ಆಹಾರ ಪದ್ದತಿ ಅವರವರ ಹಕ್ಕು: ಇಲ್ಲೇ ತಗೊಳ್ಳಿ, ಅಲ್ಲೇ ತಗೊಳ್ಳಿ‌ ಅನ್ನೋದು ತಪ್ಪು- ಸಚಿವ ಆರ್.ಅಶೋಕ್.

Promotion

ಬೆಂಗಳೂರು,ಮಾರ್ಚ್,30,2022(www.justkannada.in):  ಹಲಾಲ್ ಮಾಂಸ ಖರೀದಿ ವಿಚಾರ ಸದನದಲ್ಲಿ ಚರ್ಚೆಯಾಗಿದ್ದು ಈ ನಡುವೆ ಆಹಾರ ಪದ್ದತಿ ಅವರವರ ಹಕ್ಕು: ಇಲ್ಲೇ ತಗೊಳ್ಳಿ, ಅಲ್ಲೇ ತಗೊಳ್ಳಿ‌ ಅನ್ನೋದು ತಪ್ಪು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಸಭೆಯಲ್ಲಿ ಚುನಾವಣಾ ಸುಧಾರಣೆ ಕುರಿತು ಮಹತ್ವದ ಚರ್ಚೆ ನಡೆಯಿತು. ಚರ್ಚೆಯ ವೇಳೆ ಹಲಾಲ್ ವಿವಾದ ಪ್ರಸ್ತಾಪಿಸಿದ  ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ನಾವೂ ಮಾಂಸಾಹಾರಿಗಳು. ಆದರೆ ಹಲಾಲ್ ಮಾಂಸ ಅಂತೆಲ್ಲಾ ನೋಡುವುದಿಲ್ಲ. ನಾವು ಮಾಂಸವನ್ನು ತಂದು ಪೂಜೆಗೆ ಇಡುವುದಿಲ್ಲ. ಹೊಸತೊಡಕಿಗೆ ಗುಡ್ಡೆ ಮಾಂಸ ಮಾರುತ್ತಾರೆ. ಇದು ವಿವಾದ ಎಂದೇಕೆ ಬಿಂಬಿತವಾಗಬೇಕು ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಆರ್. ಅಶೋಕ್, ಕುಮಾರಸ್ವಾಮಿ ಮಾತುಗಳಿಗೆ ನಮ್ಮ ವಿರೋಧ ಇಲ್ಲ. ಯಾರು ಯಾರ ಬಳಿ ಖರೀದಿಸಬೇಕು ಅನ್ನೋದು ‌ಅವರ ಹಕ್ಕು. ಇಲ್ಲೇ ತಗೊಳ್ಳಿ, ಅಲ್ಲೇ ತಗೊಳ್ಳಿ‌ ಅನ್ನೋದು ತಪ್ಪು. ಆಹಾರ ಪದ್ದತಿ ಅವರವರ ಹಕ್ಕು. ಯಾರಿಗೂ ಕೂಡ ಇದನ್ನೇ ತಿನ್ನಿ, ಹೀಗೆ ತಿನ್ನಿ ಎಂದು ಹೇಳುವುದಿಲ್ಲ. ತಮಗೆ ಬೇಕಾದನ್ನು ತಿನ್ನುತ್ತಾರೆ. ಎಲ್ಲಿ ಯಾರು ಬೇಕಾದರೂ ಖರೀದಿ ಮಾಡಬಹುದು. ಹಾಗೊಂದು ವೇಳೆ ಯಾರಾದರೂ ಬಲವಂತ ಮಾಡಿದರೆ ಅದನ್ನು ಸಹಿಸುವುದಿಲ್ಲ ಎಂದರು.

ಈ ವೇಳೆ ಮಾತನಾಡಿದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ನಾವು ಹಲಾಲ್ ಮಾಡಲ್ಲ ನೀವ್ಯಾಕೆ ಹಲಾಲ್ ಖರೀದಿಸಿ ಎಂದು ಒತ್ತಾಯಿಸುತ್ತೀರಿ ಎಂದು ಎರಡೂ ಸಮುದಾಯಗಳಿಗೂ ಬುದ್ಧಿ ಹೇಳಬೇಕು ಎಂದು ಒತ್ತಾಯಿಸಿದರು. ಒಂದೇ ಬದಿಗೆ ಹೋಗಬಾರದು ಎಂದು ಅಶೋಕ್ ಮತ್ತೊಮ್ಮೆ ದನಿಯೆತ್ತಿದರು. ಮೇಲೆದ್ದು ನಿಂತ ಬಸನಗೌಡ ಯತ್ನಾಳ್, ‘ಕುಮಾರಸ್ವಾಮಿಯವರೇ ಎರಡೂ ಸಮುದಾಯಕ್ಕೂ ಬುದ್ಧಿ ಹೇಳಬೇಕು. ಕೇವಲ ಹಿಂದೂಗಳಿಗೆ ಮಾತ್ರ ಬುದ್ಧಿ ಹೇಳುವುದು ಯಾವ ಸೀಮೆ ಜಾತ್ಯತೀತತೆ’ ಎಂದು ಪ್ರಶ್ನಿಸಿದರು.

Key words: halal- discussion- Minister- R. Ashok-HD Kumaraswamy