ಜಿ.ಎನ್ ಮೋಹನ್ ಸ್ಪೆಷಲ್: ಗಾಯತ್ರಿ ನನ್ನೊಳಗಿನ ಸಾಕ್ಷಿಪ್ರಜ್ಞೆ..

ಗಾಯತ್ರಿ ನನ್ನೊಳಗಿನ ಸಾಕ್ಷಿಪ್ರಜ್ಞೆ..
—-
ಸರಿಯಾಗಿ ನೆನಪಿದೆ.
ಅದು ೧೯೮೧
ಇಡೀ ಭಾರತ ತುರ್ತು ಪರಿಸ್ಥಿತಿಯಿಂದ ಬಳಲಿ ಆಗ ತಾನೇ ಮಗ್ಗುಲು ಬದಲಿಸಿಕೊಂಡಿತ್ತು
ಒಂದು ಪ್ರಜಾಪ್ರಭುತ್ವ ಹೇಗೆ ಸರ್ವಾಧಿಕಾರಿಯಾಗಿಬಿಡಬಹುದು ಎಂಬ ನೋಟ ಪ್ರತಿಯೊಬ್ಬರಿಗೂ ಧಕ್ಕಿ ಹೋಗಿತ್ತು
ಮುಖದ ಮೇಲೆ ಸಿಟ್ಟು, ಕಣ್ಣುಗಳಲ್ಲಿ ಕೆಂಡ ಇನ್ನೂ ಆರಿರಲಿಲ್ಲ
‘ಸಮುದಾಯ’ ತಂಡ ಸಾಂಸ್ಕೃತಿಕ ಜಾಥಾ ರೂಪಿಸಿ ಜನರನ್ನು ಪ್ರಶ್ನೆ ಮಾಡಲು ಪ್ರೇರೇಪಿಸುತ್ತಿತ್ತು
ಅದಕ್ಕೆ ಸಿಕ್ಕ ಜನ ಬೆಂಬಲ, ಜನರಲ್ಲಿ ಇದ್ದ ಪ್ರಶ್ನೆಯ ಹಸಿವು, ಜಗ್ಗಿ ಉತ್ತರ ಪಡೆಯಬೇಕೆಂಬ ನಿಲುವು.. ಇವು ಮತ್ತೆ ‘ಸಮುದಾಯ’ ತನ್ನ ಎರಡನೆಯ ಜಾಥಾಗೆ ಸಜ್ಜಾಗಲು ಹುಮ್ಮಸ್ಸು ನೀಡಿತ್ತು
೪೬, ಅಂಗಡಿ ಬೀದಿ, ನರಸಿಂಹರಾಜ ಕಾಲೋನಿ ಇಂತಹ ಉರಿವ ಕಣ್ಣುಗಳವರಿಂದ ತುಂಬಿ ಹೋಗಿತ್ತು
ಆಗ ಅಲ್ಲಿಗೆ ಕಾಲಿಟ್ಟವರು ಸದಾ ನಗುವನ್ನೇ ಮುಖಕ್ಕೆ ಹರಡಿಕೊಂಡಿದ್ದ ಎನ್ ಗಾಯತ್ರಿ
ಆಗ ಪ್ರಸನ್ನ ಶುಭಾಶಯ ಪತ್ರಗಳ ಲೋಕಕ್ಕೆ ಒಂದಿಷ್ಟು ಹೊಸ ಗಾಳಿ ಹಾಯುವಂತೆ ಮಾಡಿದ್ದರು. ಕೈಯಾರೆ ಮಾಡಿದ ಶುಭಾಶಯ ಪತ್ರಗಳನ್ನು ಬೀದಿ ಬೀದಿಯಲ್ಲಿ ಮಾರಿ ಜಾಥಾಗೆ ಹಣ ಸಂಗ್ರಹಿಸುತ್ತಿದ್ದೆವು
ಅಂತಹದೇ ಕೆಲಸದಲ್ಲಿದ್ದಾಗ ಬಂದದ್ದು ಗಾಯತ್ರಿ
ಕಬ್ಬಿಣದ ಅಂಗಡಿಯಲ್ಲಿ ಜೇನ್ನೊಣಕ್ಕೆ ಹೇಗೆ ಏನೂ ಕೆಲಸವಿಲ್ಲವೋ ಹಾಗೆ ಕೆಂಡದ ಮನೆಯಲ್ಲಿ ಮುಗುಳ್ನಗೆಗೇನು ಕೆಲಸ ?
ಹಾಗಾಗಿ ನಾನು ಪಕ್ಕದವರಲ್ಲಿ ಕೇಳಿಯೇ ಬಿಟ್ಟೆ ‘ಯಾರಿವರು?’ ಅಂತ
ಎನ್ ಗಾಯತ್ರಿ ಎಂದರು
ನಾನು ನನಗೇ ಗೊತ್ತಿಲ್ಲದಂತೆ ಎದ್ದು ನಿಂತುಬಿಟ್ಟಿದ್ದೆ
ಏಕೆಂದರೆ ಅವರು ಕೇವಲ ಎನ್ ಗಾಯತ್ರಿ ಆಗಿರಲಿಲ್ಲ
ಅವರು ಮಹಿಳಾ ಹೋರಾಟಕ್ಕೆ ಮಾತು ಕೊಟ್ಟ ಎನ್ ಗಾಯತ್ರಿ ಆಗಿದ್ದರು
ಎನ್ ಗಾಯತ್ರಿ ‘ದುಡಿಯುವ ಮಹಿಳೆಯರ ಸಮನ್ವಯ ಸಮಿತಿ’ಯ ಮೂಲಕ ಒಂದು ದೊಡ್ಡ ಹೋರಾಟಕ್ಕೆ ಕೀಲೆಣ್ಣೆಯಾಗಿದ್ದರು.
‘ಕೋಟಿ ಕೋಟಿ ಬಾಧೆಗಳಲ್ಲಿ, ಲಕ್ಷಾಂತರ ನೋವುಗಳಲ್ಲಿ, ಹುಟ್ಟಿ ಬೆಳೆದ ತಂಗಿಯರಿಗೆ’ ದನಿ ಇದೆ ಎನ್ನುವುದನ್ನು ಅರಿವು ಮಾಡಿಕೊಡಲು ಆರಂಭಿಸಿದ್ದರು
ಆನಂತರ ನಾನು ಅವರನ್ನು ಪದೇ ಪದೇ ನೋಡಿದೆ
ನರಗುಂದ ಹೋರಾಟ, ಕಾರ್ಮಿಕ ಸಂಘಟನೆಗಳ ಚಳವಳಿ, ಕುದುರಿಮೋತಿ ಬೆತ್ತಲೆ ಪ್ರಕರಣ ಹೀಗೆ..
‘ಎನ್’ ಅಂದರೆ ನಗುಮುಖದ ಎಂದು ಅಂದುಕೊಂಡಿದ್ದ ನಾನು ಅವರು ವೇದಿಕೆ ಹತ್ತಿ ಮಾತನಾಡುವಾಗ, ಅನೇಕ ಸಭೆಗಳಲ್ಲಿ ತಮ್ಮ ನೋಟ ಮಂಡಿಸುವಾಗ ಆ ನಗುವಿನ ಗಾಯತ್ರಿಯೊಳಗಿದ್ದ ಹೋರಾಟಗಾರಳ ಕಿಚ್ಚನ್ನು ಕಂಡೆ.
ಆ ನಂತರ ನನ್ನ ಅವರ ನಡುವಿನ ಪರಿಚಯಕ್ಕೆ ದಶಕಗಳ ಇತಿಹಾಸವಿದೆ
ಜಗಳಕ್ಕೆ ಕಾಲು ಕೆರೆಯುವ ನಾನು, ನಗುವಿನಲ್ಲೇ ಮರು ಹೊಡೆತ ನೀಡುವ ಅವರೂ..
ಗಾಯತ್ರಿ ಹಾಗೂ ಅವರ ಬಳಗ ‘ಅಚಲ’ ಪತ್ರಿಕೆ ಹುಟ್ಟು ಹಾಕುವ ವೇಳೆಗೇ ಕಿರು ಪತ್ರಿಕೆಗಳು ತಮ್ಮ ಅಚಲತೆಯನ್ನು ಕಳೆದುಕೊಂಡು ಸಾಕಷ್ಟು ಕಾಲವಾಗಿತ್ತು.
ಆದರೆ ಎನ್ ಗಾಯತ್ರಿ ಮತ್ತು ಅವರ ಬಳಗಕ್ಕೆ ಅದು ಪತ್ರಿಕೆ ಮಾತ್ರವಾಗಿರಲಿಲ್ಲ. ಅವರ ಸಂಸ್ಥೆಯ ಚಿಹ್ನೆಯೇ ಹೇಳುವಂತೆ ಅದು ವಿಚಾರದ ಪಂಜು.
ಹಾಗಾಗಿ ಗಾಯತ್ರಿ ಊರೂರು ತಿರುಗಿ, ಕಾರ್ಯಕ್ರಮ ನಡೆಸಿ, ಚಂದಾಗಾಗಿ ಬೆನ್ನತ್ತಿ.. ಹೀಗೆ ಪತ್ರಿಕೆಯನ್ನು ವರ್ಷಗಟ್ಟಲೆ ನಡೆಸಿದರು.
ದೂರದ ಊರುಗಳಿಂದ ನಾನೂ ಅದಕ್ಕೆ ಲೇಖನ ಬರೆಯುತ್ತಾ, ಅವರು ನಡೆಸುವ ಸಂಕಿರಣದಲ್ಲಿ ಮಾತನಾಡುತ್ತಾ, ಚಂದಾ ಎತ್ತುತ್ತ ಜೊತೆಗೆ ನಿಂತೆ.
ಎಷ್ಟೋ ಜನರಿಗೆ ಹೋರಾಟ ಎನ್ನುವುದು ಮನೆಯ ಅಂಗಳದ ಆಚೆಯೇ..
ಮನೆಯೊಳಗೆ ‘ನೋ, ನೋ’
ಆದರೆ ನನಗೆ ಗಾಯತ್ರಿ ಬಗ್ಗೆ ಇನ್ನೂ ಗೌರವ ಹೆಚ್ಚಾಗಲು ಅವರು ಮನೆಯೊಳಗೂ ಮನೆಯಾಚೆಯೂ ಒಂದೇ ರೀತಿ ಇದ್ದರು.
ಅವರ ಚಳವಳಿಯ ನೋಟಕ್ಕೆ ಮುಖವಾಡಗಳಿರಲಿಲ್ಲ
ಗಾಯತ್ರಿ ಭಿನ್ನ
ಹೋರಾಟ ಮಾಡುವುದರಲ್ಲಿ ಮಾತ್ರವಲ್ಲ, ವಿಚಾರದಲ್ಲೂ..
ಮೊನ್ನೆ ಗಾಯತ್ರಿ ಮತ್ತೆ ಮುಖ್ಯವಾಗಿ ಎದ್ದು ಕಂಡದ್ದು
ವಿನಯಾ ವಕ್ಕುಂದಗೆ ನರಹಳ್ಳಿ ಪ್ರಶಸ್ತಿ ಕೊಡುವ ಕಾರ್ಯಕ್ರಮದಲ್ಲಿ..
ಅಲ್ಲಿ ಎಚ್ ಎಸ್ ರಾಘವೇಂದ್ರ ರಾವ್ ಗುರುತಿಸಿದರು
ಮೊದಲು ಡಾ ವಿನಯಾ ಒಕ್ಕುಂದ ಆಗಿದ್ದ ವಿನಯಾ ಹೇಗೆ ಹೆಸರಲ್ಲಿದ್ದ ಒಕ್ಕುಂದ, ಡಾ.. ಎಲ್ಲವನ್ನೂ ಬಿಟ್ಟುಕೊಡುತ್ತ ಕೇವಲ ವಿನಯಾ ಆಗಿ ಉಳಿದರು ಎಂದು.
ಆಗ ನನಗೆ ಎದ್ದು ಕಂಡಿದ್ದು ಎದುರಿಗೇ ಕುಳಿತಿದ್ದ ಎನ್ ಗಾಯತ್ರಿ
ಹಾಗೆ ಅನೇಕ ಮಹಿಳೆಯರು ವಿಚಾರಗಳಲ್ಲಿ ಹೊಸತನವನ್ನು ಹುಡುಕುತ್ತಾ ನಡೆದಿದ್ದರ ಹಿಂದೆ ಅವರ ಹೆಜ್ಜೆ ಗುರುತು ಸದಾ ಇದೆ
ಎನ್ ಗಾಯತ್ರಿ ಸಂಘಟನೆ ಎಂದೂ ಮಹಿಳೆಯರನ್ನು ಕೂಡಿಸಿಕೊಂಡು
ಪುರುಷರ ವಿರುಧ್ಧ ಬೀದಿಗಿಳಿಯಲಿಲ್ಲ
ಬದಲಿಗೆ ಪುರುಷರನ್ನೂ ಸೇರಿಸಿಕೊಂಡು ಪುರುಷರ ವಿರುದ್ಧ ಬೀದಿಗಿಳಿದರು
ರಿಸರ್ವ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಲೇ ಇಷ್ಟೆಲ್ಲಾ ಮಾಡಿದ ಗಾಯತ್ರಿ ನನ್ನೊಳಗಿನ ಸಾಕ್ಷಿ ಪ್ರಜ್ಞೆ.
ಗಾಯತ್ರಿ ‘ಅಚಲ’ಕ್ಕೆ ಬರೆಯುತ್ತಿದ್ದ ಸಂಪಾದಕೀಯಗಳನ್ನು ಓದಬೇಕು
ಅವು ಖಡಕ್ ನಿಲುವಿನ, ಸಿಡಿಗುಂಡುಗಳು
ಒಂದು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಗಾಯತ್ರಿ ಮೊಗೆದುಕೊಟ್ಟ ಕಿರು ದಾರಿಗಳು
ಹಾಗಾಗಿಯೇ ನನಗೆ ಹೋರಾಟಗಾರ್ತಿ ಗಾಯತ್ರಿ ಜೊತೆಗೆ ಬರಹಗಾರ್ತಿ ಗಾಯತ್ರಿಯೂ ಇಷ್ಟ
ಗಾಯತ್ರಿ ನನ್ನೊಳಗೆ ಸದಾ ಪ್ರಶ್ನೆ ಹುಟ್ಟುಹಾಕುತ್ತಲೇ ಇರುತ್ತಾರೆ
ನನ್ನೊಳಗಿನ ಪುರುಷ ತಲೆ ಎತ್ತಿದಾಗೆಲ್ಲಾ ಅವರ ಪ್ರೀತಿಯ ಗದರುವಿಕೆ ಕೇಳಿಸುತ್ತದೆ