ಪಾಲಿಟೆಕ್ನಿಕ್ ಮೂಲಕ ಎಂಜಿನಿಯರಿಂಗ್ ಗೆ ಹೆಚ್ಚಿನ ಅವಕಾಶ- ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸಲಹೆ

ಮೈಸೂರು,ಅಕ್ಟೋಬರ್,4,2021(www.justkannada.in): ಎಂಜಿನಿಯರಿಂಗ್ ಓದುವ ಆಕಾಂಕ್ಷೆ ಇರುವವರು ಎಸ್ಸೆಸ್ಸೆಲ್ಸಿ ಆದ ಮೇಲೆ ಪಾಲಿಟೆಕ್ನಿಕ್ ಸೇರಿ, ಆನಂತರ ಎಂಜಿನಿಯರಿಂಗ್ ಸೇರುವುದಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಕೌಶಲಾಭಿವೃದ್ಧಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹೇಳಿದರು.

ಇಲ್ಲಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನೋತ್ಸವ ಹಾಗೂ ಅಡಳಿತಾವಧಿಯ 20 ವರ್ಷಗಳ ಪೂರೈಕೆ ನಿಮಿತ್ತ ಹಮ್ಮಿಕೊಳ್ಳಲಾಗಿರುವ 20 ದಿನಗಳ ಸೇವಾ ಕಾರ್ಯಕ್ರಮಗಳ ಭಾಗವಾಗಿ ‘ಉದ್ಯೋಗ ಮೇಳ’ಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಂಜಿನಿಯರಿಂಗ್ ಓದುವ ಆಸಕ್ತಿ ಇರುವವರೆಲ್ಲರೂ ಪಿಯುಸಿಯೊಂದಕ್ಕೇ ಮುಗಿಬೀಳುತ್ತಾರೆ. ಏಕೆಂದರೆ, ಮಾಹಿತಿ ಕೊರತೆಯಿಂದಾಗಿ, ಎಷ್ಟೋ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್ ಮೂಲಕವೂ ಎಂಜಿನಿಯರಿಂಗ್ ಸೇರಬಹುದು ಎನ್ನುವುದು ಗೊತ್ತಿರುವುದಿಲ್ಲ. ವಾಸ್ತವವಾಗಿ, ಪಾಲಿಟೆಕ್ನಿಕ್ ನಲ್ಲಿ ಪಿ.ಯು.ಸಿ.ಗಿಂತ ಹೆಚ್ಚು ಪ್ರಾಯೋಗಿಕ ಜ್ಞಾನಕ್ಕೆ ಒತ್ತು ಕೊಟ್ಟು ಕಲಿಸಲಾಗುತ್ತದೆ ಎಂದರು.

ರಾಜ್ಯದ ಪಾಲಿಟೆಕ್ನಿಕ್ ಗಳಲ್ಲಿ ಪ್ರತಿ ವರ್ಷ 70 ಸಾವಿರ ವಿದ್ಯಾರ್ಥಿಗಳು ಕಲಿಯಲು ಅವಕಾಶವಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಗೆ ಸರಾಸರಿ 3ರಿಂದ 4 ಲಕ್ಷ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ. ಆದರೆ, ಪಾಲಿಟೆಕ್ನಿಕ್ ಗಳಲ್ಲಿ ಪ್ರತಿ ವರ್ಷ 40 ಸಾವಿರ ಸೀಟುಗಳು ಖಾಲಿ ಉಳಿಯುತ್ತಿವೆ ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ಪಾಲಿಟೆಕ್ನಿಕ್, ಐಟಿಐ, ಜಿಟಿಟಿಸಿಗಳಲ್ಲಿ ಸಮಾಜಕ್ಕೆ ಏನು ಬೇಕೋ ಅಂತಹ ಕೋರ್ಸ್ ಗಳನ್ನು ಸೇರಿಸಲಾಗಿದೆ. ಎಲೆಕ್ಟ್ರಿಕ್ ವೆಹಿಕಲ್, ಎಲೆಕ್ಟ್ರಿಕ್ ಬ್ಯಾಟರಿ, ಎಲೆಕ್ಟ್ರಿಕ್ ಚಾರ್ಜಿಂಗ್, ಮಷೀನ್ ಲರ್ನಿಂಗ್, ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್), ರೋಬೋಟಿಕ್ಸ್ ನಂತಹ ಈಗ ಬೇಡಿಕೆಯಲ್ಲಿರುವ ಹಾಗೂ ಕುತೂಹಲಕರ ಕೋರ್ಸ್ ಗಳು ಇದರಲ್ಲಿರುತ್ತಿವೆ ಎಂದರು.

ನಮ್ಮ ಸಮಾಜದಲ್ಲಿ ವೈಟ್ ಕಾಲರ್ (ಟೇಬಲ್, ಕುರ್ಚಿಯಲ್ಲಿ ಕುಳಿತು ಮಾಡುವ ಕೆಲಸಗಳು) ಜಾಬ್ ಗಳು ಮಾತ್ರ ಉದ್ಯೋಗ ಎಂಬ ಭಾವನೆ ಇದೆ. ಇದು ಸರಿಯಲ್ಲ. ಬ್ಲೂ ಕಾಲರ್ ಜಾಬ್ ಗಳ (ಉದ್ಯಮ ಕೌಶಲ್ಯದ ಕೆಲಸಗಳು) ಪ್ರಾಮುಖ್ಯ ಅರಿತು ಮಕ್ಕಳನ್ನು ಕೌಶಲಗಳ ಬಲದಿಂದ ಸಶಕ್ತಗೊಳಿಸಬೇಕು ಎಂದು ಅಶ್ವತ್ಥ ನಾರಾಯಣ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ-2020)ಯ ಪ್ರಕಾರ ಮಕ್ಕಳಿಗೆ ಶಾಲಾ ಹಂತದಲ್ಲೇ ಕೌಶಲಗಳನ್ನು ಕಲಿಸಲು ಒತ್ತು ಕೊಡಲಾಗುತ್ತದೆ. ಜೊತೆಗೆ, ಮಕ್ಕಳಿಗೆ 3ನೇ ವಯಸ್ಸಿನಿಂದಲೇ ಹಾಡು, ಚಿತ್ರ, ನೃತ್ಯಗಳ ಮೂಲಕ ರಂಜನೆಯೊಂದಿಗೆ ಕಲಿಸುವ ಪದ್ಧತಿ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.

Key words: Great- opportunity – engineering – polytechnic- Advice – Minister -Dr. C.N. Ashwaththanarayan