ಕಡತಗಳನ್ನು ಟ್ರ್ಯಾಕ್ ಮಾಡುವ ಸರ್ಕಾರದ ವೆಬ್ ಪೋರ್ಟಲ್ ನಿಷ್ಕ್ರಿಯ: ಸರ್ಕಾರದ ವಿರುದ್ಧ ಎಂಎಲ್‌ಎಗಳ ಕೆಂಗಣ್ಣು.

Promotion

ಬೆಂಗಳೂರು, ಡಿಸೆಂಬರ್ 27, 2021  (www.justkannada.in): ಬೊಮ್ಮಾಯಿ ಸರ್ಕಾರ, ಸರ್ಕಾರಿ ಇಲಾಖೆಗಳ ಕಡತಗಳ ಚಲನೆಯ ಮೇಲೆ ನಿಗಾವಹಿಸುವ ಆನ್‌ ಲೈನ್ ವೆಬ್ ಪೋರ್ಟಲ್ ಅನ್ನು ನಿಷ್ಕ್ರಿಯಗೊಳಿಸಿರುವುದು ವಿಧಾನಸಭಾ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದು, ತಮ್ಮ ಮನವಿಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು ಕಷ್ಟವಾಗಿದೆ ಎಂದು ದೂರಿದ್ದಾರೆ.

ಸರ್ಕಾರ ಮಟ್ಟದಲ್ಲಿ ಯಾವ ಕಡತ ಎಲ್ಲಿದೆ ಯಾವ ಪತ್ರ ಎಲ್ಲಿದೆ, ಸ್ಥಿತಿಗತಿಯೇನು ಎಂಬ ವಿವರಗಳನ್ನು ಪಾರದರ್ಶಕಗೊಳಿಸುವ ಉದ್ದೇಶದೊಂದಿಗೆ ಆನ್‌ಲೈನ್ ಡಿಜಿಟಲ್ ಗವರ್ನಮೆಂಟ್ ಕಮ್ಯೂನಿಕೇಷನ್ (ODGC), ‘ಸಚಿವಾಲಯ ವಾಹಿನಿ ಪೋರ್ಟಲ್’ – ಈ ವೆಬ್ ಪೋರ್ಟಲ್ ಅನ್ನು ೨೦೧೧ರ ಅಕ್ಟೋಬರ್‌ನಲ್ಲಿ ಪರಿಚಯಿಸಲಾಗಿತ್ತು.

ತಮ್ಮ ವಿಧಾನ ಸಭಾ ಕ್ಷೇತ್ರದಿಂದ ಬರುವ ಬೃಹತ್ ಪ್ರಮಾಣದ ಟಪಾಲುಗಳ ಹೊರೆಯನ್ನು ಹೊಂದಿರುವ ವಿಧಾನ ಸಭಾ ಸದಸ್ಯರು ಈ ಸಚಿವಾಲಯ ವಾಹಿನಿ ಪೋರ್ಟಲ್‌ ನ ಪ್ರಮುಖ ಫಲಾನುಭವಿಗಳಾಗಿದ್ದರು. ಎಂಎಲ್‌ ಎಗಳ ಆಪ್ತ ಸಹಾಯಕರು ತಮ್ಮ ಕಡತವನ್ನು ಸರ್ಕಾರದ ಮಟ್ಟದಲ್ಲಿ, ಸಂಬಂಧಪಟ್ಟ ಇಲಾಖೆಯಲ್ಲಿ ಯಾವ ಅಧಿಕಾರಿ ನಿರ್ವಹಿಸುತ್ತಿದ್ದಾರೆ, ಅದರ ಸ್ಥಿತಿಗತಿಯೇನು ಎಂದು ಈ ವೆಬ್ ಪೋರ್ಟಲ್ ಮೂಲಕ ತಿಳಿದುಕೊಳ್ಳುತ್ತಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿರುವ ಹಾಲಿ ಸರ್ಕಾರ, ‘ಸಚಿವಾಲಯ ವಾಹಿನಿ’ ಜಾಗದಲ್ಲಿ ಮತ್ತೊಂದು ಹೊಸ ನಾಗರಿಕ ಪೋರ್ಟಲ್ ಅನ್ನು ಸಿದ್ಧಪಡಿಸುತ್ತಿರುವುದಾಗಿ ತಿಳಿಸಿದೆಯಂತೆ. ಆದರೆ ಸದ್ಯಕ್ಕೆ ಎಂಎಲ್‌ಎಗಳು ಇದರಿಂದ ಬಹಳ ಅಸಂತುಷ್ಠರಾಗಿದ್ದಾರೆ. ಈ ಕುರಿತು ವಿಧಾನ ಸಭೆಯಲ್ಲಿ ಮಾತನಾಡಿದ ನೆಲಮಂಗಲದ ಎಂಎಲ್‌ಎ ಡಾ. ಕೆ. ಶ್ರೀನಿವಾಸಮೂರ್ತಿ ಅವರು, “ಈ ಕಡತಗಳನ್ನು ನಮ್ಮ ಆಪ್ತ ಸಹಾಯಕರು ನಿಗಾವಹಿಸುತ್ತಾರೆ, ಆದರೆ ಈಗ ಈ ಕುರಿತು ಮಾಹಿತಿ ಲಭ್ಯವಾಗುತ್ತಿಲ್ಲ,” ಎಂದು ತಮ್ಮ ಅಸಂತೃಪ್ತಿಯನ್ನು ವ್ಯಕ್ತಪಡಿಸಿದರು.

ಇದಕ್ಕೆ ಉದಾಹರಣೆಯಾಗಿ ತಮ್ಮ ವಿಧಾನಸಭಾ ಕ್ಷೇತ್ರದ ಇ-ಖಾತಾ ವಿಷಯವನ್ನು ನೀಡಿದರು. “ಜನರಿಗೆ ಇ-ಖಾತೆ ದೊರೆಯದೇ ಇರುವ ಕಾರಣದಿಂದಾಗಿ ಅವರಿಗೆ ಅವರ ಆಸ್ತಿ ತೆರಿಗೆ ಪಾವತಿಸುವುದು ಸಾಧ್ಯವಾಗುತ್ತಿಲ್ಲ,” ಎಂದು ದೂರಿದರು. ಮೇಲಾಗಿ ಆಪ್ತ ಸಹಾಯಕರಿಗೆ ಸರ್ಕಾರಕ್ಕೆ ಕಳುಹಿಸಿರುವ ಪತ್ರಗಳು ಎಲ್ಲಿವೆ ಎಂದು ತಿಳಿಯುವುದು ಸಾಧ್ಯವಾಗುತ್ತಿಲ್ಲ ಎಂದರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇ-ಆಡಳಿತ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರು ಈ ಸಂಬಂಧ ಮಾತನಾಡಿ, “ಇ-ಕಚೇರಿ ಅನುಷ್ಠಾನದಿಂದಾಗಿ ಭೌತಿಕ ಕಡತಗಳು ಅರ್ಥವನ್ನು ಕಳೆದುಕೊಂಡಿದೆ, ಹಾಗಾಗಿ ‘ಸಚಿವಾಲಯ ವಾಹಿನಿ ಪೋರ್ಟಲ್’ ಅನ್ನು ಮುಕ್ತಾಯಗೊಳಿಸಲಾಗಿದೆ,” ಎಂದಿದ್ದಾರೆ.

ಈ ಇ-ಕಚೇರಿ ವ್ಯವಸ್ಥೆಯಡಿ ಎಲ್ಲಾ ಕಡತಗಳನ್ನೂ ಸಹ ಸ್ಕ್ಯಾನ್ ಮಾಡಿ, ಮುಂದಿನ ಕ್ರಮಕ್ಕಾಗಿ ಅವುಗಳನ್ನು ಸಿಸ್ಟಂನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದ ಕಾಗದ ಉಳಿತಾಯವಾಗಿ, ಕಡತಗಳು ಕೈಯಿಂದ ಕೈಗೆ ಓಡಾಡುವುದು ಕಡಿಮೆಯಾಗಿದೆ, ಇದರಿಂದ ಕಡತಗಳ ವಿಲೇವಾರಿ ವೇಗಗೊಂಡಿದೆ. ಸಚಿವಾಲಯದ ಎಲ್ಲಾ ಕಚೇರಿಗಳೂ ಸಹ ಇ-ಕಚೇರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದಿದ್ದಾರೆ.

ಅಕ್ಟೋಬರ್ ೧ರಿಂದ ಎಲ್ಲಾ ಜಿಲ್ಲಾಡಳಿತ ಕಚೇರಿಗಳು, ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಇತರೆ ಕಚೇರಿಗಳು ಸಚಿವಾಲಯಗಳಿಗೆ ಕಳುಹಿಸುವ ಎಲ್ಲಾ ಕಡತಗಳನ್ನು ಇ-ಕಚೇರಿ ಮೂಲಕವೇ ಕಳುಹಿಸುತ್ತಿವೆಯಂತೆ.

ಮಾಹಿತಿ ತಂತ್ರಜ್ಞಾನ ಇಲಾಖೆಯ ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಅಧಿಕಾರದಲ್ಲಿದ್ದಾಗ ಇದೇ ಇ-ಕಚೇರಿ ವ್ಯವಸ್ಥೆಯನ್ನು ಉಪಯೋಗಿಸುತ್ತಿದ್ದರು. ಅವರು ಹೇಳಿರುವ ಪ್ರಕಾರ ಅನುಭವ ಇಲ್ಲದಿರುವಂತಹ ಆಪ್ತ ಸಹಾಯಕರಿಗೆ ಕಡತಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತದಂತೆ. “ಮೇಲಾಗಿ, ಈಗ ಒಂದು ಬ್ಲ್ಯಾಂಕ್ ಬಾಕ್ಸ್ ಇದ್ದು, ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದು ಸಾಧ್ಯವಾಗುತ್ತಿಲ್ಲ,” ಎನ್ನುತ್ತಾರೆ ಚಿತ್ತಾಪುರ ಎಂಎಲ್‌ ಎ.

ಇ-ಕಚೇರಿ ಯೋಜನೆಯ ನಿರ್ದೇಶಕಿ ಸೀಮಾ ಕೆ.ಪಿ. ಅವರು ಹೊಸ ಪೋರ್ಟಲ್ ಸಿದ್ಧಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. “ನಾವು ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್ ಅನ್ನು ಒದಗಿಸುವಂತೆ ಎನ್‌ಐಸಿಯನ್ನು ಕೋರಿದ್ದೇವೆ,” ಎಂದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  government -web portal – tracks- files -inactive