ಐಟಿ ಅಧಿಕಾರಿಗಳ ಕಿರುಕುಳ ಇದೆ: ರಮೇಶ್ ಆತ್ಮಹತ್ಯೆ ಬಗ್ಗೆ ತನಿಖೆಯಾಗಲಿ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹ…

ಬೆಂಗಳೂರು,ಅ,12,2019(www.justkannada.in): ರಮೇಶ್ ಆತ್ಮಹತ್ಯೆ  ಹಿಂದೆ ಐಟಿ ಅಧಿಕಾರಿಗಳ ಕಿರುಕುಳ ಇದೆ. ಈ ಬಗ್ಗೆ ತನಿಖೆಯಾಗಲಿ ಎಂದು  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ವಿಧಾನಸೌಧದಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್, ರಮೇಶ್ ಕೆಪಿಸಿಸಿ ಕಚೇರಿಯಲ್ಲಿ ಕೆಲಸ‌ ಮಾಡುತ್ತಿದ್ದರು. ನಿನ್ನೆ ಅವರ ಜತೆ ಮಾತನಾಡಿದ್ದೆ. ಪರಮೇಶ್ವರ್ ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಅವರ ಫೋನ್ ಮೂಲಕ ಕರೆ ಮಾಡಿದ್ದೆ. ಈ ಆತ್ಮಹತ್ಯೆಯ ಸುದ್ದಿ ಕೇಳಿ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವ ಕಾರಣಕ್ಕೆ ರಮೇಶ್  ಆತ್ಮಹತ್ಯೆ ಮಾಡಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಇದರ ಹಿಂದೆ ಐಟಿ ಅಧಿಕಾರಿಗಳ ಕಿರುಕುಳ ಇದೆ. ಐಟಿ ಅಧಿಕಾರಿಗಳು ಭಯದ ವಾತಾವರಣ ಸೃಷ್ಟಿಸಿದ್ದಾರೆ. ಈ ಹಿಂದೆ ಉದ್ಯಮಿ ಸಿದ್ದಾರ್ಥ್ ಆತ್ಮಹತ್ಯೆ ಮಾಡಿರುವುದು ಎಲ್ಲರಿಗೂ ಗೊತ್ತು. ಅದೇ ರೀತಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇದರ ತನಿಖೆ ಆಗಬೇಕು. ಈ ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ ಪೊಲೀಸ್ ಸ್ಪಷ್ಟವಾಗಿ ತನಿಖೆ‌ ಮಾಡಬೇಕು. ಇಡಿ, ಐಟಿ, ಪೊಲೀಸ್ ಇಲಾಖೆ, ಸಿಬಿಐ ಮೇಲೆ ವಿಶ್ವಾಸ ಇಲ್ಲ. ಯಾವ ಕಾರಣಕ್ಕೆ ಆಗಿದೆ ಎಂದು ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರದ ಅಣತಿಯಂತೆ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ- ವಿ.ಎಸ್.ಉಗ್ರಪ್ಪ

ರಮೇಶ್ ಆತ್ಮಹತ್ಯೆ ಅತ್ಯಂತ ನೋವಿನ ಸುದ್ದಿ. ದೇಶದ ಇತಿಹಾಸದಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆಯಲು ಸಾಧ್ಯವಿಲ್ಲ. ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರದ ಅಣತಿಯಂತೆ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕಿಡಿಕಾರಿದರು.

ಐಟಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿ ಅಧಿಕಾರಿಗಳು ಆತ್ಮಹತ್ಯೆ ಗೆ ಪ್ರಚೋದನೆ ನೀಡಿದ್ದಾರೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಕೇಸ್ ದಾಖಲಿಸಿ, ಐಟಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Key words:  harassment – IT -Ramesh -commit suicide- KPCC president -Dinesh Gundurao