ಮೇಕೆದಾಟು ಯೋಜನೆ ಬಗ್ಗೆ ಸಿಎಂ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಸಿದ್ಧರಾಮಯ್ಯ ಒತ್ತಾಯ.

ಬೆಂಗಳೂರು,ಆಗಸ್ಟ್,13,2021(www.justkannada.in): ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರ್ಕಾರದ ನಿಲುವು ಏನು ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದರು.

ಆಡಳಿತಾರೂಢ ಬಿಜೆಪಿ ಎರಡು ನಾಲಿಗೆಗಳಿಂದ ಮಾತನಾಡುತ್ತಿದೆ. ತಮಿಳುನಾಡಿನ ಬಿಜೆಪಿ ಈ ಯೋಜನೆಯನ್ನು ವಿರೋಧಿಸುತ್ತಿದೆ, ಆ ನಿಲುವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಬೆಂಬಲಿಸುತ್ತಿದ್ದಾರೆ. ಯಾಕೆ ಈ ದಂದ್ವನೀತಿ? ಈ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ತಳೆದಿರುವ ಗಟ್ಟಿನಿಲುವಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ.  ಆದರೆ ತಮ್ಮ ಸಡಿಲ ನಾಲಿಗೆಯ ಮೂಲಕ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿರುವ ಸಿ.ಟಿ.ರವಿ ಅವರಂತಹ ಕೂಗುಮಾರಿಗಳ ಬಾಯಿಮುಚ್ಚಿಸದೆ ಹೋದರೆ ಅನಗತ್ಯವಾಗಿ ಇದೊಂದು ಆಂತರಿಕ ವಿವಾದವಾಗಿ ನಾವು ನಾವೇ ಕಚ್ಚಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಿದ್ಧರಾಮಯ್ಯ ಹೇಳಿದರು.

ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳೇ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ. ಕಾಂಗ್ರೆಸ್ ಪಕ್ಷ ಇದನ್ನು ನಂಬಿದೆ. ಈ ಬಗ್ಗೆ ಬಿಜೆಪಿಗೆ ಭಿನ್ನಾಭಿಪ್ರಾಯ ಹೊಂದಿದ್ದರೆ ಅದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು. ನಾವು ಕೂಡಾ ಭಾರತೀಯರು, ಇದಕ್ಕಾಗಿ ರಾಜ್ಯದ ಹಿತಾಸಕ್ತಿ ಕಡೆಗಣಿಸಲು ಸಾಧ್ಯ ಇಲ್ಲ.

ನೆಲ-ಜಲ-ಭಾಷೆ ವಿಚಾರದಲ್ಲಿ ನಮ್ಮ ಪಕ್ಷ ರಾಜಕೀಯ ಮಾಡಲು ಹೋಗುವುದಿಲ್ಲ, ಯಾವ ಬಗೆಯ ರಾಜಿಯನ್ನೂ ಮಾಡುವುದಿಲ್ಲ. ಅಧಿಕಾರದಲ್ಲಿರಲಿ, ಇಲ್ಲದೆ ಇರಲಿ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿಗಳು ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದೇ ರೀತಿ ತಮ್ಮ ಪಕ್ಷದೊಳಗಿನ ಒಡಕು ಬಾಯಿಗಳನ್ನು ಮುಚ್ಚಿಸಬೇಕು ಎಂದು ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ.

ಮೇಕೆದಾಟು ಯೋಜನೆಯ ವಿಚಾರದಲ್ಲಿ ಕಣ್ಣುಮುಚ್ಚಾಲೆ ಆಟ ಆಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಿ ನ್ಯಾಯದ ಪರವಾದ ಗಟ್ಟಿನಿಲುವು ತೆಗೆದುಕೊಳ್ಳಬೇಕು. ಅನಗತ್ಯ ತಕರಾರು ತೆಗೆಯುತ್ತಿರುವ ತಮಿಳುನಾಡು ಸರ್ಕಾರಕ್ಕೆ ಬಿಗಿಮಾತಿನಿಂದ ಬುದ್ದಿ ಹೇಳಬೇಕು. ಮಹದಾಯಿ ಯೋಜನೆಯ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ತಳೆದ ದಂದ್ವ ನಿಲುವು ರಾಜ್ಯದ ಹಿತಾಸಕ್ತಿಗೆ ಮಾರಕವಾಯಿತು.

ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆಯುವುದು ಸರಿ ಅಲ್ಲ.

ಕಾವೇರಿ ನ್ಯಾಯಮಂಡಳಿಯ ಐತೀರ್ಪು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಾವೇರಿ ಜಲವಿವಾದ ಇತ್ಯರ್ಥವಾಗಿದೆ. ಪ್ರಕೃತಿಯ ಕೃಪೆಯಿಂದ ಕಳೆದೆರಡು ವರ್ಷಗಳಲ್ಲಿ ನದಿನೀರು ಹಂಚಿಕೆಯಲ್ಲಿ ಯಾವುದೇ ವ್ಯತ್ಯಯವಾಗದೆ ತಮಿಳುನಾಡಿಗೆ ಅದರ ಪಾಲಿನ ನೀರು ಹರಿದಹೋಗುತ್ತಿದೆ. ಈ ಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆಯುವುದು ಸರಿ ಅಲ್ಲ ಎಂದು ಸಿದ್ಧರಾಮಯ್ಯ ಟೀಕಿಸಿದರು.

ಕೆಆರ್ ಎಸ್ ಜಲಾಶಯದಿಂದ ಅನಿಯಂತ್ರಿತವಾಗಿ ಸಮುದ್ರಕ್ಕೆ ಹರಿದುಹೋಗುತ್ತಿರುವ  ನೀರಿನಲ್ಲಿ 64 ಟಿಎಂಸಿ ನೀರನ್ನು ಬಳಸಿಕೊಂಡು ರೂಪಿಸಲಾಗಿರುವ ಮೇಕೆದಾಟು ಯೋಜನೆಯ ಮೊದಲ ಪ್ರಸ್ತಾವವವನ್ನು 2013ರಲ್ಲಿ ನಮ್ಮ ಸರ್ಕಾರ ಸಲ್ಲಿಸಿತ್ತು. 2019ರಲ್ಲಿ ನಮ್ಮದೇ ಸಂಯುಕ್ತ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ನಮ್ಮ ಪಕ್ಷ ಈ ಯೋಜನೆಗೆ ಬದ್ಧವಾಗಿದೆ ಎಂದರು.

ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವ ಹಾನಿಯೂ ಇಲ್ಲ. ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್  ಒಬ್ಬ ಪ್ರಬುದ್ಧ ರಾಜಕಾರಣಿ. ಅವರು  ಹಿಂದಿನ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಂತೆ ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಬಾರದು. ನೆರೆರಾಜ್ಯಗಳ ಜೊತೆ ಸೌಹಾರ್ದಯುತ ಸಂಬಂಧವನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕು.

ಮೇಕೆದಾಟು ಮೂಲಭೂತವಾಗಿ ಬೆಂಗಳೂರು-ಮೈಸೂರು ನಗರಗಳಿಗಾಗಿ ರೂಪಿಸಿರುವ ಕುಡಿಯುವ ನೀರಿನ ಯೋಜನೆ .ಬೆಂಗಳೂರಿನಲ್ಲಿ ಕೇವಲ ಕನ್ನಡಿಗರು ಮಾತ್ರವಲ್ಲ ತಮಿಳು  ಭಾಷಿಕರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ಜನರಿದ್ದಾರೆ.ಇಂತಹ ಕುಡಿಯುವ ನೀರು ಪೂರೈಸುವ ಯೋಜನೆಗೆ ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುವುದು ಸರಿ ಅಲ್ಲ. ತಮಿಳುನಾಡು ಸರ್ಕಾರ ಕೂಡಾ ಕಾವೇರಿ ಜಲಾನಯನ ಪ್ರದೇಶದಲ್ಲಿ ಎರಡು ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. ಅವುಗಳನ್ನು ಕರ್ನಾಟಕ ವಿರೋಧಿಸಿಲ್ಲ. ಪ್ರಾಕೃತಿಕ ಸಂಪತ್ತನ್ನು ಹಂಚಿಕೊಂಡು ಬೆಳೆಯಬೇಕು ಎನ್ನುವುದು ನಮ್ಮ ನಿಲುವು. ತಮಿಳುನಾಡು ಹಟಹಿಡಿದು ಮೇಕೆದಾಟು ಯೋಜನೆಯನ್ನು ವಿರೋಧಿಸಿದರೆ ರಾಜಕೀಯ ಸಂಘರ್ಷ ಅನಿವಾರ್ಯವಾಗಬಹುದು ಎಂದು ಸಿದ್ಧರಾಮಯ್ಯ ಸಲಹೆ ನೀಡಿದರು.

ENGLISH SUMMARY…

Former CM Siddaramaiah demands CM Bommai to clear his view on Mekedatu project
Bengaluru, August 13, 2021 (www.justkannada.in): Former Chief Minister and leader of the opposition in the Assembly Siddaramaiah has demanded the Chief Minister Basavaraj Bommai clarify his view on the Mekedatu project.
Speaking about this today Siddaramaiah expressed his view that the BJP has a dual mindset concerning the project. “While the Tamil Nadu BJP is opposing it, BJP National Secretary C.T. Ravi is supporting them. Why is this dual policy? If the Chief Minister expresses his strong view our party will support him completely. But if he doesn’t stop his party people like C.T. Ravi who does lose talking, it will make way for another internal dispute and we will have to start quarreling among ourselves,” he said.
“When it comes to our land-water-language issue our party will never compromise. Whether we are in power or not our view won’t change. The Chief Minister should take all the parties into confidence over the Mekedatu project. He should also ask people who are lose talking to keep quiet,” he suggested.
On the occasion, Siddaramaiah said that the Cauvery water sharing dispute has been solved following the Cauvery Tribunal judgment and the Hon’ble Supreme Court judgment. “There has been no dispute of late concerning water-sharing due to good rainfall and blessing of mother nature. Under such circumstances it is not correct for the Tamil Nadu government to interrupt,” Siddaramaiah said.
Keywords: Leader of the Opposition/ Siddaramaiah/ Mekedatu Project/ Chief Minister/ clarify/ BJP

Key words: former CM- Siddaramaiah –urges- CM – clarify -stance –mekedatu  scheme.