ಹೇಮಾವತಿ ಜಲಾಶಯ ಖಾಲಿ, ಖಾಲಿ

Promotion

ಹಾಸನ:ಮೇ-5: ಕಾವೇರಿ ಕಣಿವೆಯ ಪ್ರಮುಖ ಜಲಾಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ, ಹಾಸನ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶ ಮತ್ತು ಕುಡಿಯುವ ನೀರಿಗೆ ಆಧಾರ. ಸತತ ನಾಲ್ಕು ವರ್ಷಗಳ ಬಳಿಕ 2018ರ ಜೂನ್‌ ಅಂತ್ಯದಲ್ಲಿ ಭರ್ತಿಯಾಗಿತ್ತು.

ಈಗ ಬಹುತೇಕ ಬರಿದಾಗಿದೆ. ಹಾಗಾಗಿ, ಅಚ್ಚುಕಟ್ಟು ಪ್ರದೇಶದ ಬೇಸಿಗೆ ಬೆಳೆಗೆ ನೀರು ಹರಿಸುತ್ತಿಲ್ಲ. ಆದರೆ, ಹಾಸನ ನಗರಕ್ಕೆ ಕುಡಿಯುವ ನೀರು, ಪ್ರಾಣಿ, ಪಕ್ಷಿ ಹಾಗೂ ಜಲಚರಗಳಿಗೆ ಕುಡಿಯಲು ನದಿಯಲ್ಲಿ ಹರಿಸಬಹುದಾದಷ್ಟು ನೀರು ಈಗಲೂ ಜಲಾಶಯದಲ್ಲಿದೆ.

ಹಾಸನ ತಾಲೂಕು ಗೊರೂರಿನ ಬಳಿಯಿರುವ ಹೇಮಾವತಿ ಜಲಾಶಯದಲ್ಲಿ ಈಗ 5.09 ಟಿಎಂಸಿ ನೀರಿನ ಸಂಗ್ರಹವಿದೆ. ಅದರಲ್ಲಿ, ನಾಲೆಗೆ ಹರಿಸಬಹುದಾದ ನೀರು 0.72 ಟಿಎಂಸಿ ಮಾತ್ರ. ಜಲಾಶಯದಲ್ಲಿರುವ 5.09 ನೀರಿನಲ್ಲಿ 3.70 ಟಿಎಂಸಿವರೆಗೂ ಬಳಸಿಕೊಳ್ಳಬಹುದು.

ಹಾಗಾಗಿ, ಹಾಸನ ನಗರ ಸೇರಿ ನದಿ ಪಾತ್ರದಲ್ಲಿ ಕುಡಿಯುವ ನೀರಿಗೆ ಆತಂಕ ಪಡುವ ಅಗತ್ಯವಿಲ್ಲ. ಹೇಮಾವತಿ ಜಲಾಶಯದ ಗರಿಷ್ಠ ಸಂಗ್ರಹಣಾ ಸಾಮರ್ಥಯ 37.10 ಟಿಎಂಸಿ ಮಾತ್ರ. ಈ ವರ್ಷ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಕ್ಕೆ 105 ಟಿಎಂಸಿಗೂ ಹೆಚ್ಚು ನೀರು ಹರಿದು ಬಂದಿದೆ.

ಆದರೆ ಅದನ್ನು ಹಿಡಿದಿಟ್ಟುಕೊಳ್ಳಲಾಗದೆ ನದಿಯಲ್ಲಿ ಪ್ರವಾಹವಾಗಿ ಹರಿದು ಹೋಗಿದೆ. ನಾಲೆಗಳ ಮೂಲಕ ಸುಮಾರು 50 ಟಿಎಂಸಿ ನೀರು ಮಾತ್ರ ಬಳಕೆಯಾಗಿದೆ. ಹಾಸನ ನಗರಕ್ಕೆ ಕುಡಿಯಲು 0.15 ಟಿಎಂಸಿ ಸಾಕು. ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 25.31 ಟಿಎಂಸಿ ನೀರು ಹಂಚಿಕೆಯಾಗಿದ್ದು,

ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ 18.36 ಟಿಎಂಸಿ ನೀರು ಹಂಚಿಕೆಯಾಗಿದೆ. ತುಮಕೂರು ಜಿಲ್ಲೆಗೆ ಈ ವರ್ಷ 25.47 ಟಿಎಂಸಿ ನೀರು ಹರಿದಿದೆ. ಒಟ್ಟು 4 ಜಿಲ್ಲೆಗಳಲ್ಲಿ 7.08 ಲಕ್ಷ ಎಕರೆ ಅಚ್ಚುಕಟ್ಟು ಹೊಂದಿರುವ ಹೇಮಾವತಿ ಯೋಜನೆಯಲ್ಲಿ ತುಮಕೂರು ಜಿಲ್ಲೆ ಪಾಲು 3,17,672 ಎಕರೆಗಳು.

ಹಾಸನ ಜಿಲ್ಲೆ 1,55,030 ಎಕರೆ, ಮಂಡ್ಯ ಜಿಲ್ಲೆ 2,30,585 ಎಕರೆ, ಮೈಸೂರು ಜಿಲ್ಲೆಯ ಅಚ್ಚುಕಟ್ಟು ಪ್ರದೇಶ 5665 ಎಕರೆಗಳು. ಹೇಮಾವತಿ ಎಡದಂಡೆ ನಾಲೆ (ಎ.ಜಿ.ರಾಮಚಂದ್ರರಾವ್‌ ನಾಲೆ) ಈ ಯೋಜನೆಯ ಬಹುದೊಡ್ಡ ನಾಲೆಯಾಗಿದ್ದು, ಹಾಸನ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಅಚ್ಚುಕಟ್ಟು ಪ್ರದೇಶ ಹೊಂದಿದ್ದರೆ,

ಬಲದಂಡೆ ನಾಲೆ (ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ನಾಲೆ) ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ, ಬಲ ಮೇಲ್ದಂಡೆ ನಾಲೆ (ಬೋರಣ್ಣಗೌಡ ನಾಲೆ) ಅರಕಲಗೂಡು ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ ಅಚ್ಚಕಟ್ಟು ಪ್ರದೇಶ ಹೊಂದಿದೆ.

ಜಲಾಶಯ ನೀರಿನ ಮಟ್ಟ: (04-05-2019) (ಆವರಣದಲ್ಲಿರುವುದು ಕಳೆದ ವರ್ಷದ ನೀರಿನ ಮಟ್ಟ)
-ಗರಿಷ್ಠ ಮಟ್ಟ – 2922 ಅಡಿಗಳು
-ಇಂದಿನ ಮಟ್ಟ -2865.25 ಅಡಿಗಳು (2863.55 ಅಡಿ)
-ಒಳ ಹರಿವು – 58 ಕ್ಯೂಸೆಕ್‌. ( 22 ಕ್ಯೂಸೆಕ್‌)
-ಹೊರ ಹರಿವು ನದಿಗೆ -200 ಕ್ಯೂಸೆಕ್‌ ( 200 ಕ್ಯೂಸೆಕ್‌)

ಹಾಸನ ನಗರ ಸೇರಿ ಹೇಮಾವತಿ ನದಿ ಪಾತ್ರದ ಯಾವುದೇ ಪಟ್ಟಣಗಳಿಗೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಕುಡಿಯವ ನೀರಿಗೆ ಸಾಕಷ್ಟು ಸಂಗ್ರಹವಿದೆ. ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ 4 ವರ್ಷಗಳ ನಂತರ ಜಲಾಶಯ ಭರ್ತಿಯಾಯಿತು. ಅಚ್ಚುಕಟ್ಟು ಪ್ರದೇಶಕ್ಕೆ ಸಮೃದ್ಧವಾಗಿ ನೀರು ಹರಿಯಿತು. ಆದರೆ, ಹಿಂಗಾರು ಹಂಗಾಮಿನಲ್ಲಿ ಮಳೆಯಾಗದಿದ್ದರಿಂದ ಜಲಾಶಯಕ್ಕೆ ನೀರು ಬರಲಿಲ್ಲ. ಹಾಗಾಗಿ, ಬೇಸಿಗೆ ಬೆಳೆಗೆ ನೀರು ಕೊಡಲಾಗಲಿಲ್ಲ.
-ಶ್ರೀನಾಥ್‌, ಎಇಇ, ಹೇಮಾವತಿ ಅಣೆಕಟ್ಟು ವಿಭಾಗ.
ಕೃಪೆ:ಉದಯವಾಣಿ

ಹೇಮಾವತಿ ಜಲಾಶಯ ಖಾಲಿ, ಖಾಲಿ
hemavathi-reservoir-is-empty