ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಆರೋಗ್ಯ ಸಚಿವರ ಅನುಮೋದನೆ.

Promotion

ಬೆಂಗಳೂರು ಮೇ 20, 2022 (www.justkannada.in): ಕರ್ನಾಟಕದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಸ್ಥಾಪನೆಗೆ ಕೇಂದ್ರ ಆರೋಗ್ಯ ಸಚಿವ ಡಾ. ಮನ್‌ಸುಖ್ ಮಾಂಡವಿಯಾ ಅವರು ಬುಧವಾರದಂದು ಹಸಿರು ನಿಶಾನೆ ನೀಡಿದರು. ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಕೇಂದ್ರ ಆರೋಗ್ಯ ಸಚಿವರಾದ ಮಾಂಡವಿಯಾ ಅವರು ನವ ದೆಹಲಿಯಲ್ಲಿ ಬುಧವಾರದಂದು ನಡೆಸಿದ ಸಭೆ ಹಾಗೂ ಚರ್ಚೆಯಲ್ಲಿ ಈ ಬೆಳವಣಿಗೆಯಾಗಿದೆ.

ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಈ ಹಿಂದೆ ಕರ್ನಾಟಕದಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣ ಮೂಲಭೂತಸೌಕರ್ಯಗಳ ಅಭಿವೃದ್ಧಿಗಾಗಿ ಎಐಐಎಂಎಸ್ ಅನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಎಐಐಎಂಎಸ್ ಸ್ಥಾಪನೆಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದರು.

“ಕರ್ನಾಟಕದಲ್ಲಿ ಎಐಐಎಂಎಸ್ ಸ್ಥಾಪಿಸುವ ಸಂಬಂಧ ಆಶ್ವಾಸನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವ ಮನ್‌ ಸುಖ್ ಮಾಂಡವಿಯಾ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇದು ನಮ್ಮ ರಾಜ್ಯಕ್ಕೆ ಬಹಳ ದೊಡ್ಡ ಲಾಭವಾಗಲಿದೆ. ರಾಜ್ಯದ ಆರೋಗ್ಯ ಹಾಗೂ ವೈದ್ಯಕೀಯ ಮೂಲಭೂತಸೌಕರ್ಯ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ,” ಎಂದು ಸುಧಾಕರ್ ವಿವರಿಸಿದರು.

ಹೊಸ ನಿಮ್ಹಾನ್ಸ್ ಪಾಲಿಟ್ರೌಮಾ ಕೇಂದ್ರ ಹಾಗೂ ಪಿಜಿ ಇನ್ಸ್ಟಿಟ್ಯೂಟ್ ಸ್ಥಾಪಿಸುವ ಸಂಬಂಧ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಹಣಕಾಸು ಸ್ಥಾಯಿ ಸಮಿತಿಗೆ (ಎಸ್‌ಎಫ್‌ಸಿ) ಸಲ್ಲಿಸುರುವುದಾಗಿಯೂ ಇದೇ ಸಂದರ್ಭದಲ್ಲಿ ಡಾ. ಕೆ. ಸುಧಾಕರ್ ಘೋಷಿಸಿದರು. “ಈ ಹೊಸ ಸಂಸ್ಥೆ ಅನುಮೋದನೆಯಾದರೆ, ಬೆಂಗಳೂರಿನ ಹೆಣ್ಣೂರು ಮುಖ್ಯರಸ್ತೆಯ ಕ್ಯಾಲಸನಹಳ್ಳಿಯಲ್ಲಿ ಸ್ಥಾಪನೆಯಾಗಲಿದೆ. ೨೦೨೧ರಲ್ಲಿ ಕರ್ನಾಟಕ ಸರ್ಕಾರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ ಎಸ್‌ಎಫ್‌ಸಿಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೆ ಎಸ್‌ಎಫ್‌ಸಿ, ಪಿಜಿ ತರಬೇತಿಗೆ ನಿಮ್ಹಾನ್ಸ್ ನಲ್ಲಿ ಲಭ್ಯವಿರುವ ತಜ್ಞತೆಯ ಕಡೆ ಗಮನಕೇಂದ್ರೀಕರಿಸುವಂತೆ ತಿಳಿಸಿತ್ತು. ಈಗ ರೂ.೪೮೯ ಕೋಟಿ ವೆಚ್ಚದಲ್ಲಿ ಹೊಸ ೫೩೮-ಹಾಸಿಗೆಗಳಿರುವ ಸಂಸ್ಥೆಯನ್ನು ಇನ್ನು ಮೂರು ವರ್ಷಗಳಲ್ಲಿ ಸ್ಥಾಪಿಸಲಾಗುವುದು,” ಎಂದು ತಿಳಿಸಿದರು.

ಕೇಂದ್ರ ಸಚಿವ ಮಾಂಡವಿಯಾ ಅವರಿಗೆ ಬರೆದಿರುವ ಪತ್ರದಲ್ಲಿ ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು, ಖಾಸಗಿ ವೈದ್ಯಕೀಯ ಕಾಲೇಜು ಇರಲಿ ಇಲ್ಲದಿರಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದಿಂದ ಸಹಾಯವನ್ನು ಕೋರಿದ್ದಾರೆ.

ರಾಜ್ಯದ ಆರೋಗ್ಯಸೇವಾ ಕ್ಷೇತ್ರದ ಸುಧಾರಣೆಗಾಗಿ ರಾಜ್ಯ ಆರೋಗ್ಯ ಸಚಿವ ಸುಧಾಕರ್ ಅವರು ಮಾಡಿರುವ ಇತರೆ ಸಲಹೆಗಳ ಪೈಕಿ, ಗುಣಮಟ್ಟ ಹಾಗೂ ವೃತ್ತಿಪರತೆಯನ್ನು ಖಾತ್ರಿಪಡಿಸಲು ಪ್ರತ್ಯೇಕ ರಾಮ್ಯಮಟ್ಟದ ಶುಶ್ರೂಷೆ ಹಾಗೂ ಪೂರಕ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆ, ಆಸ್ಪತ್ರೆಗಳ ನಿರ್ವಹಣೆಗಾಗಿ ಸಾರ್ವಜನಿಕ-ಖಾಸಗಿ ಮಾದರಿ ಅಳವಡಿಕೆ, ಆಸ್ಪತ್ರೆಗಳ ನಿರ್ವಹಣೆಗಾಗಿ ವಿಶೇಷ ಪಠ್ಯಕ್ರಮ ಹಾಗೂ ತರಬೇತಿ, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಆದ್ಯತೆ, ವಿಶ್ವದರ್ಜೆಯ ಆಹಾರ ಭದ್ರತೆ ಹಾಗೂ ಮಾನಕಗಳನ್ನು ಖಾತ್ರಿಪಡಿಸಲು ಕಠಿಣ ನಿಯಮಗಳು ಹಾಗೂ ರಾಜ್ಯ ನಿರ್ಧಿಷ್ಟ ಹಾಗೂ ಪ್ರದೇಶ ನಿರ್ಧಿಷ್ಟವಾದ ಆರೋಗ್ಯ ಸವಾಲುಗಳನ್ನು ಬಗೆಹರಿಸಲು ರಾಷ್ಟ್ರೀಯ ಆರೋಗ್ಯ ಮಿಷನ್‌ ನ ಉನ್ನತೀಕರಣಕ್ಕಾಗಿ ಗುಣಮಟ್ಟ ಹಾಗೂ ನಮ್ಯತೆಗಳ ಅಳವಡಿಕೆ ಸೇರಿವೆ.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Health-Ministry-approves-AIMS – Karnataka