ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಮನಗರ ಜಿಲ್ಲೆ ಇರುಳಿಗರ ಕಾಲೊನಿಯಲ್ಲಿ ‘ಗ್ರಾಮ ಸೇವೆ’

ರಾಮನಗರ, ನವೆಂಬರ್, 24, 2019 (www.justkannada.in): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮ ‘ಗ್ರಾಮ ಸೇವೆ’ಗೆ ಇರುಳಿಗರ ಕಾಲೊನಿನಲ್ಲಿ ಚಾಲನೆ ದೊರೆತಿದೆ.

ರಾತ್ರಿಯಿಡೀ ಗ್ರಾಮದಲ್ಲೇ ಉಳಿದ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ ನೇತೃತ್ವದ ತಂಡ ಸ್ಥಳೀಯರೊಂದಿಗೆ ಬೆರೆತು ಅವರಲ್ಲಿ ಮಾಹಿತಿ ಹಂಚಿಕೊಳ್ಳುವ ಜತೆಗೆ ಜಾಗೃತಿ‌ ಮೂಡಿಸುವ ಪ್ರಯತ್ನ ಮಾಡಿತು.

ಕನಕಪುರ ತಾಲೂಕಿನ ಕೂತಗಾನಹಳ್ಳಿ ಬಳಿಯ ಇರುಳಿಗರ ಕಾಲೊನಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮನೆ ಬಾಗಿಲಿಗೆ ಬಂದ ಅಧಿಕಾರಿಗಳ ತಂಡವನ್ನು ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. ಅವರಿಂದ ಸರ್ಕಾರದಿಂದ ತಮಗಾಗಿಯೇ ಇರುವ ಸೌಲಭ್ಯಗಳ ಮಾಹಿತಿ ಪಡೆದರು.

ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್.ಶಂಕರಪ್ಪ ಮಾತನಾಡಿ ‘ಜಿಲ್ಲೆಯಲ್ಲಿನ ಇರುಳಿಗರ ಕಾಲೊನಿಗಳನ್ನು ಪ್ರವಾಸಿ ಹಳ್ಳಿಗಳನ್ನಾಗಿ ಪರಿರ್ವತಿಸಲಾಗುವುದು. ಇಲ್ಲಿ ರೆಸಾರ್ಟ್‌ಗಳಿಗೆ ಸರಿಸಮಾನವಾದ ಪ್ರಕೃತಿ ಒಡಲಿನಲ್ಲಿ ಗ್ರಾಮಗಳ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.