ಪದವಿ ಶಿಕ್ಷಕರ ನೇಮಕಾತಿ ಪರೀಕ್ಷೆ: ಎಲ್ಲರ ಕಿವಿ ಹಾಗೂ ಕಣ್ಣುಗಳು ದಾವಣಗೆರೆಯತ್ತ..

Promotion

ದಾವಣಗೆರೆ, ಮೇ 13, 2022 (www.justkannada.in): ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳಲ್ಲಿ ನಕಲು ಮಾಡುವ ಪದ್ಧತಿಗಳು ಎಷ್ಟರ ಮಟ್ಟಿಗೆ ತಾಂತ್ರಿಕವಾಗಿ ಆಧುನಿಕತೆಯನ್ನು ಪಡೆದುಕೊಂಡಿದೆ ಎಂದರೆ ನಕಲು ಮಾಡುವವರನ್ನು ಪತ್ತೆಹಚ್ಚಲು ಅಸಾಮಾನ್ಯವಾದ ವಿಧಾನಗಳನ್ನು ಆವಿಷ್ಕರಿಸಬೇಕಾಗುತ್ತಿದೆ.

ಉದಾಹರಣೆಗೆ, ದಾವಣಗೆರೆಯಲ್ಲಿ ಇದೇ ಮೇ 21 ಹಾಗೂ 22ರಂದು ಪದವಿ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಇಎನ್‌ ಟಿ ತಜ್ಞರ ಸೇವೆಗಳನ್ನು ಪಡೆಯಲು ನಿರ್ಧರಿಸಿದೆ. ಈ ಇಎನ್‌ ಟಿ ತಜ್ಞರು (ಕಿವಿ, ಮೂಗು, ಗಂಟಲು ಪರೀಕ್ಷಿಸುವ ತಜ್ಞರು) ಯಾವುದಾದರೂ ಅಭ್ಯರ್ಥಿ ಪರೀಕ್ಷೆಯಲ್ಲಿ ‘ಒಟೊಸ್ಕೋಪ್’ ಎಂಬ ಅತೀಸೂಕ್ಷ್ಮವಾದ ಸಾಧನವನ್ನು ಬಳಸುತ್ತಿರುವರೇ ಎಂದು ಪತ್ತೆ ಹಚ್ಚಲಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಪೋಲಿಸ್ ಸಬ್ ಇನ್ಸ್ ಪೆಕ್ಟರ್‌ ಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಬೃಹತ್ ಹಗರಣ ಇಡೀ ರಾಜ್ಯದಲ್ಲಿ ದೊಡ್ಡ ಸುದ್ದಿಯಾಯಿತು.

ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ತಿಳಿಸಿರುವ ಪ್ರಕಾರ, ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ನಕಲು ಮಾಡುವ ಅಭ್ಯರ್ಥಿಗಳು ಕಿವಿಯ ಒಳಗೆ ಮೈಕ್ರೋ ಬ್ಲೂಟೂತ್ ಒಂದನ್ನು ಇಟ್ಟುಕೊಂಡಿರುತ್ತಾರೆ, ಮತ್ತು ಅದರ ರಿಸೀವರ್ ಪಾದರಕ್ಷೆಗಳ ಒಳಗೆ ಇರುತ್ತದೆ. ಈ ರೀತಿ ನಕಲು ಮಾಡುವ ವಿಧಾನ ಮೊದಲ ಬಾರಿಗೆ ೨೦೧೭ರಲ್ಲಿ ನಡೆದ ಒಂದು ಪರೀಕ್ಷೆಯಲ್ಲಿ ಪತ್ತೆಯಾಯಿತು.

ಈ ಬ್ಲೂಟೂತ್‌ ಗಳು ಬರೀ ಕಣ್ಣಿಗೆ ಕಾಣಿಸುವುದೇ ಕಷ್ಟ. ಮೇಲಾಗಿ ಆ ಸಾಧನಗಳ ಬಣ್ಣವೂ ಸಹ ಮನುಷ್ಯರ ಚರ್ಮದ ಬಣ್ಣದಂತೆಯೇ ಇರುತ್ತದೆ. “ಹಾಗಾಗಿ ನಾವು ಪರೀಕ್ಷೆ ನಡೆಯುವ ದಿನಗಳಂದು ನಾವು ಈ ರೀತಿಯ ಬ್ಲೂಟೂತ್ ಸಾಧನಗಳನ್ನು ಪತ್ತೆ ಹಚ್ಚಲು ಇಎನ್‌ ಟಿ ತಜ್ಞರ ಸೇವೆಯನ್ನು ಪಡೆಯಲು ನಿರ್ಧರಿಸಿದ್ದೇವೆ. ಅಭ್ಯರ್ಥಿಗಳ ಕಿವಿಯೊಳಗೆ ‘ಒಟೊಸ್ಕೋಪ್’ ಇರಿಸಿಕೊಂಡಿರುವುದನ್ನು ಪತ್ತೆ ಹಚ್ಚಲು ಇಎನ್‌ ಟಿ ತಜ್ಞರ ಬಳಿ ಒಂದು ವಿಶೇಷ ವಿಧಾನವಿದೆ,” ಎನ್ನುತ್ತಾರೆ ರಿಷ್ಯಂತ್. ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳನ್ನೂ ಮೂರು ಹಂತಗಳಲ್ಲಿ ಪರಿಶೀಲಿಸಲಾಗುವುದು. ಮೊದಲು ಪ್ರವೇಶದ್ವಾರದಲ್ಲಿ ಪೋಲಿಸರು ಪರಿಶೀಲಿಸುತ್ತಾರೆ.

ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಎನ್‌ ಟಿ ತಜ್ಞರೊಂದಿಗೆ ತಮ್ಮದೇ ಆದ ರೀತಿಯಲ್ಲಿ ತಪಾಸಣೆ ಮಾಡುತ್ತಾರೆ. ಅಂತಿಮವಾಗಿ, ಪರೀಕ್ಷಾ ಕೊಠಡಿಯೊಳಗೆ ಕೊಠಡಿ ಮೇಲ್ವಿಚಾರಕರೂ ಸಹ ತಪಾಸಣೆ ಮಾಡಲಿದ್ದಾರೆ.

ಈ ರೀತಿಯ ನಕಲು ಮಾಡುವ ವಿಧಾನ ಮೊದಲಿಗೆ ೨೦೧೭ರಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದ ಸಹಾಯಕ ಹಾಗೂ ಕಿರಿಯ ಇಂಜಿನಿಯರುಗಳ ಪರೀಕ್ಷೆಯಲ್ಲಿ ಬಹಿರಂಗಗೊಂಡಿತು. ನಂತರ ಪಿಎಸ್‌ ಐ ನೇಮಕಾತಿ ಪರೀಕ್ಷೆಯಲ್ಲಿಯೂ ನಡೆದಿದೆ. ಹಾಗಾಗಿ ನಾನು ಮತ್ತು ನಮ್ಮ ಜಿಲ್ಲಾಧಿಕಾರಿಗಳು ಈ ಇಎನ್‌ ಟಿ ತಜ್ಞರ ಸೇವೆಗಳ ಸೇವೆಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆವು ಎಂದು ಪೋಲಿಸ್ ವರಿಷ್ಠಾಧಿಕಾರಿ ಅವರು ವಿವರಿಸಿದ್ದಾರೆ.

ಇದೇ ಮೊಟ್ಟ ಮೊದಲ ಬಾರಿಗೆ ನೇಮಕಾತಿ ಪರೀಕ್ಷೆಯಲ್ಲಿ ಇಎನ್‌ ಟಿ ತಜ್ಞರ ಸೇವೆಗಳ ಜೊತೆಗೆ, ಮೆಟಲ್ ಡಿಟೆಕ್ಟರ್‌ ಗಳನ್ನು ಬಳಸಲಾಗುತ್ತಿದೆ ಎಂದು ಡಿಡಿಪಿಐ ತಿಪ್ಪೇಶಪ್ಪ ಅವರು ತಿಳಿಸಿದ್ದಾರೆ. ಜೊತೆಗೆ, ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮುಂಚೆ ತಮ್ಮ ಪಾದರಕ್ಷಣೆಗಳನ್ನು ಅದಕ್ಕಾಗಿ ಎಂದೇ ಮೀಸಲಿಟ್ಟಿರುವ ಪಾದರಕ್ಷೆಗಳ ಸ್ಟ್ಯಾಂಡ್‌ ನಲ್ಲಿರಿಸಿ ಪ್ರವೇಶಿಸಬೇಕು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Graduate-Teachers-Recruitment-Examination-Davanagere.