ಮತಾಂತರ ನಿಷೇಧ ಕಾಯ್ದೆ ಜಾರಿ ಸುಗ್ರೀವಾಜ್ಞೆ ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಿದ್ಧರಾಮಯ್ಯ ಮನವಿ.

ಬೆಂಗಳೂರು,ಮೇ,13,2022(www.justkannada.in):  ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನ ವಿಪಕ್ಷ ನಾಯಕ ಸಿದ್ಧರಾಮಯ್ಯ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಿಎಂ ಸಿದ‍್ಧರಾಮಯ್ಯ ಹೇಳಿರುವುದಿಷ್ಟು…

ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ನಿತ್ಯ ಬತ್ತಲೆ ಆಗುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ ಧಾರ್ಮಿಕ ಭಾವನೆ ಕೆರಳಿಸಿ ಜನರ ಗಮನ ಬೇರೆಡೆ ಸೆಳೆಯುವ ದುರುದ್ದೇಶದಿಂದ ಸುಗ್ರಿವಾಜ್ಞೆ ಮೂಲಕ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ ಜಾರಿಗೊಳಿಸಲು ಹೊರಟಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶದ ಮೂಲಕ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ ಜಾರಿಯ ಸುಗ್ರೀವಾಜ್ಞೆಯನ್ನು ತಿರಸ್ಕರಿಸಬೇಕೆಂದು ರಾಜ್ಯದ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ.

ಆಮಿಷ,ಒತ್ತಡ, ಬೆದರಿಕೆಗಳ ಮೂಲಕ ನಡೆಯುವ ಬಲತ್ಕಾರದ ಮತಾಂತರಗಳನ್ನು ತಡೆಯಲು ನಮ್ಮ ಕಾನೂನು ಸಶಕ್ತವಾಗಿದೆ. ಹೀಗಿದ್ದಾಗ ಹೊಸ ಕಾಯ್ದೆಯ ಅವಶ್ಯಕತೆ ಏನಿದೆ? ಅಲ್ಪಸಂಖ್ಯಾತರನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶವಲ್ಲದೆ ಈ ಕಾಯ್ದೆಗೆ ಬೇರೆ ಸದುದ್ದೇಶಗಳೇನಿದೆ? ಎಂದು ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

ಸಹಬಾಳ್ವೆ-ಸೌಹಾರ್ದತಾ ಪರಂಪರೆಯ ಹಿಂದೂ ಧರ್ಮದ ನೈಜ ಅನುಯಾಯಿಗಳು ಯಾರೂ ಇಂತಹದ್ದೊಂದು ಅನಗತ್ಯ ಕಾಯ್ದೆಗೆ ಒತ್ತಾಯಿಸಿಲ್ಲ, ಇದನ್ನು ಒಪ್ಪುವುದೂ ಇಲ್ಲ. ಇದು ಸಂಘ ಪರಿವಾರದ ರಾಜಕೀಯ ಹಿಂದುತ್ವದ ಅಜೆಂಡಾ ಆಗಿದೆ. ಇದನ್ನು ಸಹೃದಯ ಹಿಂದು ಬಾಂಧವರೆಲ್ಲರೂ ಖಂಡಿಸಬೇಕು ಎಂದು ಸಿದ್ಧರಾಮಯ್ಯ ಖಂಡಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಇಂತಹ ದಾಳಿಗೆ ದುಷ್ಕರ್ಮಿಗಳ ಕೈಗೆ ನೀಡುವ ಆಯುಧವೇ..?

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಅಲ್ಪಸಂಖ್ಯಾತರು ಮತ್ತು ಅವರ ಪೂಜಾಸ್ಥಳಗಳ ಮೇಲೆ ದಾಳಿ ನಡೆಯವುದಕ್ಕೆ ದೇಶ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಚರ್ಚ್ ಗಳ ಮೇಲೆ ನಡೆದಿರುವ ದಾಳಿಯಿಂದ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ. ತರಾತುರಿಯ ಮತಾಂತರ ನಿಷೇಧ ಕಾಯ್ದೆ ಇಂತಹ ದಾಳಿಗೆ ದುಷ್ಕರ್ಮಿಗಳ ಕೈಗೆ ನೀಡುವ ಆಯುಧವೇ ಬೊಮ್ಮಾಯಿಯವರೇ? ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಸ್ವಯೀಚ್ಛೆಯಿಂದ ಮತಾಂತರಗೊಳ್ಳುವ ಹಕ್ಕು ಸಂವಿಧಾನವೇ ನೀಡಿದೆ. ಇದರ ಹೊರತಾದ ಮತಾಂತರ ತಡೆಯಲು ಕಾನೂನು ಇದೆ. ಇರುವ ಕಾನೂನನ್ನು ಜಾರಿಗೆ ತರುವ ಪೊಲೀಸ್ ಇಲಾಖೆ ಮತ್ತು ತಪ್ಪು-ಒಪ್ಪುಗಳ ನ್ಯಾಯ ಒದಗಿಸುವ ನ್ಯಾಯಾಂಗದ ಮೇಲೆ ರಾಜ್ಯ ಸರ್ಕಾರಕ್ಕೆ ನಂಬಿಕೆ ಇಲ್ಲವೇ?

ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಕಾಯ್ದೆಯ ದುರುಪಯೋಗವನ್ನು ತಡೆಯಲು ಕಾಂಗ್ರೆಸ್ ಪಕ್ಷ ಖಂಡಿತ ಅವಕಾಶ ನೀಡುವುದಿಲ್ಲ. ಅನ್ಯಾಯ-ದೌರ್ಜನ್ಯಕ್ಕೊಳಗಾಗುವ ಪ್ರತಿಯೊಬ್ಬ ಅಲ್ಪಸಂಖ್ಯಾತ ಬಂಧುವಿನ ಜೊತೆ ನಮ್ಮ ಪಕ್ಷ ನಿಲ್ಲಲಿದ್ದು ಈ ಕಾಯ್ದೆಯ ವಿರುದ್ದ ನಮ್ಮ ಪಕ್ಷ ಜನಾಂದೋಲನ ನಡೆಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Key words: former CM-Siddaramaiah-governor – conversion – prohibition

ENGLISH SUMMARY…

Siddaramaiah appeals to the Governor to reject ordinance on anti-conversion Bill
Bengaluru, May 13, 2022 (www.justkannada.in): Leader of the Opposition Siddarmaiah has strongly condemned the State BJP government’s decision to take the ordinance route for the implementation of the anti-conversion law.
In a press release, the former CM stated, “the BJP government, which is coming under focus and public ire almost daily due to one or the other scam are attempting to divert the attention of the people through religious sentiments. The decision of the State Government to take the ordinance route for the implementation of the anti-conversion law is also malicious. It is an attempt to threaten the minority community, and hence I request the Hon’ble Governor to reject it.”
Keywords: Former CM Siddaramaiah/ Anti-conversion law/ ordinance/ State Govt./ appeal to Governor