ಎರಡು ತಿಂಗಳಲ್ಲಿ ಸಾಕಷ್ಟು ಸುಧಾರಣೆ : ಸಮಾಜಮುಖಿಯಾದ ರಾಮನಗರ ಜಿಲ್ಲಾ ವಾರ್ತಾ ಇಲಾಖೆ….

Promotion

ರಾಮನಗರ, ಮೇ.4,2019(www.justkannada.in): ರಾಮನಗರ ಜಿಲ್ಲಾ ವಾರ್ತಾ ಇಲಾಖೆ ಎರಡು ತಿಂಗಳಲ್ಲಿ ಸಾಕಷ್ಟು ಸುಧಾರಣೆ ಕಂಡು ಸಮಾಜಮುಖಿ ವಾರ್ತಾ ಇಲಾಖೆ ಎಂಬ  ಮಾತುಗಳು ಕೇಳಿ‌ ಬರುತ್ತಿವೆ.

ಮಾಧ್ಯಮಗಳು ಹಾಗೂ ಜಿಲ್ಲಾಡಳಿತದಿಂದ ವಾರ್ತಾ ಇಲಾಖೆ ದೂರವಾಗಿದೆ ಎಂಬ ದೂರುಗಳು ಕ್ರಮೇಣ ಬದಲಾಗಿ ಜನ  ಸ್ನೇಹಿ ವಾರ್ತಾ ಇಲಾಖೆ ಎಂದು ಹೆಸರು ಗಳಿಸಿದೆ. ಮಾಧ್ಯಮ ಹಾಗೂ ಸರ್ಕಾರದ ನಡುವೆ ಸೇತುವೆಯಂತೆ ಇರಬೇಕಿದ್ದ ರಾಮನಗರ ವಾರ್ತಾ ಇಲಾಖೆ ಬಗ್ಗೆ  ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ ಎಂಬ ಅಕ್ಷೇಪಗಳು ಕೇಳಿ ಬಂದಿದ್ದವು.  ಇತ್ತೀಚೆಗೆ ವಾರ್ತಾ ಇಲಾಖೆ ವಿನೂತನವಾಗಿ ಹಲವು ಕಾರ್ಯಕ್ರಮಗಳನ್ನು  ಆಯೋಜಿಸುವ ಮೂಲಕ ಜಿಲ್ಲಾಡಳಿತ  ಹಾಗೂ ಮಾಧ್ಯಮಗಳ ಪ್ರಶಂಸೆಗೆ ಪಾತ್ರವಾಗಿದೆ.

ಸರ್ಕಾರದ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ವಾರ್ತಾ ಇಲಾಖೆ ವಿನೂತನ  “ಜನಪರ ಮಾಹಿತಿ-ಮಾಧ್ಯಮ ಸಂವಾದ’, ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳ ಅಚ್ಚುಕಟ್ಟಾದ ವರದಿ ಬಿಡುಗಡೆ, ಚುನಾವಣೆ ಸಂದರ್ಭದಲ್ಲಿ ವಾರ್ತಾ ಇಲಾಖೆ ವಹಿಸಿದ ಪಾತ್ರ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಹಾಗೂ ಮಾಧ್ಯಮ‌ ಮಿತ್ರರೊಂದಿಗೆ  ಉತ್ತಮ ಬಾಂಧವ್ಯದಿಂದ ರಾಮನಗರ ಜಿಲ್ಲಾ  ವಾರ್ತಾ ಇಲಾಖೆ ಬಗ್ಗೆ ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಾರ್ತಾ ಇಲಾಖೆ ಮತ ಜಾಗೃತಿ ಕಾರ್ಯಕ್ರಮಗಳಲ್ಲಿ  ಪರಿಣಾಮಕಾರಿಯಾಗಿ ಪಾಲ್ಗೊಂಡು ಸ್ವೀಪ್ ಸಮಿತಿ ಜೊತೆ ಉತ್ತಮ ಬಾಂಧವ್ಯ ಹೊಂದಿ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ದೊರಕಿಸಿತು.  ಪ್ರತಿನಿತ್ಯ ಜಿಲ್ಲೆಯಲ್ಲಿ ನಡೆಯುವ ಚುನಾವಣಾ ಮತ ಜಾಗೃತಿ ಕಾರ್ಯಕ್ರಮಗಳು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ಪಡೆಯಿತು.

ಮಾಧ್ಯಮ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ವಾರ್ತಾ ಇಲಾಖೆ ಅಯೋಜಿಸಿದ್ದ ‘ಮತದಾರರೇ ಮರ್ಯಾದಸ್ಥರು’ ಎಂಬ ವಿನೂತನ ಆಂದೋಲನವನ್ನು ಹಲವು ಗ್ರಾಮಗಳಲ್ಲಿ ನಡೆಸಲಾಯಿತು. ಈ ಆಂದೋಲನದ ಬಗ್ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ‘ಪ್ರವಾಸಿಗರೇ ಮತದಾನ ಮರೆಯದಿರಿ’ ಎಂಬ ಫಲಕಗಳನ್ನು ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಿತ್ರ ಸಿಬ್ಬಂದಿ ಸಹಕಾರದೊಂದಿಗೆ ಪ್ರದರ್ಶಿಸಿ ಪ್ರವಾಸಿಗರಲ್ಲಿ ಅರಿವು ಮೂಡಿಸಿತು. ಈ ಕಾರ್ಯಕ್ರಮ ಕುರಿತು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕುಮಾರ್ ಪುಷ್ಕರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡಲು ರಾಜ್ಯದಲ್ಲೇ ಪ್ರಥಮ ಬಾರಿಗೆ ರಾಮನಗರ ಜಿಲ್ಲಾ ವಾರ್ತಾ ಇಲಾಖೆಯ ವಿನೂತನ “ಜನಪರ ಮಾಹಿತಿ-ಮಾಧ್ಯಮ ಸಂವಾದ” ಎಲ್ಲರ ಗಮನ ಸೆಳೆದಿದೆ. ಜಿಲ್ಲಾ ಮಟ್ಟದ ಅಧಿಕಾರಿಯನ್ನು ವಾರ್ತಾ ಇಲಾಖೆ ಕಚೇರಿಗೆ ಆಹ್ವಾನಿಸಿ ಅವರ ಇಲಾಖೆ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಮಾಹಿತಿ ಬಗ್ಗೆ ಪತ್ರಕರ್ತರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮ ಇದಾಗಿದೆ.

ಏಪ್ರಿಲ್ 30ರಂದು ಅಯೋಜಿಸಿದ್ದ  ಜನಪರ ಮಾಹಿತಿ ಮಾಧ್ಯಮ ಸಂವಾದದಲ್ಲಿ ಜಿಲ್ಲಾ ಅರೋಗ್ಯಾಧಿಕಾರಿ ಪಾಲ್ಗೊಂಡು ಹಲವು ಜನಪರ ಮಾಹಿತಿ ನೀಡಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.ಈ ಸಂವಾದ ಎಲ್ಲ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ದೊರೆತು ಜನರಿಗೆ ಸೌಲಭ್ಯಗಳ ಮಾಹಿತಿ ದೊರಕಿಸಿಕೊಡುವಲ್ಲಿ ಯಶಸ್ವಿಯಾಯಿತು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಸಹ ಇಂತಹ ಕಾರ್ಯಕ್ರಮಗಳು ಸಮಾಜಮುಖಿ ಎಂದಿದ್ದಾರೆ.

ಜಿಲ್ಲಾಧಿಕಾರಿಗಳ ಸಂಕೀರ್ಣದಲ್ಲಿರುವ ವಾರ್ತಾ ಇಲಾಖೆ ಕಚೇರಿಯನ್ನು ಪರಿಶೀಲಿಸಿದ  ಜಿಲ್ಲಾಧಿಕಾರಿಗಳು   ಇಲಾಖೆಯ ಉತ್ತಮ ಕಾರ್ಯಗಳನ್ನು ಪ್ರಶಂಸಿಸಿ ಕಚೇರಿಯನ್ನು ನವೀಕರಿಸಿಕೊಟ್ಟಿದ್ದಾರೆ. ಮಾರ್ಚ್ ತಿಂಗಳಲ್ಲಿ ರಾಮನಗರ ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ವರ್ಗಾವಣೆಯಾಗಿರುವ ಎಸ್  ಶಂಕರಪ್ಪ ಅವರು ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದರಿಂದ ವಾರ್ತಾ ಇಲಾಖೆ ಸಾರ್ವಜನಿಕವಾಗಿ ಮನ್ನಣೆಗೆ ಪಾತ್ರವಾಗಿದೆ.

Key words: improvement-Social face- Ramanagar –District- Information- Department