ಈ ವರ್ಷದ 2ನೇ ಬೃಹತ್ ಲೋಕ ಅದಾಲತ್ ಮೂಲಕ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಇತ್ಯರ್ಥ- ಎಂ.ಎಲ್ ರಘುನಾಥ್

ಮೈಸೂರು,ಜೂನ್,25,2022(www.justkannada.in): ಈ ವರ್ಷದ 2ನೇ ಬೃಹತ್ ಲೋಕ ಅದಾಲತ್ ಮೂಲಕ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್ ರಘುನಾಥ್ ಹೇಳಿದರು.

ಈ ಕುರಿತು ಮಾತನಾಡಿದ ಎಂ.ಎಲ್ ರಘುನಾಥ್, ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿ ಒಟ್ಟು 1,50,633 ಪ್ರಕರಣಗಳು ವಿಚಾರಣೆ ನಡೆಸಲಾಗಿದೆ. ಈ ಪೈಕಿ 59059 ಸಿವಿಲ್ ಪ್ರಕರಣಗಳು, 91,574 ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆದಿದೆ. ಸದರಿ ಪ್ರಕರಣಗಳಲ್ಲಿ 70,281 ಪ್ರಕರಣಗಳು ಇತ್ಯರ್ಥವಾಗುವ ಸಂಭವವಿದೆ. ಈಗಾಗಲೇ 52695 ಪ್ರಕರಣಗಳನ್ನು ರಾಜಿ ಆಗುವ ಸಾಧ್ಯವಿರುವ ಪ್ರಕರಣಗಳೆಂದು ಪರಿಗಣನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಮೈಸೂರು ನ್ಯಾಯಾಲಯದಲ್ಲಿ 98 ಕೌಟುಂಬಿಕ ಕಲಹದ ಪ್ರಕರಣಗಳು ಇತ್ಯರ್ಥವಾಗಿದೆ.  18 ದಂಪತಿಗಳು ಕಲಹವನ್ನು ಮರೆತು ಲೋಕ್ ಅದಾಲತ್ ನಲ್ಲಿ ರಾಜಿಯಾಗಿದ್ದಾರೆ. ಈ ಬಾರಿ ವಿಶೇಷವಾಗಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥವಾಗಿದ್ದು, 45 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಇನ್ನು  ತಂದೆ ಮಗಳ ನಡುವೆ ಇದ್ದ ವಿಶೇಷ ಪ್ರಕರಣವೂ ಲೋಕ್ ಅದಾಲತ್ ಮೂಲಕ ಇತ್ಯರ್ಥವಾಗಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿಯಲ್ಲಿದ್ದ ತಂದೆಯನ್ನು ಸಂಪರ್ಕಿಸಿ ರಾಜಿ ಮಾಡಲಾಗಿದೆ. ತಾಯಿ ಸತ್ತ ಬಳಿಕ ತಂದೆಯು ಮಗಳ ಜವಾಬ್ದಾರಿ ಹೊರದೆ ಅಜ್ಜಿ ಮನೆಯಲ್ಲಿ ಬಿಟ್ಟು ಹೋಗಿದ್ದರು. ಹೀಗಾಗಿ ತಂದೆಯಿಂದ ಜೀವನಾಂಶ ಕೋರಿ  ಮಗಳು ಕೋರ್ಟ್ ಮೆಟ್ಟಿಲೇರಿದ್ದಳು. ಕೊನೆಗೆ ಲೋಕ್ ಅದಾಲತ್ ನಲ್ಲಿ  ಇದು ಇತ್ಯರ್ಥವಾಗಿದೆ ಎಂದು ಎಂ ಎಲ್ ರಘುನಾಥ್ ಹೇಳಿದರು.

Key words: highest number – cases -Mysore district – Lok Adalat-ML Raghunath