ಕ್ವಾರಂಟೈನ್ ಓದು: ಆ ಹಾಡು ರೆಕ್ಕೆ ಬಿಡಿಸಿತು

Promotion

‘ಮೊನ್ನೆ ಅಮೃತ ಸೋಮೇಶ್ವರರ ಮನೆಗೆ ಹೋಗಿದ್ದೆ. ಅವರು ಒಂದು ಹಾಡು ಹೇಳಿ ಎಂದು ಒತ್ತಾಯಿಸಿದರು

ನನಗೆ ತಕ್ಷಣ ನೆನಪಿಗೆ ಬಂದದ್ದು ನಿಮ್ಮ ಹಾಡು. ಅದನ್ನೇ ಹಾಡಿದೆ’.

ಹಾಗೆ ಕಾಮೆಂಟಿಸಿದ್ದು ಗೆಳೆಯರಾದ ಮಂಗಳೂರಿನ ಪ್ರಭಾಕರ ಕಾಪಿಕಾಡ್.
‘ದ್ವೀಪ’ ನಾಟಕದ ಮೂಲಕ ಸಾಕಷ್ಟು ಹೆಸರಾದ ರಂಗಕರ್ಮಿ.
ಅವರು ಹಾಗೆ ಕಾಮೆಂಟಿಸಿದ್ದು ಬೆಳ್ತಂಗಡಿಯ ರಾಜೇಶ್ವರಿ ಚೇತನ್ ಅವರು ಸಾಮರಸ್ಯದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದ ಒಂದು ಪುಟ್ಟ ಬರಹಕ್ಕೆ.

ನಾನೋ ಅದನ್ನು ಓದಿದವನೇ 30 ವರ್ಷ ಹಿಂದಕ್ಕೆ ಓಡಿದೆ.

ಆಗತಾನೆ ಕವಿತೆಗೆ ಮನಸ್ಸು ಕೊಟ್ಟಿದ್ದ ದಿನಗಳು
ಗಾಂಧಿನಗರದಲ್ಲಿ ಭಾರತ ಸೋವಿಯತ್ ಸಾಂಸ್ಕೃತಿಕ ಮೈತ್ರಿ ಕಛೇರಿಯಿತ್ತು.
ಅಲ್ಲಿಗೆ ಹೋದಾಗ ಜಿ ಆರ್ ಸಿಕ್ಕರು.

ಜಿ ಆರ್ ಎಂದರೆ ನಾನು ತುಂಬು ಪ್ರೀತಿಯಿಂದ ಕಾಣುವ ಡಾ ಜಿ ರಾಮಕೃಷ್ಣ

ಅಮೆರಿಕಾ ಅಣ್ವಸ್ತ್ರದ ಅಹಂಕಾರದಿಂದ ಘರ್ಜಿಸುತ್ತಿದ್ದ ಕಾಲ.
ಹಾಲಿವುಡ್ ನಟನಾಗಿ, ಈಗ ಅಮೆರಿಕಾದ ಚುಕ್ಕಾಣಿ ಹಿಡಿದಿದ್ದ ರೊನಾಲ್ಡ್ ರೇಗನ್ ಗೆ ಯುದ್ಧದ ದಾಹ ಆರಂಭವಾಗಿತ್ತು.
ಪಕ್ಕ ಹಾಲಿವುಡ್ ಸ್ಟೈಲ್ ನಲ್ಲಿ ಯಾರನ್ನು ಬೇಕಾದರೂ ಸದೆಬಡಿಯಬಹುದು ಎಂದುಕೊಂಡು ಯುದ್ಧಕ್ಕೆ ಕಾಲು ಕೆರೆಯುತ್ತಿದ್ದ ಕಾಲ.

ಯುದ್ಧ ಇನ್ನೇನು ಆರಂಭವಾಗಿಯೇ ಬಿಡುತ್ತದೆ ಎನ್ನುವ ಆತಂಕ ಕವಿದಿತ್ತು.
ಜಗತ್ತಿನ ಎಲ್ಲೆಡೆ ಇದರ ವಿರುದ್ಧ ಪ್ರತಿಭಟನೆಗಳು ಆರಂಭವಾಗಿದ್ದವು.

ಬೆಂಗಳೂರಿನಲ್ಲೂ ಒಂದು ಬೃಹತ್ ಪ್ರತಿಭಟನೆಗೆ ನಾಂದಿ ಹಾಡಲು ಜಿ ಆರ್ ಹಾಗೂ ಅವರ ಬಳಗ ಸಜ್ಜಾಗಿತ್ತು
ಆಗ ಆಕಸ್ಮಿಕವಾಗಿ ಸಿಕ್ಕವನೇ ನಾನು

ಜಿ ಆರ್ ನನ್ನನ್ನು ನೋಡಿದವರೇ ‘ಈ ಬಗ್ಗೆ ಒಂದು ಕವಿತೆ ಬರೆದುಕೊಡಿ’ ಎಂದರು.
ಯಥಾಪ್ರಕಾರ ಎಲ್ಲಕ್ಕೂ ‘ಓಕೆ, ಅದಕ್ಕೇನಂತೆ..’ ಎನ್ನುವ ನಾನು ಹಾಗೆಯೇ ಅಂದು ಬಂದಿದ್ದೆ.
ಆದರೆ ಜಿ ಆರ್ ತುಂಬಾ ಸೀರಿಯಸ್ಸಾಗಿ ಇದನ್ನು ತೆಗೆದುಕೊಂಡಿದ್ದರು.
ಬಿಡಲಿಲ್ಲ.

ನಾನೋ ಆಗ ತಾನೇ ಕವಿತೆ ಬರೆಯುವುದಕ್ಕೆ ಶುರು ಮಾಡಿದ್ದವ. ಅಂತಹದ್ದರಲ್ಲಿ ಹಾಡು ಬರಿ ಎಂದರೆ ಸಾಧ್ಯವೇ ಇಲ್ಲ ಎಂದು ಕೈ ಚೆಲ್ಲಿ ಕೂತೆ.
ಆಗಲೇ ನೋಡಿ ನನ್ನೆದುರು, ನನ್ನ ಕಪಾಟಿನಲ್ಲಿ ನಾನು ಎಂದೋ ತಂದಿಟ್ಟಿದ್ದ ಆ ಪುಸ್ತಕ ಕಂಡಿದ್ದು
Dont shoot at our rainbow’ ಎನ್ನುವ ಪುಸ್ತಕ ಅದು

ಜಗತ್ತಿನ ಮಕ್ಕಳ ಮೇಲೆ ಯುದ್ಧ ಮಾಡಿದ ಪರಿಣಾಮದ ಬಗೆಗಿನ ಪುಸ್ತಕ.
ಹೇಳಿಕೇಳಿ ಅದು ಫೋಟೋ ಬುಕ್.
ಒಂದೊಂದೇ ಪುಟ ತಿರುಗಿಸುತ್ತಾ ಹೋದಂತೆ ಮನಸ್ಸು ಭಾರವಾಗುತ್ತಾ ಹೋಯಿತು. ಕೈ ಇಲ್ಲದ ಮಕ್ಕಳು, ಮೈ ತುಂಬಾ ಕಲೆ ಹೊದ್ದ ಕಂದಮ್ಮಗಳು, ಆರ್ತನಾದ ಮಾಡುತ್ತಿರುವ ಅಮ್ಮಂದಿರು.
ಪುಸ್ತಕದ ಕೊನೆ ಪುಟ ತಿರುಗಿಸುವ ವೇಳೆಗೆ ಮನ ಕದಡಿಹೋಗಿತ್ತು.

ಆಗಲೇ ಆ ಪತ್ರವೂ ಕಣ್ಣಿಗೆ ಬಿದ್ದದ್ದು.
ಕೇರಳದ ಕೊಟ್ಟಾಯಂನಿಂದ ರೀನಾ ಜೋಸೆಫ್ ಎನ್ನುವ ಪುಟ್ಟ ಹುಡುಗಿ ನೇರವಾಗಿ ರೇಗನ್ ಗೇ ಪತ್ರ ಬರೆದಿದ್ದಳು.

‘ಅಂಕಲ್ ರೇಗನ್,
ನಿಮ್ಮ ಪದಕೋಶದಲ್ಲಿ ‘ಶಾಂತಿ’ ಎಂಬುದಕ್ಕೆ ‘ಯುದ್ಧ’ ಎಂಬ ಅರ್ಥವಿದೆಯೆ?
ನಮಗೆಲ್ಲಾ ತುಂಬಾ ಹೆದರಿಕೆಯಾಗಿದೆ.
ನಾವು ಉಳಿಯಲು ಒಂದು ಸ್ವಲ್ಪವಾದರೂ ಪ್ರಯತ್ನಪಡಲು ಆಗುವುದಿಲ್ಲವೆ?’

ಎನ್ನುವ ಸಾಲು ಓದಿದ್ದೇ ನನ್ನೊಳಗೊಂದು ‘ಶಾಲ್ಮಲೆ’.

ರೆಕ್ಕೆ ಬಿಡಿಸಿ ಬಿಳಿ ಪಾರಿವಾಳಗಳೆ
ಯುದ್ಧ ನಾಡಿನಲ್ಲಿ
ಶಾಂತಿ ಅರಳಲಿ ಎದೆಗಳಲ್ಲಿ
ಹಾಡು ಕೊರಳಿನಲ್ಲಿ

ಅಷ್ಟೇ ಅಲ್ಲಿಂದ ಹಾಡು ಅದೇಗೆ ಮುಕ್ತಾಯ ಕಂಡಿತೋ ಗೊತ್ತಿಲ್ಲ

ಬೆಟ್ಟದ ಸಾಲು ನಡೆದಾಡಿದ ರಸ್ತೆ
ತಾಯಿಯ ಕರುಳು ಬಂಗಾರದ ಮರಳು
ತಣ್ಣನೆ ಕೊರೆಯುವ ರಾತ್ರಿಗಳಿಂದ
ಸ್ವಾತಿಯ ಮುತ್ತನು ಕಸಿಯದಿರಿ

ಅದಾಗಿ ಕೆಲ ದಿನಗಳಲ್ಲೇ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಮುಂದಿರುವ, ಆಗ ಬೃಹತ್ ಆಗಿದ್ದ ಪಾರ್ಕ್ ನಲ್ಲಿ ಯುದ್ಧ ವಿರೋಧಿ ಸಮಾವೇಶ.
ರಾಜ್ಯದ ಎಲ್ಲೆಡೆಯಿಂದ ಜನ ಸಾಲುಗಟ್ಟಿ ಬಂದಿದ್ದರು.

ಹಾಡಿನ ಬ್ಯಾಂಡ್ ವೇದಿಕೆಯ ಮೇಲೆ ಬಂತು
‘ಕಾರ್ಯಕ್ರಮಕ್ಕೆ ಮುನ್ನ ಸಮಾವೇಶದ ಆಶಯ ಬಿಂಬಿಸುವ ಹಾಡು ಈಗ’ ಎಂದು ಸಂಘಟಕರು ಘೋಷಿಸಿದರು.
ನಾನು ಜನಜಂಗುಳಿಯ ಮಧ್ಯೆ, ಗೆಳೆಯರ ದಂಡು ಕಟ್ಟಿಕೊಂಡು ಕಡಲೇಕಾಯಿ ಮಾರುತ್ತಿದ್ದವನ ಜೊತೆ ಚೌಕಾಸಿ ಮಾಡುತ್ತಿದ್ದೆ.
ಆಗಲೇ ಕಿವಿಗೆ ಬಿತ್ತು- ರೆಕ್ಕೆ ಬಿಡಿಸಿ ಪಾರಿವಾಳಗಳೇ…

ನನ್ನ ಕಿವಿಯನ್ನು ನಾನೇ ನಂಬಲಿಲ್ಲ.
ನನಗಾದ ಶಾಕ್ ನಲ್ಲಿ ನಾನು ಕೊಂಡುಕೊಂಡಿದ್ದ ಕಡಲೇಕಾಯಿ ಯಾರು ತಿಂದು ಮುಗಿಸಿದರೋ ಅದೂ ಗೊತ್ತಾಗಲಿಲ್ಲ.
ಜಿ ಆರ್ ಗಾಗಿ ಮಾತ್ರ ಬರೆದ ಕವಿತೆ ಆ ದೊಡ್ಡ ಬ್ಯಾಂಡ್ ನಲ್ಲಿ ರೇಗನ್ ಗೆ ಚುರುಕು ಮುಟ್ಟಿಸುತ್ತಾ ಇತ್ತು.

ಇದಾದ ಸ್ವಲ್ಪ ತಿಂಗಳಲ್ಲಿ ‘ಸಮುದಾಯ’ ರಂಗ ತಂಡ ನೂರು ಅಡಿಗಳ ಕ್ಯಾನವಾಸ್ ನಲ್ಲಿ ಯುದ್ಧ ವಿರೋಧಿ ಚಿತ್ರ ರಚಿಸಿ
ರಾಜ್ಯಾದ್ಯಂತ ಕೊಂಡೊಯ್ಯುವ ಜಾಥಾ ರೂಪಿಸಿತು.
ಆಗಿನ ಕಾಲಕ್ಕೆ ಅದು ದೊಡ್ಡ ಸಾಹಸವೂ ಹೌದು ಹಾಗೂ ಮಹತ್ವದ್ದೂ ಹೌದು.

ಚಿತ್ರಕಲಾ ಪರಿಷತ್ ನಲ್ಲಿ ಜಾತಾದ ಉದ್ಘಾಟನೆ.
‘ಜಾತಾದ ಆಶಯ ಗೀತೆ ಈಗ ಸಿ ಬಸವಲಿಂಗಯ್ಯನವರಿಂದ’ ಎಂದು ಘೋಷಿಸಿದರು.
ಬಸೂ ವೇದಿಕೆ ಮೇಲೆ ಬಂದವನೇ ತನ್ನ ಕೊರಳು ಕೊಟ್ಟದ್ದು ಅದೇ ನನ್ನ ಹಾಡಿಗೆ.
ನನ್ನನ್ನು ನಾನೇ ನಂಬಿಸಿಕೊಳಬೇಕಾಯಿತು.

ಆ ನಂತರ ಜಾತಾದ ಅಂಗವಾಗಿ ಹೊರತಂದ ಸ್ಮರಣ ಸಂಚಿಕೆಯಲ್ಲಿ ಈ ಹಾಡು ಪ್ರಕಟವಾಯಿತು.
ಬಸೂ ಮುತುವರ್ಜಿ ವಹಿಸಿ ರಾಯಚೂರು ಸಮುದಾಯದಿಂದ ಈ ಹಾಡನ್ನು ಹೊತ್ತ ಕ್ಯಾಸೆಟ್ ತಂದರು.
ಆಮೇಲೆ ಈ ಹಾಡು ಥೇಟ್ ರೆಕ್ಕೆ ಬಿಚ್ಚಿದ ಪಾರಿವಾಳದಂತೆ ನನ್ನ ಮಡಿಲು ಬಿಟ್ಟು ದಿಕ್ಕು ದಿಕ್ಕಿಗೆ ಹಾರಿತು

ಇದೆಲ್ಲಾ ಆದ ತಿಂಗಳುಗಳ ನಂತರ ನಾನು ಝಾನ್ಸಿಯಲ್ಲಿದ್ದೆ. ರಾಣಿ ಲಕ್ಷ್ಮೀಬಾಯಿಯ ಝಾನ್ಸಿಯಲ್ಲಿ.
ರಾಷ್ಟ್ರಮಟ್ಟದ ಒಂದು ಸಮಾವೇಶಕ್ಕಾಗಿ
ಸಮಾವೇಶಕ್ಕೆ ಬಂದವರಲ್ಲಿ ಹೋರಾಟದ ಬಿಸಿಯುಸಿರು ಇತ್ತು.

ತಿಂಗಳಿಗೂ ಹೆಚ್ಚು ಕಾಲ ಕರ್ನಾಟಕದ ಹಳ್ಳಿ ಹಳ್ಳಿಗಳನ್ನು ಸುತ್ತಿ ಬೀದಿ ನಾಟಕವನ್ನು ಮಾಡಿ ಮಹಿಳೆಯರಿಗೆ ದನಿಯಾಗಿದ್ದ ಗುಂಪೊಂದು ನನ್ನ ಬಳಿ ‘ಒಂದು ಹಾಡು ಹೇಳ್ತೀವಿ ಕೇಳಿ’ ಎಂದರು
‘ನಮ್ಮ ಇಷ್ಟದ ಹಾಡು’ ಎಂದರು. ಹೇಳಿ ಅಂದೆ

ಅವರು ತಮ್ಮ ಜೊತೆ ಇದ್ದ ತಮಟೆಗೆ ಜೀವ ಕೊಟ್ಟವರೇ
‘ರೆಕ್ಕೆ ಬಿಡಿಸಿ ಪಾರಿವಾಳಗಳೇ..’ ಎಂದು ದನಿ ಎತ್ತಿದರು.

ಅವರಿಗೆ ಆ ಹಾಡು ನಾನು ಬರೆದದ್ದು ಎಂದೇ ಗೊತ್ತಿರಲಿಲ್ಲ.
ನಾನೂ ಸಹಾ ಅದು ನನ್ನದು ಎಂದು ಹೇಳಿಕೊಳ್ಳದೆ ಆಕಾಶದತ್ತ ನೋಡಿದೆ.
ಎಷ್ಟೊಂದು ಬೆಳಕಿನ ಚುಕ್ಕಿ ಕಂಡವು ಅಲ್ಲಿ..

ಹಿನ್ನೆಲೆಯಲ್ಲಿ-
ಕನಸು ಹೊತ್ತ ಆ ಕಣ್ಣುಗಳನ್ನು
ಬಣ್ಣ ಬಣ್ಣದ ಪಕಳೆಗಳನ್ನು
ಬರೆಯದ ಕವಿತೆಯ ಸಾಲುಗಳನ್ನು
ಹಾಡುತಿರುವ ಈ ಕೊರಳುಗಳನ್ನು
ಯುದ್ಧದ ಭೀತಿಯೆ ಕಲಕದಿರಿ
ಎನ್ನುವ ದನಿ ಕೇಳುತ್ತಿತ್ತು…

ನನ್ನ ಕೊರಳೂ ಉಬ್ಬಿ ಬಂದಿತ್ತು..