ಮೈಸೂರು: ಪುರುಷರಿಗೂ ಬಸ್ ಪ್ರಯಾಣ ಫ್ರೀ..

Promotion

ಮೈಸೂರು,ಜೂನ್,22,2023(www.justkannada.in): ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಷಾಢ ಶುಕ್ರವಾರಗಳಂದು ಖಾಸಗಿ ವಾಹನಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಸರ್ಕಾರಿ ಬಸ್ ಗಳಲ್ಲಿ ಭಕ್ತಾದಿಗಳಿಗೆ  ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

ಚಾಮುಂಡಿ ಬೆಟ್ಟಕ್ಕೆ  ಮಹಿಳಾ ಭಕ್ತರ ಜೊತೆಗೆ ಪುರುಷ ಭಕ್ತಾದಿಗಳಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ತೆರಳುವ ಎಲ್ಲಾ ಭಕ್ತರಿಗೂ ಉಚಿತ ಪ್ರಯಾಣ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಖಾಸಗಿ ವಾಹನಗಳ ದಟ್ಟಣೆ, ಅಪಘಾತ ತಡೆ, ಸುಗಮ ಸಂಚಾರಕ್ಕಾಗಿ  ಜಿಲ್ಲಾಡಳಿತದಿಂದ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು ಆಷಾಡ ಮಾಸದ ವಿಶೇಷ ದಿನಗಳಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿದೆ.

ಜೂನ್ 23 ರಿಂದ ಜುಲೈ 14ರ ಆಷಾಢ ಶುಕ್ರವಾರ ದಿನಗಳಂದು ಹಾಗೂ ಜುಲೈ 10 ವರ್ಧಂತಿ ದಿನದಂದು ಹೆಚ್ಚಿನ ಜನ ಬರುವುದರಿಂದ ಸಂಚಾರ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.  ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ತಮ್ಮ ವಾಹನಗಳನ್ನ ಲಲಿತಮಹಲ್ ಮೈದಾನದಲ್ಲಿ ನಿಲುಗಡೆ ಮಾಡಲು ಸೂಚನೆ ನೀಡಲಾಗಿದ್ದು, ಬೆಟ್ಟಕ್ಕೆ ಬರುವ ಎಲ್ಲಾ ಮಾರ್ಗಗಳಿಂದಲೂ ಖಾಸಗಿ ವಾಹನಗಳಿಗೆ ನಿಷೇಧ ಹೇರಲಾಗಿದೆ.

ಬೆಟ್ಟದ ತಪ್ಪಲಿನಲ್ಲಿ ತಮ್ಮ ವಾಹನಗಳ ನಿಲ್ಲಿಸಿ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಬೇಕು.  ಜಿಲ್ಲಾಡಳಿತ ವತಿಯಿಂದ ಮಾಡಿರುವ ಸರ್ಕಾರಿ ಬಸ್ ಗಳಲ್ಲಿ ಭಕ್ತರು ತೆರಳುವಂತೆ ಸೂಚನೆ ನೀಡಲಾಗಿದೆ.

ಬೆಳಗಿನ ಜಾವ 3 ರಿಂದ ರಾತ್ರಿ 10 ಗಂಟೆವರೆಗೂ ಬಸ್ ಸೌಲಭ್ಯ ಚಾಮುಂಡಿ ಬೆಟ್ಟಕ್ಕೆ ಸರ್ಕಾರಿ ಬಸ್ ಗಳಲ್ಲಿ ಎಲ್ಲರಿಗೂ ಉಚಿತ ಬಸ್ ಸೌಲಭ್ಯ ಇರುತ್ತದೆ. ಶಿಷ್ಟಾಚಾರವಿರುವ ಗಣ್ಯರ ಮತ್ತು ಅತೀ ಗಣ್ಯರ ವಾಹನಗಳ ಹೊರತುಪಡಿಸಿ ಉಳಿದ ಎಲ್ಲಾ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಮೈಸೂರು ಪೋಲಿಸ್ ಆಯುಕ್ತ ಬಿ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದು,  ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Key words: Free- bus -facility – men-all – government buses-mysore