿಗೆ ಸಾಟಿ ಎಂಬುದು ಯಾವುದೂ ಇಲ್ಲ.

ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ನಾಲ್ವಡಿಯವರ ಹೆಸರಿಡಬೇಕೆಂದು,ದೂರದೃಷ್ಠಿಯ ಆಡಳಿತಕ್ಕೆ ಹೆಸರಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ  ನಾಡಿನ ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣರವರೇ ಸ್ವಯಂ ಪ್ರೇರಣೆಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರಬರೆದು ಒತ್ತಾಯಿಸಿ, ನಾಲ್ವಡಿಯವರ ಕೊಡುಗೆಗಳು ಬೆಂಗಳೂರು-ಮೈಸೂರಿನ ಜನರ ಮನದಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ, ಹೆದ್ದಾರಿಗೆ ನಾಲ್ವಡಿ ಅವರ ಹೆಸರಿಡುವ ಮೂಲಕ ಅವರಿಗೆ ಕೃತಜ್ಞತಾ ಪೂರ್ವಕ ಗೌರವ ಸೂಚಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ. ಹಿರಿಯ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರವರು ಈ ಕುರಿತು ಬೆಂಬಲಿಸಿ ಮಾತನಾಡಿದ್ದಾರೆ.

ಇದಕ್ಕೆ ದನಿಗೂಡಿಸುವುದು ಸಂಸದ ಪ್ರತಾಪ್ ಸಿಂಹ ಅವರ ಕರ್ತವ್ಯವಾಗಬೇಕಿತ್ತು , ಅದು ಬಿಟ್ಟು ಕಾವೇರಿಗೆ ‘ಕನ್ನಂಬಾಡಿ ಅಣೆಕಟ್ಟು ಕೀರಿಟ’ತೊಡಿಸಿದ ಕೃಷ್ಣರಾಜ ಒಡೆಯರ್ ರವರ ಹೆಸರಿಗೆ ತಗಾದೆ ತೆಗೆಯುತ್ತಿರುವುದರ ಹಿನ್ನಲೆ ‘ಕಾವೇರಿ ಹೆಸರಿನ ಓಲೈಕೆ ರಾಜಕಾರಣಕ್ಕಾಗಿ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.

ನಾಲ್ವಡಿಯವರ ಹೆಸರನ್ನು ಬದಿಗೆ ಸರಿಸುವ ಉದ್ದೇಶದಿಂದ  ನದಿಗಳ ಕುರಿತ ಪಾಂಡಿತ್ಯ ಪ್ರದರ್ಶಿಸಿ ಕಾವೇರಿ ಹೆಸರಿನ ನಾಮಕರಣಕ್ಕಾಗಿ ಸಮರ್ಥನೆಗಿಳಿಯುವುದು ಮೂಲ ಮೈಸೂರಿಗರ ಆತ್ಮಭಿಮಾನವನ್ನು ಕೆಣಕಿದಂತಾಗುತ್ತದೆ ಹಾಗೂ ಎಸ್ ಎಂ.ಕೃಷ್ಣರಂಥಾ ಮುತ್ಸದ್ಧಿ ಹಾಗೂ ಮೇಧಾವಿ ರಾಜಕಾರಣಿಯನ್ನು ಅಪಮಾನಿಸಿದಂತಾಗುತ್ತದೆ ಎಂಬ ಅರಿವು ಸಂಸದರಿಗಿರಲಿ ಎಂದು ಕುಟುಕಿದ್ದಾರೆ.

ಹಿಮಾಲಯದೆತ್ತರದ ವ್ಯಕ್ತಿತ್ವದ, ಅಂತರಾಷ್ಟ್ರೀಯ ಮಾನ್ಯತೆಯ ಅರ್ಹತೆ ಹೊಂದಿರುವ ನಾಲ್ವಡಿಯವರನ್ನು ಸ್ಥಳೀಯ ಮಟ್ಟದ ವಿಮಾನ ನಿಲ್ದಾಣಕ್ಕೆ ಹೆಸರಿಟ್ಟು ನುಣುಚಿಕೊಳ್ಳುವ ಜಾಣತನದ ಪ್ರದರ್ಶನ ಬೇಡ. “ಕಾವೇರಿ ನಮ್ಮ ಜೀವನಾಡಿ ಅದನ್ನು ಮುಡಿಗೇರಿಸಿಕೊಂಡು ರಕ್ಷಿಸಿದವರು  ನಮ್ಮ ನಾಲ್ವಡಿ ಪ್ರಭುಗಳು”

ದಶಪಥ ಹೆದ್ದಾರಿಗೆ ಹೆಸರಿಡುವ ವಿಷಯದಲ್ಲಿ ಪ್ರತಿಷ್ಠೆ ಹಾಗೂ ರಾಜಕಾರಣ ತಿರುಗು ಬಾಣವಾದೀತು! “ಮೈಸೂರು ರಾಜಮನೆತನದ ಕೊಡುಗೆಗಳ ಉಪಕಾರ ಸ್ಮರಣೆ ನಮ್ಮ ನಿತ್ಯ ಮಂತ್ರ ,ಅದರ ಪ್ರತೀಕವಾಗಿ ಯದುವಂಶದ ಹೆಸರು ಎಲ್ಲೆಲ್ಲೂ ರಾರಾಜಿಸುತ್ತಿರಬೇಕು ಎಂದು ರಘುಕೌಟಿಲ್ಯ ತಿಳಿಸಿದ್ದಾರೆ.

Key words: Insult –Nalvadi- name – Raghu Kautilya -Tong – MP Pratap Simha.