ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಐಎ ಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಗೆ ಕೋರಿದ ದಮನ್ ಮತ್ತು ಡಿಯು ಸಿಬ್ಬಂದಿ ವಿಭಾಗ

ನವದೆಹಲಿ:ಆ-29:(www.justkannada.in) ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಅಲ್ಲಿನ ಲಕ್ಷಾಂತರ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದ್ದಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರಿಗೆ ಅವರ ರಾಜೀನಾಮೆ ಅಂಗೀಕಾರವಾಗುವವರೆಗೆ ಕರ್ತವ್ಯದಲ್ಲಿ ಮುಂದುವರೆಯುವಂತೆ ಸೂಚಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ಡಿಯು ಹಾಗೂ ದಾದ್ರ ಮತ್ತು ನಗರ ಹವೇಲಿಯಲ್ಲಿ ಇಂಧನ, ನಗರಾಭಿವೃದ್ಧಿ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಣ್ಣನ್ ಗೋಪಿನಾಥನ್ ಆಗಸ್ಟ್​​ 21ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇನ್ನೊಬ್ಬರಿಗೆ ಉತ್ತರಿಸಲು ನಮಗೆ ಆತ್ಮ ಸಾಕ್ಷಿ ಅಗತ್ಯವಿದೆ, ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು ಎಂದು ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಬೇಸತ್ತು ರಾಜೀನಾಮೆ ಪತ್ರವನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದ್ದರು.

ಈಗ ದಮನ್ ಮತ್ತು ಡಿಯು ಸಿಬ್ಬಂದಿ ವಿಭಾಗ ರಾಜೀನಾಮೆ ಸ್ವೀಕರಿಸುವವರೆಗೆ ಕಚೇರಿಗೆ ಹಾಗೂ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದೆ. ದಾದ್ರಾ ಮತ್ತು ನಗರ ಹವೇಲಿಯ ರಾಜಧಾನಿ ಸಿಲ್ವಾಸ್ಸಾದಲ್ಲಿನ ಕಣ್ಣನ್ ವಾಸಿಸುತ್ತಿದ್ದ ಸರ್ಕಾರಿ ಅತಿಥಿಗೃಹವೊಂದರ ಕೋಣೆಯ ಬಾಗಿಲಿನ ಮೇಲೆ ಆ.27ರಂದು ಈ ಕುರಿತು ನೋಟಿಸ್ ಅಂಟಿಸಲಾಗಿದ್ದು, ದಮನ್ ಮತ್ತು ಡಿಯು ಸಿಬ್ಬಂದಿ ವಿಭಾಗದ ಉಪ ಕಾರ್ಯದರ್ಶಿ ಗುರ್‌ಪ್ರೀತ್ ಸಿಂಗ್ ಸಹಿ ಹಾಕಿದ್ದಾರೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ನಿಯಮಗಳ ಪ್ರಕಾರ, ನಿಮ್ಮ ರಾಜೀನಾಮೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ, ನಿಮ್ಮ ನಿಯೋಜಿತ ಕರ್ತವ್ಯಗಳಿಗೆ ತಕ್ಷಣ ಹಾಜರಾಗುವಂತೆ ನಿರ್ದೇಶಿಸಲಾಗಿದೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಣ್ಣನ್ ಗೋಪಿನಾಥನ್ ಅವರನ್ನು ಸಂಪರ್ಕಿಸಿದಾಗ ನೋಟಿಸ್ ಬಗ್ಗೆ ಗೊತ್ತಾಗಿದೆ ಎಂದು ತಿಳಿಸಿದ್ದು, ಹೆಚ್ಚಿನ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಕಣ್ಣನ್ ಗೋಪಿನಾಥ್ ರಾಜೀನಾಮೆ ಬಳಿಕ, ಅವರು ಕಾಶ್ಮೀರದಲ್ಲಿ “ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧ ” ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಯಸಿದ್ದರಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು ಆದರೆ ಅವರ ರಾಜೀನಾಮೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ, ಲಕ್ಷಾಂತರ ಜನರ ಮೂಲಭೂತ ಹಕ್ಕುಗಳನ್ನು 20 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಮತ್ತು ಭಾರತದಲ್ಲಿ ಅನೇಕರಿಗೆ ಇದು ಸರಿಯೆಂದು ತೋರುತ್ತದೆ. ಇದು ಭಾರತದಲ್ಲಿ 2019 ರಲ್ಲಿ ನಡೆಯುತ್ತಿದೆ.370 ನೇ ವಿಧಿ ಅಥವಾ ಅದನ್ನು ರದ್ದುಪಡಿಸುವುದು ಸಮಸ್ಯೆಯಲ್ಲ, ಆದರೆ ಇದಕ್ಕೆ ನಾಗರಿಕರು ಪ್ರತಿಕ್ರಿಯಿಸುವ ಹಕ್ಕನ್ನು ನಿರಾಕರಿಸುವುದು ಪ್ರಮುಖ ವಿಷಯವಾಗಿದೆ. ಅವರು ಈ ಕ್ರಮವನ್ನು ಸ್ವಾಗತಿಸಬಹುದು ಅಥವಾ ಪ್ರತಿಭಟಿಸಬಹುದು, ಅದು ಅವರ ಹಕ್ಕು “ಎಂದು ಗೋಪಿನಾಥನ್ ತಿಳಿಸಿದರು, ಈ ವಿಷಯವು ತಮಗೆ ರಾಜೀನಾಮೆ ನೀಡುವಷ್ಟು ಆಘಾತಗೊಳಿಸಿದೆ ಎಂದು ಹೇಳಿದ್ದರು ಎನ್ನಲಾಗಿದೆ. ಅಲ್ಲದೇ ನನ್ನ ರಾಜೀನಾಮೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಇನ್ನೊಬ್ಬರಿಗೆ ಉತ್ತರಿಸಲು ನಮಗೆ ಆತ್ಮ ಸಾಕ್ಷಿ ಅಗತ್ಯವಿದೆ. ಇದು ಅರ್ಧ ದಿನದ ಸುದ್ದಿಯಾಗಬಹುದು. ಆದರೆ, ನಾನು ಪೂರ್ಣ ಪ್ರಜ್ಞೆಯಿಂದಲೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು.

ಬೇರೆಯವರಿಗೆ ಧ್ವನಿಯಾಗಬೇಕು ಎಂಬ ಹಂಬಲದಿಂದ ನಾನು ಈ ಹುದ್ದೆ ಆಯ್ಕೆ ಮಾಡಿಕೊಂಡೆ. ಆದರೆ, ಇದರಲ್ಲಿ ನಾನು ವಿಫಲನಾಗಿದ್ದೇನೆ. ನನಗೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ಇದೇ ಕಾರಣದಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಣ್ಣನ್ ಗೋಪಿನಾಥನ್ ತಿಳಿಸಿದ್ದರು.

ಕೂಡ ಕರ್ತವ್ಯಕ್ಕೆ ಹಾಜರಾಗುವಂತೆ ಐಎ ಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಗೆ ಕೋರಿದ ದಮನ್ ಮತ್ತು ಡಿಯು ಸಿಬ್ಬಂದಿ ವಿಭಾಗ

IAS Officer Kannan Gopinathan Asked to Join Duty Immediately