ಮೈಸೂರಿಗಾಗಿ  ನಾನು 24/7 ಲಭ್ಯ: ನೂತನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್

Promotion

ಮೈಸೂರು, ಏಪ್ರಿಲ್ 10, 2020 (www.justkannada.in): ಮುಖ್ಯಮಂತ್ರಿಗಳು ನನಗೆ ನಿನ್ನೆ ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ ಕೊಟ್ಟಿದ್ದು, ಅವರನ್ನು ಶುಕ್ರವಾರ ಭೇಟಿಯಾಗಿ ಚರ್ಚೆ ನಡೆಸಿ ಸೀದಾ ಮೈಸೂರಿಗೆ ಧಾವಿಸಿದ್ದೇನೆ. ಇಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ ತುರ್ತು ಅಗತ್ಯಗಳಿಗೆ ಸ್ಪಂದಿಸುವಂತೆ ಸೂಚಿಸಿದ್ದೇನೆ ಎಂದು ಮಾನ್ಯ ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು ಹೇಳಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ, ಸಂಸದರು, ಶಾಸಕರು ಹಾಗೂ ಜನಪ್ರತಿನಿಗಳ ಕಾರ್ಯದ ಬಗ್ಗೆ ಮುಖ್ಯಮಂತ್ರಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ ಸಚಿವರು, ಎಲ್ಲರ ವಿಶ್ವಾಸವನ್ನು ತೆಗೆದುಕೊಂಡು ಮುನ್ನಡೆಯುವುದಾಗಿ ತಿಳಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನಾನೂ ಅಧಿಕಾರಿಗಳಂತೆ ಕಾರ್ಯನಿರ್ವಹಿಸುತ್ತಿದ್ದೇನೆ. 24/7 ನಾನು ಲಭ್ಯವಿರುತ್ತೇನೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ನನ್ನನ್ನು ಸಂಪರ್ಕಿಸಬಹುದು ಎಂದು ಇದೇ ವೇಳೆ ತಿಳಿಸಿದ್ದಾಗಿ ಮಾಹಿತಿ ನೀಡಿದರು .

ಈಗಾಗಲೇ ಅಧಿಕಾರಿಗಳ ಜೊತೆ ಹಾಗೂ ಜನಪ್ರತಿನಿಧಿಗಳ ಜೊತೆ ಮಾಹಿತಿ ಪಡೆದಿದ್ದೇನೆ. ಹೆಚ್ಚುವರಿ ಮಾಹಿತಿಗಾಗಿ ನಾಳೆ ಸಂಸದರು, ಶಾಸಕರು, ಎಂಎಲ್ಸಿ, ಜಿಲ್ಲಾ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಮೇಯರ್ ಸೇರಿದಂತೆ ಹಲವರ ಜೊತೆ ಸಭೆಯನ್ನು ನಡೆಸುತ್ತಿದ್ದೇನೆ. ಅಲ್ಲಿ ಮಾಹಿತಿ ಪಡೆದು ಮುಂದಿನ ತೀರ್ಮಾನವನ್ನು ಹೇಳುತ್ತೇನೆ ಎಂದು ಸಚಿವರು ತಿಳಿಸಿದರು.

ಅಲ್ಲದೆ ಮೈಸೂರು ಎಪಿಎಂಸಿ ಸ್ಥಿತಿಗತಿಯನ್ನು ಪರಿಶೀಲಿಸಲು ಶನಿವಾರ ಬೆಳಗ್ಗೆ 7.30ಕ್ಕೆ ಭೇಟಿ ನೀಡಲಿದ್ದೇನೆ. ಬಳಿಕ ಅಧಿಕಾರಿಗಳ ಸಭೆ ನಡೆಸಿ, ನಂಜನಗೂಡಿಗೆ ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಅಲ್ಲಿನ ವರದಿ ಆಧರಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರೈತರು ಹಾಗೂ ವರ್ತಕರಿಗೆ ಸಹ ಯಾವುದೇ ರೀತಿಯ ತೊಂದರೆಯಾಗದಂತೆ ಇಲ್ಲಿನ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದಾಗಿ ಮಾಹಿತಿ ಪಡೆದಿದ್ದೇನೆ. ಇನ್ನು ರೇಷನ್ ಕಾರ್ಡ್ ಸಮಸ್ಯೆ ಇದ್ದಲ್ಲಿ ಎರಡು ದಿನಗಳಲ್ಲಿ ಬಗೆಹರಿಸುವುದಾಗಿ ಸರಕಾರ ತೀರ್ಮಾನ ತಿಳಿದುಕೊಂಡಿದೆ. ಈಗಾಗಲೇ ರಾಜ್ಯಾದ್ಯಂತ 2.5 ಲಕ್ಷ ಜನ ಬಿಪಿಎಲ್ ಕಾರ್ಡಿಗಾಗಿ ಅರ್ಜಿ ಹಾಕಿದ್ದಾರೆ. ಅಂಥವರಿಗೆ ಸಹ ಪಡಿತರವನ್ನು ವಿತರಿಸಲು ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದರು.

ನಾಳೆ ರಾತ್ರಿ ಎಂಟು ಗಂಟೆಗೆ ಪ್ರಧಾನಮಂತ್ರಿಗಳು ಮಾತನಾಡಲಿದ್ದು ಅವರ ಮಾತಿನ ಬಳಿಮ ಮುಖ್ಯಮಂತ್ರಿಗಳು ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಲಾಕ್ ಡೌನ್ ರಾಜ್ಯವ್ಯಾಪಿ ಮಾಡಲಾಗಿದ್ದು, ಯಾವುದೋ ಒಂದೊಂದು ಜಿಲ್ಲೆಗಳನ್ನು ಅದರಿಂದ ಮುಕ್ತಿಗೊಳಿಸಲು ಆಗುವುದಿಲ್ಲ. ಇದರ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಸಚಿವರು ತಿಳಿಸಿದರು.

ಯಾವುದೇ ಕಾರಣಕ್ಕೂ ಜನ ಭಯಪಡುವುದು ಬೇಡ. ಸದ್ಯಕ್ಕಂತೂ ಸರ್ಕಾರದ ಮುಂದೆ ಸೀಲ್ ಡೌನ್ ಪ್ರಸ್ತಾಪ ಇಲ್ಲ. ಸದ್ಯಕ್ಕೆ ಆ ತೀರ್ಮಾನ ತೆಗೆದುಕೊಂಡಿಲ್ಲ. ತರಕಾರಿ, ದಿನಸಿ, ಮೆಡಿಕಲ್ ಶಾಪ್ ಸೇರಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದೇ ಇರುತ್ತದೆ. ಜನ ಭಯಪಡುವ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಸಭೆಯ ಬಳಿಕ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಸಚಿವರು, ದುಷ್ಟ ಕರೋನಾ ವೈರಸ್ ನಿಂದ ಜನತೆಯನ್ನು ಕಾಪಾಡು  ಎಂದು ಸಚಿವರು ದೇವಿಯಲ್ಲಿ ಪ್ರಾರ್ಥಿಸಿದರು.