ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲ -ಕುರುಬೂರು ಶಾಂತಕುಮಾರ್ ಕಿಡಿ.

ಮೈಸೂರು,ಜನವರಿ,23,2023(www.justkannada.in): ಕಾಡು ಪ್ರಾಣಿಗಳ ಹಾವಳಿ, ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲ, ನಿತ್ಯ ಗ್ರಾಮೀಣ ಭಾಗದ ಜನರ ಪ್ರಾಣಬಲಿಗೆ ಕಾರಣವಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುರುಬೂರು ಶಾಂತಕುಮಾರ್,  ರಾಜ್ಯಾದ್ಯಂತ ಕಾಡನ್ನು ತೊರೆದು ನಾಡಿಗೆ ಬರುತ್ತಿರುವ ಪ್ರಾಣಿಗಳ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಚಿರತೆ ,ಆನೆ, ಹುಲಿ, ಹಂದಿ, ನವಿಲು, ಜಿಂಕೆಗಳ ಕಾಟದಿಂದ ರೈತ ಕುಟುಂಬಗಳ ಪ್ರಾಣ ಬಲಿ, ಬೆಳೆ ಹಾನಿಯಾಗಿ ಕಷ್ಟ ನಷ್ಟ ಅನುಭವಿಸುವಂತಾಗಿದೆ. ಕಾಡು ಪ್ರಾಣಿಗಳ ದಾಳಿಗೆ ತುತ್ತಾದವರಿಗೆ  50 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತಾಗಬೇಕು. ಇದಕ್ಕೆ ನಿಯಂತ್ರಣ ವಿಧಿಸಲು ರಾಜ್ಯಮಟ್ಟದಲ್ಲಿ ಪರಿಣಿತರ ಉನ್ನತ ಮಟ್ಟದ ಸಮಿತಿ ರಚಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ 23 ರೈತರಿಗೆ ಜೋಳ ಖರೀದಿಸಿದ ತಮಿಳುನಾಡು ಖರೀದಿದಾರರಿಂದ ಮೂರುವರೆ ಕೋಟಿ ರೂಪಾಯಿ ಪಂಗನಾಮ ಹಾಕಲಾಗಿದೆ.  ರೈತರು ಹೆಚ್ಚಿನ ಬೆಲೆ ಕೊಡುತ್ತಾರೆ ಎಂದು ಪರಿಚಯವಿಲ್ಲದ ವ್ಯಕ್ತಿಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಎಚ್ಚರಿಕೆ ವಹಿಸಬೇಕು. ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಜಾರಿಯಾದ ಪರಿಣಾಮ ಈ ರೀತಿಯ ಘಟನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ಸರ್ಕಾರ ಕಬ್ಬಿಗೆ 150 ರೂ. ಹೆಚ್ಚುವರಿ ಮಾಡಿ ಆದೇಶ ಹೊರಡಿಸಿ 25 ದಿನ ಕಳೆದರೂ ಸಕ್ಕರೆ ಕಾರ್ಖಾನೆಗಳು ರೈತರಿಗೆ ಹೆಚ್ಚುವರಿ ಹಣ ಯಾಕೆ ಪಾವತಿಸುತ್ತಿಲ್ಲ, ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ಕೃಷಿ ಪಂಪಶೆಟ್ ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಕಂಗಾಲಾಗಿದ್ದಾರೆ. ರಾತ್ರಿ ಪಾಳಿಯಲ್ಲಿ ಕೊಡುವುದನ್ನು ನಿಲ್ಲಿಸಿ, ಹಗಲು ವೇಳೆಯಲ್ಲಿ ವಿದ್ಯುತ್ ನೀಡಬೇಕ. ಕಾಡು ಪ್ರಾಣಿಗಳಿಂದ ರೈತರ ಜೀವ ಹಾನಿ ತಪ್ಪಿಸಲು ಈ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ರೂಪಿಸುವ ಬಗೆ ಪ್ರಧಾನಿ ಮೋದಿ ಅವರು ಭರವಸೆ ನೀಡಿ ಒಂದು ವರ್ಷವಾದರೂ ಜಾರಿ ಮಾಡದೆ ಇರುವ ಬಗ್ಗೆ ಚರ್ಚಿಸಿ ದೇಶಾದ್ಯಂತ ಪ್ರಬಲ ಹೋರಾಟ ರೂಪಿಸಲು ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆ ರಾಜಸ್ಥಾನದ ಹನುಮಾನ್ ಗಡ್ಡಲ್ಲಿ ಫೆಬ್ರವರಿ 6,7 ಮತ್ತು 8 ರಂದು ರಾಷ್ಟ್ರೀಯ ರೈತ ಮುಖಂಡರ ಸಭೆ ನಡೆಸಲಿದ್ದೆವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆತ್ತಹಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರ್ ಶಂಕರ, ಲಕ್ಷ್ಮಿಪುರ ವೆಂಕಟೇಶ್, ಕುರುಬೂರುಸಿದ್ದೇಶ್, ಕೆಂಡಗಣಸ್ವಾಮಿ, ಕಮಲಮ್ಮ, ಮಂಜುನಾಥ್,ಶ್ರಿ ರಾಮ , ಮುಂತಾದವರು ಇದ್ದರು.

Key words: forest department – failed – prevent – wild animals – Kuruburu Shanthakumar