ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಒಗಟೊಂದು ಹೇಳತೀವಿ ಕೇಳಿರಣ್ಣಾ, ಕುಂತ ಮಂದಿ ಮನವಿಟ್ಟು ಹೇಳೀರಣ್ಣಾ..

ಒಗಟೊಂದು ಹೇಳತೀವಿ ಕೇಳಿರಣ್ಣಾ, ಕುಂತ ಮಂದಿ ಮನವಿಟ್ಟು ಹೇಳೀರಣ್ಣಾ..

‘A.K.47 ಅಂದ್ರೇನು?’ ಅಂದೆ. ನನ್ನ ಎದುರು ಐದು ವಿಶ್ವವಿದ್ಯಾಲಯಗಳ ಸುಮಾರು 20 ಮಂದಿ ಕುಳಿತಿದ್ದರು. ಕಣ್ಣು ರೆಪ್ಪೆಮಿಟುಕಿಸುವುದರೊಳಗೆ ‘ಶಸ್ತ್ರಾಸ್ತ್ರ ಸಾರ್’ ಅಂತ ಒಕ್ಕೊರಲಿನಿಂದ ಗುಂಡೇಟು ಹೊಡೆದ ಹಾಗೇ ಉತ್ತರ ಕೊಟ್ಟರು. ‘ಇಷ್ಟೂ ಗೊತ್ತಿಲ್ವ’ ಅನ್ನೋ ಗೆದ್ದ ನಗು ಅವರ ಮುಖದಲ್ಲಿ ಕುಣೀತಿತ್ತು. ‘ಓ.ಕೆ. A.K.47 ಅಂತ ಯಾಕೆ ಹೆಸರು ಬಂತು? ಅಂದೆ. ಆಗ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. A.K.47 ಗನ್ ಅನ್ನೋದು ಗೊತ್ತು. ಆದ್ರೆ ಅದರ ಹೆಸರು ಇಟ್ಟದ್ದು ಯಾರಪ್ಪಾ? ಅಂತ ತಲೆ ಕೆರೆದುಕೊಳ್ಳತೊಡಗಿದರು.

ರೂಮಿನಲ್ಲಿ ನಿಶ್ಯಬ್ದ ವಾತಾವರಣ. ಎಕೆ 47 ಅಂದ್ರೆ…? ಅನ್ನುವುದು ಆ ಕ್ಷಣಕ್ಕೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಹೋಗಿತ್ತು. ಅದು ಮೀಡಿಯಾ ವಿದ್ಯಾರ್ಥಿಗಳ ದಂಡು. ತಮ್ಮ ಎರಡು ವರ್ಷದ ಕಾಲೇಜ್ ಲೈಫ್ ಮುಗಿಸಿ ಇನ್ನೇನು ನ್ಯೂಸ್ ರೂಂ ಪ್ರವೇಶಿಸಬೇಕಾಗಿದ್ದವರು. ಈಗ ಸ್ಟೂಡೆಂಟ್ ಗಳಿಗೆ ಪೇಪರ್ ಮಾಡುವುದು ಗೊತ್ತು. ಕ್ಯಾಮರಾ ಹಿಡಿಯುವುದು ಗೊತ್ತು. ಎಲೆಕ್ಟ್ರಾನಿಕ್ ಮೀಡಿಯಾದ ಓಟಕ್ಕೆ ತಕ್ಕಂತೆ ಸ್ಕ್ರಿಪ್ಟ್ ಬರೆಯುವುದು ಗೊತ್ತು. ಮೌಸ್ ಹಿಡಿದ ಹತ್ತೇ ನಿಮಿಷದಲ್ಲಿ ವಾಹ್! ಎನಿಸುವ ಗ್ರಾಫಿಕ್ಸ್ ರೂಪಿಸುವುದು ಗೊತ್ತು. ಪಟಪಟ ಅರಳು ಹುರಿದಂತೆ ಮಾತನಾಡುವುದೂ ಗೊತ್ತು. ಪಿಟಿಸಿ ಕೊಡಬೇಕೆಂದರೆ ಬ್ಯಾಕ್ ಗ್ರೌಂಡ್ ಹೇಗಿರಬೇಕು, ನಾನು ಹೇಗೆ ಕಾಣಬೇಕು, ಕ್ಯಾಮರಾದಲ್ಲಿ ಯಾವ ಡ್ರೆಸ್ ಚೆನ್ನಾಗಿ ಕಾಣುತ್ತೆ ಅಂತಲೂ ಗೊತ್ತು. ಆದರೆ ಗೊತ್ತಿಲ್ಲದಿರುವುದು ಇದೇ. ಪತ್ರಕರ್ತನಿಗೆ ಎಲ್ಲವೂ ಗೊತ್ತಿರಬೇಕು ಎನ್ನುವುದು. ಎಲ್ಲವೂ ಅಂದರೆ ಅಕ್ಷರಶಃ ಎಲ್ಲವೂ ಗೊತ್ತಿರಬೇಕು.

ಆಕಾಶದ ಬಣ್ಣ ನೀಲಿ ಏಕೆ? ನೆಲ್ಸನ್ ಮಂಡೇಲಾ ಜೈಲಲ್ಲಿ ಇದ್ದದ್ದು ಎಷ್ಟು ವರ್ಷ? ರಷ್ಯಾದಲ್ಲಿ ವಿದಾಯ ಅನ್ನುವುದಕ್ಕೆ ಏನು ಹೇಳುತ್ತಾರೆ? ನೈಜೀರಿಯಾದಲ್ಲಿ ಎಣ್ಣೆ ಕಂಪನಿಗಳು ಅಷ್ಟೊಂದಿರುವುದು ಏಕೆ? ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಬರೆದ ವರ್ಷ ಯಾವುದು? ವಿ.ಕೃ.ಗೋಕಾಕರಿಗೂ, ಗೋಕಾಕ್ ಚಳವಳಿಗೂ ಇರುವ ಸಂಬಂಧ ಏನು? ಶಂಕರ್ ನಾಗ್ ಸತ್ತ ಸ್ಥಳ ಯಾವುದು? ನರಗುಂದದಲ್ಲಿ ಗುಂಡೇಟು ಬಿದ್ದದ್ದು ಯಾವಾಗ? ಜೆ.ಎಚ್.ಪಟೇಲ್ ಹೆಸರಲ್ಲಿ ಜೆ.ಎಚ್ ಎಂದರೆ ಏನು? ಶ್ರೀನಿವಾಸ ಜಿ ಕಪ್ಪಣ್ಣ ಅವರ ಹೆಸರಿಗೆ ಕಪ್ಪಣ್ಣ ಎನ್ನುವುದು ಸೇರಿದ್ದು ಹೇಗೆ? ಹೀಗೆ… ಒಂದು ಸಲ ಹೀಗಾಯ್ತು. ಮಂಗಳೂರಿನ ‘ಪ್ರಜಾವಾಣಿ’ ಕಚೇರಿಯ ಫೋನ್ ಸದ್ದು ಮಾಡ ತೊಡಗಿತು.

ನಾನು ಫೋನ್ ಎತ್ತಿಕೊಂಡೆ. ಆ ಕಡೆ ಇದ್ದವರು ‘ಸಾರ್, ಒಂದು ಪ್ಲೇನ್ ರೇಟ್ ಎಷ್ಟು ಸಾರ್’ ಅಂದ್ರು. ನನ್ನ ಕಿವಿ ನನಗೇ ಕೇಳದಂತಾಯಿತು. ಮತ್ತೆ ‘ಹಾಂ.. ಏನಂದ್ರಿ?’ ಅಂದೆ. ಒಂದು ವಿಮಾನದ ಬೆಲೆ ಎಷ್ಟು? ಅಂತ ಪ್ರಶ್ನೆ ಬಂತು. ನಾನು ತಕ್ಷಣ ಗರಂ ಆದವನೇ ‘ಇದೇನು ಜೆಟ್ ಏರ್ ವೇಸ್ ಆಫೀಸಾ. ಪ್ರಜಾವಾಣಿ ಪೇಪರ್ ಕಚೇರಿ’ ಎನ್ನಬೇಕೆಂದುಕೊಂಡವನು ಬಾಯಿ ಮುಚ್ಚಿಕೊಂಡೆ. ಹೌದಲ್ಲವಾ ಅವರು ಈ ಪ್ರಶ್ನೆಯ್ನು ಇನ್ನಾರಿಗೆ ಕೇಳಲು ಸಾಧ್ಯ? ಒಂದು ಬ್ಯಾಂಕಿಗೋ, ಎಲ್ ಐಸಿ ಕಚೇರಿಗೋ, ಕನ್ನಡ ಸಂಸ್ಕೃತಿ ಇಲಾಖೆಗೋ, ಹಳ್ಳಿ ಮನೆ ಹೋಟೆಲ್ಲಿಗೋ ಫೋನ್ ಮಾಡಿ ಈ ವಿಷಯ ಕೇಳಲು ಸಾಧ್ಯವೇ? ರಾಜ್ ಕುಮಾರ್ ಅಪಹರಣವಾದಾಗ ನಾನು ಮಂಗಳೂರಿನಲ್ಲಿ, ‘ಈಟಿವಿ’ಯಲ್ಲಿದ್ದೆ, ಒಂದು ಮಣ ಫೋನ್ ಗಳ ಸುರಿಮಳೆ.

‘ಹೌದಾ, ಕಿಡ್ನಾಪ್ ಆಯ್ತಾ’ ಅಂತ. ‘ಇದೇನು ಗಾಜನೂರಲ್ಲ, ನಾನು ವೀರಪ್ಪನ್ ಅಲ್ಲ, ನನಗ್ಯಾಕೆ ಕೇಳೋದು’ ಅಂತ ನಾನು ಫೋನ್ ಕುಕ್ಕಲು ಸಾಧ್ಯವಿಲ್ಲ, ಮತ್ತೊಂದು ಬಾರಿ ‘ಪ್ರಜಾವಾಣಿ’ ಬೆಂಗಳೂರು ಕಚೇರಿಯಲ್ಲಿದ್ದೆ. ಒಂದೇ ಸಮ ಫೋನ್ ಗಳು ಆರಂಭವಾದವು. ‘ಇಂದಿರಾನಗರದಲ್ಲಿ ನೆಲ ಅದುರಿದೆಯಂತೆ ಹೌದಾ? ಅಂತ. ಫೋನ್ ಮಾಡಿದವರಿಗೆ ಭೂಕಂಪ ಆಗಿದೆ ಅನ್ನೋ ಭಯ. ‘ನಮ್ಮ ಆಫೀಸ್ ಇರೋದು ಎಂ.ಜಿ.ರೋಡ್ ನಲ್ಲಿ, ಇಂದಿರಾನಗರದಲ್ಲಿಲ್ಲ’ ಅಂತ ಫೋನ್ ಕಟ್ ಮಾಡಲು ಸಾಧ್ಯವಿಲ್ಲ. ‘ಯಾವುದೇ ಮೀಡಿಯಾ ಆಫೀಸ್ ಗೆ ಕೇಳಿ ನಾಳೆ ಬಂದ್ ಅಂತ ಗೊತ್ತಾದರೆ ಸಾವಿರಾರು ಫೋನ್ ಕಾಲ್ ಗಳ ಸುರಿಮಳೆ ಆಗುತ್ತೆ. ‘ನಾಳೆ ಸ್ಕೂಲ್ ಗೆ ರಜಾ ಕೊಟ್ಟಿದ್ದಾರಾ..?’ ಅಂತ. ಹಾಗಂತ ಪ್ರಜಾವಾಣಿ ಆಫೀಸೇನು ಡಿಡಿಪಿಐ ಮೌತ್ ಪೀಸಾ..? ಪತ್ರಕರ್ತ ಎಂದರೆ ಮಾಹಿತಿಯ ಕಣಜ. ನಡೆದಾಡುವ ವಿಕಿಪೀಡಿಯಾ, ಮೀಡಿಯಾ ಆಫೀಸ್ ಎಂದರೆ ಕಣ್ಣೆದುರಿಗಿರುವ ಗೂಗಲ್ ಸರ್ಚ್. ಪತ್ರಕರ್ತನಾದವನಿಗೆ ಸೈನ್ಸ್ ಟು ಸೆಕ್ಸ್ ಎಲ್ಲವೂ ಗೊತ್ತಿರಬೇಕು ಅಂತ ಜಗತ್ತು ಭಾವಿಸುತ್ತದೆ.

ಎಲ್ಲದ್ದಕ್ಕೂ ಕಾಮೆಂಟು ಕೊಡಬೇಕು ಅಂತ ಬಯಸುತ್ತೆ. ಪತ್ರಕರ್ತನ ಕೆಲಸವೂ ಹಾಗಿರುತ್ತದೆ. ನ್ಯೂಸ್ ಡೆಸ್ಕ್ ನಲ್ಲಿ ಕುಳಿತ ಜರ್ನಲಿಸ್ಟ್ ಕಥೆ ನೋಡಿ. ನೆಲ್ಸನ್ ಮಂಡೇಲ ಜೈಲುಗಳಿಂದ ಹೊರಬಂದಾಗ ಆತ ಪೊಲಿಟಿಕಲ್ ಕಾಮೆಂಟೇಟರ್, ವಿಶ್ವ ಕಪ್ ಜರುಗುವಾಗ ಸ್ಪೋರ್ಟ್ ಗೊತ್ತಿರುವಾತ. ರಿಜರ್ವ್ ಬ್ಯಾಂಕ್ ದಿಢೀರನೆ ಬಡ್ಡಿ ದರ ಹೆಚ್ಚಳಕ್ಕೆ ಮುಂದಾದಾಗ ಫೈನಾನ್ಶಿಯಲ್ ಎಕ್ಸ್ ಪರ್ಟ್. 9 ಗಂಟೆಯ ನಾಟಕ ನಡೆಯುತ್ತದೆ ಎನ್ನುವಾಗ ಥಿಯೇಟರ್ ಕ್ರಿಟಿಕ್. ಸೃಜನಾ ಕಾಯ್ಕಿಣಿಯ ರಂಗ ಪ್ರವೇಶ ಇದ್ದಾಗ ಡ್ಯಾನ್ಸ್ ಕ್ರಿಟಿಕ್. ಒಂದು ಮೀಡಿಯಾ ಕೆಲಸ ಎನ್ನುವುದು ಗೋಳದ ಮೇಲೊಂದು ಸುತ್ತು ಬಂದಂತೆ. ಅಷ್ಟೇ ಅಲ್ಲ, ಪಾತಾಳದಿಂದ ಆಕಾಶಕ್ಕೆ ನೆಗೆದಂತೆ. ಹೀಗೆ ಗೊತ್ತಿದ್ದರಿಂದಲೇ ‘ಪ್ಲೇನ್ ರೇಟ್ ಎಷ್ಟು’ ಅಂತ ಫೋನ್ ಬಂದಾಗ ನಾನು ತೀರಾ ಸಿಡಿಮಿಡಿಗೊಳ್ಳದೇ ಇದ್ದದ್ದು. ‘ಹತ್ತು ನಿಮಿಷ ಬಿಟ್ಟು ಫೋನ್ ಮಾಡಿ, ತಿಳಿಸುತ್ತೀನಿ’ ಅಂದೆ. ಅವರು ಫೋನ್ ಇಟ್ಟ ತಕ್ಷಣ ನಾನ್ ಜೆಟ್ ಏರ್ ವೇಸ್ ಕಚೇರಿಗೆ ಫೋನ್ ತಿರುಗಿಸಲು ಆರಂಭಿಸಿದೆ.

ಅತ್ತಲಿನ ದನಿ ‘ಎಲ್ಲಿಗೆ ಟಿಕೆಟ್ ಬುಕ್ ಮಾಡಬೇಕು’ ಅಂತ ಕೇಳಿತು. ನಾನು ‘ಟಿಕೆಟ್ ಬುಕ್ಕಿಂಗ್ ಬೇಡ ಒಂದು ಪ್ಲೇನ್ ರೇಟು ಎಷ್ಟು’ ಎಂದೆ. ಆ ಕಡೆ ಇದ್ದ ಹುಡುಗಿ ಮೂರ್ಛೆ ಹೋಗುವುದೊಂದೇ ಬಾಕಿ ಇತ್ತೇನೋ. ‘ಇಲ್ಲಿ ವಿಮಾನ ಮಾರುವುದಿಲ್ಲ ಸಾರ್, ವಿಮಾನದ ಟಿಕೆಟ್ ಮಾರ್ತೀವಿ’ ಅಂದಳು. ನಾನು ನನ್ನ ಪರಿಸ್ಥಿತಿ ವಿವರಿಸಿದೆ. ಪಾಪ ಏನೆಂದುಕೊಂಡಳೋ ಏನೋ ‘ಹತ್ತು ನಿಮಿಷ ಬಿಟ್ಟು ಫೋನ್ ಮಾಡಿ ಸಾರ್’ ಅಂತ ಫೋನ್ ಕಟ್ ಮಾಡಿದಳು. ಅಲ್ಲಿಂದ ಆಕೆ ಫೋನ್ ತಿರುಗಿಸಿದ್ದು ತನ್ನ ಮುಂಬೈ ಹೆಡ್ ಆಫೀಸ್ ಗೆ. ಪ್ರಶ್ನೆ ನೇರ. ‘ಒಂದು ವಿಮಾನದ ರೇಟ್ ಎಷ್ಟು’ ಅಂತ. ಅಲ್ಲಿದ್ದವರ ಸಿಟ್ಟು ನೆತ್ತಿಗೇರಿರಬೇಕು. ಅಲ್ಲ