ಕಿಷ್ಕಿಂಧೆಯಂತಿದೆ ಹೆಬ್ಬಾಳ ಠಾಣೆ !

kannada t-shirts

ಬೆಂಗಳೂರು:ಜುಲೈ-7: ಹೆಬ್ಬಾಳ ಪೊಲೀಸ್‌ ಠಾಣೆ ಅಕ್ಷರಶಃ ಕಿಷ್ಕಿಂಧೆಯಂತಿದ್ದು, ಪೊಲೀಸ್‌ ಸಿಬ್ಬಂದಿ, ದೂರುದಾರರು ಕುಳಿತುಕೊಳ್ಳಲು ಕೂಡ ಜಾಗವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಇದೆ.

ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಇರುವ ಹಳೆಯ ಕಟ್ಟಡದಲ್ಲಿ ಹೆಬ್ಬಾಳ ಠಾಣೆ ಕಾರ್ಯಾಚರಿಸುತ್ತಿದೆ. ಹೆದ್ದಾರಿಯಿಂದ 3 ಅಡಿಯಷ್ಟು ಇಳಿದು ಠಾಣೆ ಪ್ರವೇಶಿಸಬೇಕು. ಒಳ ಪ್ರವೇಶಿಸುತ್ತಿದ್ದಂತೆ ಕಿರಿದಾದ ಕೊಠಡಿಯಲ್ಲಿ ಎರಡ್ಮೂರು ಟೇಬಲ್‌ಗಳನ್ನು ಇರಿಸಲಾಗಿದೆ. ಠಾಣೆಯ ದೂರುಗಳ ಡೈರಿ ಎಂಟ್ರಿ, ವೈರ್‌ಲೆಸ್‌, ದೂರು ಸ್ವೀಕರಿಸುವ ಸಿಬ್ಬಂದಿ ಕುಳಿತುಕೊಳ್ಳುವ ಕುರ್ಚಿ ಮತ್ತು ಟೇಬಲ್‌ ಇಲ್ಲಿವೆ. ಕಡತಗಳನ್ನು ಇದೇ ಕೊಠಡಿಯಲ್ಲಿ ಇಡಲಾಗುತ್ತಿದೆ. ಟೇಬಲ್‌ಗಳ ನಡುವೆ ಒಬ್ಬ ವ್ಯಕ್ತಿ ಮಾತ್ರ ಓಡಾಡುವಷ್ಟು ಜಾಗವಿದೆ. ಈ ಕೊಠಡಿಗೆ ಹೊಂದಿಕೊಂಡಂತೆ ಆರೋಪಿಗಳನ್ನು ಇರಿಸುವ ಸೆಲ್‌ ಇದೆ. ದೂರು ನೀಡಲು ಬಂದವರು ಮತ್ತು ಪೊಲೀಸರು ಏನೇ ಮಾತನಾಡಿದರೂ ಸೆಲ್‌ನಲ್ಲಿ ಇರುವ ಆರೋಪಿಗಳಿಗೆ ಕೇಳಿಸುತ್ತದೆ. ದೂರು ನೀಡುವವರು ಬರುವವರಿಗಾಗಿ ಒಂದು ಟೇಬಲ್‌ ಕುರ್ಚಿ ಇದೆ. ದೂರು ನೀಡಲು ಯಾರಾದರೆ ಬಂದರೆ ಸಿಬ್ಬಂದಿ ಎದ್ದು ನಿಂತಿರಬೇಕಾದ ಪರಿಸ್ಥಿತಿ ಇದೆ.

ಕೊಠಡಿಯ ಬಾಗಿಲನಿಂದ ಒಳ ಪ್ರವೇಶಿಸಿದರೆ ಮತ್ತೆರಡು ಕೊಠಡಿಗಳು ಇವೆ. ಇವುಗಳಲ್ಲಿ ಕಡತಗಳು ಇರುವ ರಾರ‍ಯಕ್‌, ಕಂಪ್ಯೂಟರ್‌ಗಳು ಇವೆ. ಅಲ್ಲಿ ಒಂದೆರೆಡು ಟೇಬಲ್‌ ಹಾಗೂ ಕುಳಿತುಕೊಳ್ಳಲು ಕುರ್ಚಿ ಇವೆ. ಆದರೆ, ಸಿಬ್ಬಂದಿ ಅತ್ತಿಂದಿತ್ತ ಓಡಾಡಲು ಕೂಡ ಜಾಗವಿಲ್ಲ. ಇನ್ನು ಪೊಲೀಸ್‌ ಇನ್ಸ್‌ಪೆಕ್ಟರ್‌ ಕೊಠಡಿ ಠಾಣೆಯ ಮುಖ್ಯಭಾಗದಿಂದ ಹೊರಗಿದೆ. ಅದೇ ರೀತಿ ಮತ್ತೊಂದು ಬದಿಯಲ್ಲಿ ಎಸ್‌ಐಗಳ ಕೊಠಡಿ ಇದೆ. ಅದರ ಪಕ್ಕದಲ್ಲೇ ಸಿಬ್ಬಂದಿಗೆ ಎರಡು ಶೌಚಗೃಹಗಳಿವೆ.

ಶಾಲೆ ಆವರಣದಲ್ಲಿ ರೋಲ್‌ಕಾಲ್‌:

ಠಾಣೆಯ ಅಧಿಕಾರಿ, ಗಸ್ತು ಕರ್ತವ್ಯಕ್ಕೆ ಕಳುಹಿಸಲು ತೆಗೆದುಕೊಳ್ಳುವ ಹಾಜರಾತಿ, ನಿಯೋಜನೆ ಪ್ರಕ್ರಿಯೆ(ರೋಲ್‌ಕಾಲ್‌) ಮಾಡಲು ಕೂಡ ಜಾಗವಿಲ್ಲ. ಏಕ ಕಾಲದಲ್ಲಿ ಐದಾರು ಜನ ನಿಲ್ಲಲು ಆಗುವುದಿಲ್ಲ. ಹೀಗಾಗಿ, ಹೆಚ್ಚಿನ ಸಿಬ್ಬಂದಿ ಇದ್ದ ಸಂದರ್ಭದಲ್ಲಿ ಅವರನ್ನು ಪಕ್ಕದ ಸರಕಾರಿ ಶಾಲೆಯ ಆವರಣಕ್ಕೆ ಕರೆದೊಯ್ದು ಹಾಜರಾತಿ ಪ್ರಕ್ರಿಯೆ ನಡೆಸಬೇಕು ಇಲ್ಲವೇ ಕಟ್ಟಡದ ಮೇಲ್ಭಾಗಕ್ಕೆ ಹೋಗಬೇಕು. ಕೆಲವೊಮ್ಮೆ ಕಿರಿದಾದ ಜಾಗದಲ್ಲೇ ಕರ್ತವ್ಯಕ್ಕೆ ನಿಯೋಜನೆ ಪ್ರಕ್ರಿಯೆ ನಡೆಸಲಾಗುತ್ತದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದಾಗ ಅವರನ್ನು ಬೇರೆ ಪೊಲೀಸ್‌ ಠಾಣೆಗಳಿಗೆ ಕರೆದೊಯ್ದು ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಇದೆ.

ಲಾಕರ್‌ ಆದ ಸೆಲ್‌ !

ಜಪ್ತಿ ಮಾಡಿಕೊಂಡಿರುವ ವಸ್ತುಗಳು ಸೇರಿದಂತೆ ಠಾಣೆಯ ಮಹತ್ವದ ದಾಖಲೆಗಳನ್ನು ಇರಿಸಲು ಸೂಕ್ತ ಲಾಕರ್‌ ವ್ಯವಸ್ಥೆ ಇಲ್ಲ. ಹೀಗಾಗಿ, ಇರುವ ಎರಡು ಸೆಲ್‌ಗಳ ಪೈಕಿ ಒಂದು ಸೆಲ್‌ ಅನ್ನು ಲಾಕರ್‌ ಆಗಿ ಪರಿವರ್ತಿಸಿ ದಾಖಲೆಗಳನ್ನು ಇರಿಸಲು ಬಳಕೆ ಮಾಡಲಾಗುತ್ತಿದೆ.

ಹೆದ್ದಾರಿ ನಿರ್ಮಾಣಕ್ಕೆ ಅರ್ಧ ಜಾಗ ಬಳಕೆ

ಹೆದ್ದಾರಿ ನಿರ್ಮಾಣಕ್ಕಾಗಿ ಈ ಹಿಂದೆ ಠಾಣೆ ಕಟ್ಟಡದ ಅರ್ಧದಷ್ಟು ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರಿಂದ ಠಾಣೆ ಜಾಗ ಕಿರಿದಾಗಿದೆ. ಹೊಸ ಜಾಗವನ್ನು ನೋಡಿ ಅಲ್ಲಿ ಠಾಣೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿತ್ತು. ಅದಕ್ಕಾಗಿ ಹೆಬ್ಬಾಳ ಫ್ಲೈಓವರ್‌ ಬಳಿಯೇ ಒಂದು ಜಾಗ ಗುರುತಿಸಲಾಗಿತ್ತು. ಆದರೆ, ಅದು ಕೂಡ ಹೆದ್ದಾರಿ ಮತ್ತು ಫ್ಲೈಓವರ್‌ ನಿರ್ಮಾಣ, ರಸ್ತೆ ವಿಸ್ತರಣೆ ಕಾರ್ಯಕ್ಕೆ ಬೇಕಾಗಿರುವ ಕಾರಣ ನೀಡಲಾಗದು ಎಂದು ಬಿಬಿಎಂಪಿ ಹೇಳಿದೆ. ಹೀಗಾಗಿ, ಠಾಣೆಗೆ ಹೊಸ ಜಾಗಕ್ಕಾಗಿ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಫುಟ್‌ಪಾತ್‌ ಮೇಲೆ ಜಪ್ತಿ ವಾಹನಗಳು

ಜಪ್ತಿ ಮಾಡಿರುವ ವಾಹನಗಳನ್ನು ನಿಲುಗಡೆ ಮಾಡಲು ಜಾಗವಿಲ್ಲದೇ ಪಾದಚಾರಿ ಮಾರ್ಗದ ಮೇಲೆ ನಿಲ್ಲಿಸಲಾಗಿದೆ. ಹೀಗಾಗಿ, ಪಾದಚಾರಿಗಳು ರಸ್ತೆಯಲ್ಲಿ ನಡೆದಾಡುವಂತಾಗಿದೆ.

ಮಳೆ ಬಂದರೆ ಕಡತ, ಕಂಪ್ಯೂಟರ್‌ ಕಾಯುವ ಕೆಲಸ

ಠಾಣೆ ಕಟ್ಟಡ ನೆಲಮಟ್ಟದಿಂದ ಕೆಳಗೆ ಇರುವ ಕಾರಣ ಮಳೆ ಬಂದಾಗ ನೀರ ಹನಿ ಕಿಟಕಿ ಮೂಲಕ ಒಳ ಪ್ರವೇಶಿಸುತ್ತವೆ. ನೀರು ಒಳಬಂದು ಕಡತಗಳು, ಕಂಪ್ಯೂಟರ್‌ಗಳಿಗೆ ಹಾನಿ ಆಗದಂತೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ.
ಕೃಪೆ:ವಿಜಯಕರ್ನಾಟಕ

ಕಿಷ್ಕಿಂಧೆಯಂತಿದೆ ಹೆಬ್ಬಾಳ ಠಾಣೆ !
hebbal police station too conjusted

website developers in mysore