ಮೇಕೆದಾಟು ಯೋಜನೆ: ಕೇಂದ್ರದ ಅನುಮತಿ ಪಡೆದು ಶೀಘ್ರ ಯೋಜನೆ ಜಾರಿಗೊಳಿಸಿ ಎಂದ ಎಚ್ಡಿಕೆ

kannada t-shirts

ಬೆಂಗಳೂರು, ಜೂನ್ 19, 2021 (www.justkannada.in): ಮೇಕೆದಾಟು ಯೋಜನೆ ಸಂಬಂಧ ರಾಜ್ಯ ಸರಕಾರ ಕೂಡಲೇ ಕೇಂದ್ರದ ಅನುಮತಿ ಪಡೆದು ಶೀಘ್ರ ಯೋಜನೆ ಜಾರಿಗೊಳಿಸಬೇಕು ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಸಂಬಂಧ ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು ರಾಜ್ಯ ಸರಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಎಚ್ಡಿಕೆ ಸರಣಿ ಟ್ವೀಟ್ ಇಲ್ಲಿದೆ ನೋಡಿ…

– ಮೇಕೆದಾಟು ಯೋಜನೆ ವಿಚಾರವಾಗಿ ಎನ್‌ಜಿಟಿ ದಕ್ಷಿಣ ಪೀಠ ಆರಂಭಿಸಿದ್ದ ಸ್ವಯಂ ಪ್ರೇರಿತ ವಿಚಾರಣೆಯನ್ನು ಪ್ರಧಾನ ಪೀಠ ಇತ್ಯರ್ಥಪಡಿಸಿದೆ. ಯೋಜನೆಗಿದ್ದ ಅಡ್ಡಿಯೊಂದು ನಿವಾರಣೆಯಾಗಿದೆ. ಈಗ ಕೇಂದ್ರದಿಂದ ಶೀಘ್ರವೇ ಅನುಮತಿ ಪಡೆದು ಯೋಜನೆ ಜಾರಿಗೊಳಿಸುವುದರತ್ತ ರಾಜ್ಯ ಸರ್ಕಾರ ಗಮನಹರಿಸಬೇಕು. ಕೇಂದ್ರವೂ ಪರಿಸರ ಅನುಮತಿಯನ್ನು ಶೀಘ್ರ ನೀಡಬೇಕು.

– ಕೇಂದ್ರ–ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಸ್ವರ್ಗ ಸೃಷ್ಟಿಯಾಗುವುದಾಗಿ ಬಿಜೆಪಿ ಹೇಳಿತ್ತು. ಸ್ವರ್ಗ ಬೇಡ, ಅನಿಶ್ಚಿತತೆಯಲ್ಲಿ ತೂಗುತ್ತಿರುವ ಮೇಕೆದಾಟು ಯೋಜನೆಗೆ ಪರಿಸರ ಅನುಮತಿಯನ್ನು ಶೀಘ್ರ ಪಡೆದುಕೊಂಡರೆ ಸಾಕು. ನಮ್ಮ ನೆಲ, ಜಲ, ಧನ ಬಳಸಿ ನಮ್ಮವರ ದಾಹ ನೀಗಿಸುವ ಯೋಜನೆ ವಿಚಾರದಲ್ಲಿ ಬಿಜೆಪಿ ಸರ್ಕಾರ ಇನ್ನು ನಿರ್ಲಕ್ಷ್ಯ ತೋರಬಾರದು.

– ಕೇಂದ್ರದ ಅನುಮತಿ ಸಿಕ್ಕ ಕೂಡಲೇ ಯೋಜನೆ ಆರಂಭಿಸುವ @BSYBJP ಹೇಳಿಕೆಯನ್ನು ಸೋದರ @mkstalin ವಿರೋಧಿಸಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತಿರುವ ಪ್ರಕರಣವೊಂದರಲ್ಲಿ ಕರ್ನಾಟಕ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ ಎಂಬುದು ಅವರ ಆರೋಪ. ವಿಚಾರಣೆಯಾಗುತ್ತಿರುವ ಯೋಜನೆಯೊಂದಕ್ಕೆ ತಡೆ ತರಲು ಪ್ರಧಾನಿಯನ್ನು ಭೇಟಿಯಾಗಿದ್ದೂ ತಪ್ಪಲ್ಲವೇ?‌

– ಹೊಗೇನಕಲ್‌ ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ತಮಿಳುನಾಡು ಯಾವ ರೀತಿ ನಡೆದುಕೊಂಡಿತು ಎಂದು ನಾನು ಹೇಳಬೇಕಿಲ್ಲ. ಆ ಯೋಜನೆ ಆಗಿದ್ದು @mkstalin ಉಪಮುಖ್ಯಮಂತ್ರಿ ಆಗಿದ್ದ ಕಾಲದಲ್ಲೇ. ಕುಡಿಯುವ ನೀರಿನ ನೆಪವೊಡ್ಡಿ ತಮಿಳುನಾಡು ಕರ್ನಾಟಕದ ಗಡಿ ದಾಟಿ ಬಂದಿತ್ತು. ಸಮರ್ಥನೆಯನ್ನೂ ಮಾಡಿಕೊಂಡಿತ್ತು. ಮೇಕೆದಾಟು ಕೂಡ ಕುಡಿಯುವ ನೀರಿನ ಯೋಜನೆಯೇ.

– ಮೇಕೆದಾಟು ಯೋಜನೆಯನ್ನು ಯಾವ ಕೋನದಲ್ಲಿ ನೋಡಿದರೂ ಅದು ನ್ಯಾಯವಾಗೇ ಕಾಣುತ್ತದೆ. ಹೀಗಾಗಿ ವಿವಾದ ಅನಗತ್ಯ. ಕಾವೇರಿಗಾಗಿ ಕಲಹ ನಡೆದದ್ದು ಸಾಕು. ಈಗ ನಾವು ಸೋದರತೆ ಮೆರೆಯಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಸೋದರ @mkstalin ಅವರಿಗೆ ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಅನಗತ್ಯ ಕಲಹದಲ್ಲಿ, ಅದೂ ಈ ಹೊತ್ತಲ್ಲಿ ನಾವು ಒಡೆದುಹೋಗಬಾರದು.

website developers in mysore