ಮೈಸೂರಿನ ಶಾರದಾದೇವಿನಗರದಲ್ಲಿ ‘ಪರಿಸರ’ ಸಾವಯವ ಆಹಾರ ಮಾರಾಟ ಮಳಿಗೆ ಉದ್ಘಾಟನೆ

Promotion

ಸಾವಯವ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೇಕು: ಶಾಸಕ ಜಿ.ಟಿ.ದೇವೇಗೌಡ ಅಭಿಮತ

ಮೈಸೂರು: ಸಾವಯವ ಕೃಷಿ ಉತ್ಪನ್ನಗಳಿಗೆ ಬೆಂಬಲ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಮೈಸೂರಿನ ಶಾರದಾದೇವಿ ನಗರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ‘ಪರಿಸರ’ ಸಾವಯವ ಆಹಾರ ಮಾರಟ ಮಳಿಗೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಚಿನ ದಿನಗಳಲ್ಲಿ ಆರೋಗ್ಯದ ಕಾಳಜಿ ಜನರಲ್ಲಿ ಹೆಚ್ಚಾಗಿದೆ. ಹಾಗಾಗಿ, ಆಹಾರ ಸೇವನೆ ಹೇಗಿರಬೇಕು ಎಂಬುದನ್ನು ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಹಾಗಾಗಿ, ಸಾವಯವ ಆಹಾರ ಉತ್ಪನ್ನಗಳನ್ನು ಸೇವಿಸುವ ಪ್ರವೃತ್ತಿ ಹೆಚ್ಚಿದೆ. ಅದರಲ್ಲೂ ಸಿರಿಧಾನ್ಯಗಳನ್ನು ಬಳಸುವ ಅಭ್ಯಾಸ ಹೆಚ್ಚುತ್ತಿದೆ. ಈ ಕುರಿತು ಅರಿವನ್ನು ಮೂಡಿಸುವ ಕೆಲಸವನ್ನು ‘ಪರಿಸರ’ ಮಾದರಿಯ ಸಾವಯವ ಸಂಸ್ಥೆಗಳು ಮಾಡಬೇಕು ಎಂದು ಸಲಹೆ ನೀಡಿದರು.

ಕೃಷಿಕರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಡುವ ಕೆಲಸವಾಗಬೇಕು. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕೃಷಿಕರು ಹಾಗೂ ಗ್ರಾಹಕರ ನಡುವೆ ಸೇತುವೆಯನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದರು.

ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿದ ಆಹಾರ ಉತ್ಪನ್ನಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು. ಬದಲಿಗೆ ಕೊಟ್ಟಿಗೆ ಗೊಬ್ಬರ, ಜೀವಾಮೃತ ಬಳಸಿದ ಸಾವಯವ ಆಹಾರವನ್ನು ಬಳಸಬೇಕು ಎಂದು ಕಿವಿಮಾತು ಹೇಳಿದರು.

ಐಸಿಎಸ್‌ಎಸ್‌ಆರ‍್ ಹಿರಿಯ ಪ್ರಾಧ್ಯಾಪಕಿ ಫೆಲೊ ಡಾ.ಎನ್.ಉಷಾರಾಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಸಾವಯವ ಆಹಾರ ನಮಗೆ ಸಿಕ್ಕಿರುವ ವರ. ಅದನ್ನು ಬಳಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಈ ಮಳಿಗೆಯಲ್ಲಿ ಸಿರಿ ಧಾನ್ಯಗಳನ್ನು ಮಾರಾಟ ಮಾಡುವ ಮೂಲಕ ನಾಗರಿಕರು ಆರೋಗ್ಯಯುತ ಜೀವನವನ್ನು ಹೊಂದಲು ಸಹಕರಿಸುವುದು ನಮ್ಮ ಉದ್ದೇಶ. ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಊದಲು, ಬರಗು, ಕೊರಲೆಗಳನ್ನು ಇಲ್ಲಿ ಮಾರಾಟ ಮಾಡಲಾಗುವುದು. ಜತೆಗೆ ಸಾವಯವ ರಾಗಿ ಹಾಗೂ ಅಕ್ಕಿಯೂ ಇದೆ. ಯಾವುದೇ ಬಗೆಯ ರಾಸಾಯನಿಕ ಔಷಧ, ಕ್ರಿಮಿನಾಶಕ ಬಳಕೆಯಾಗದ ಪರಿಶುದ್ಧ ಸಾವಯವ ಕೃಷಿ ಉತ್ಪನ್ನಗಳನ್ನು ನೀಡುವುದು ನಮ್ಮ ಉದ್ದೇಶ ಎಂದು ಸಂಸ್ಥೆಯ ನಿರ್ದೇಶರಾದ ಎ.ಎಸ್.ಮೇಘಾ ತಿಳಿಸಿದರು.

ಸಿರಿ ಧಾನ್ಯಗಳು ಮಾತ್ರವೇ ಅಲ್ಲದೇ, ದೇಸಿ ತುಪ್ಪ, ಸಾವಯವ ಅಡುಗೆ ಎಣ್ಣೆಗಳು, ಸಾವಯವ ಜೇನಿನ ತುಪ್ಪ, ತಾಜಾ ಉಪ್ಪಿನಕಾಯಿ, ಜೋನಿ ಬೆಲ್ಲ, ಹುಡಿ ಬೆಲ್ಲ, ಬಕೆಟ್‌ ಬೆಲ್ಲ, ಸಾಂಬಾರ ಪುಡಿಗಳು, ಸಾವಯವ ಔಷಧಗಳು, ಸಾವಯವ ಚಹಾ, ಪಾರಂಪರಿಕ ಪುಸ್ತಕಗಳು ಹಾಗೂ ಕರಕುಶಲ ಸಾಮಗ್ರಿಗಳನ್ನೂ ಇಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.