ಮಕ್ಕಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ನೀಡಲು ಮೊದಲನೇ ಪ್ರಾಶಸ್ತ್ಯ ನೀಡಬೇಕು- ಸಿಎಂ ಬೊಮ್ಮಾಯಿ.

ಬೆಂಗಳೂರು, ಜನವರಿ, 27,2023(www.justkannada.in):   ಮಕ್ಕಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನೀಡಲು ಮೊದಲನೇ ಪ್ರಾಶಸ್ತ್ಯ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ಅವರು ಇಂದು ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿರುವಿ ವಿಜ್ಞಾನ ಮೇಳ – 2023ರ ಉದ್ಘಾಟಿಸಿ ಮಾತನಾಡಿದರು.

ವಸತಿ ಶಿಕ್ಷಣ ಸಂಸ್ಥೆಗೆ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತೇವೆ. ನಾವು ಕಟ್ಟಡ,  ಕಾಂಪೌಂಡ್ ಗೋಡೆಗಳಿಗೆ ಬಹಳ ಖರ್ಚು ಮಾಡುತ್ತಿದ್ದೇವೆ. ಈಗಾಗಲೇ ಸಚಿವ ಸಂಪುಟ, ಸಭೆಗಳಲ್ಲಿ ಹೇಳಿರುವಂತೆ ಮಕ್ಕಳಿಗೆ ಮಾಡಬೇಕಿರುವ ವ್ಯವಸ್ಥೆಗಳ ಬಗ್ಗೆ ವಿಶೇಷ ಗಮನ ನೀಡಬೇಕು.  ಮಾಡಲೇಬೇಕಾದ ಬದಲಾವಣೆಗಳನ್ನು ತನ್ನಿ ನಂತರ ಉಳಿದ ವಿಷಯಗಳಿಗೆ ಗಮನ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಯೊಂದಕ್ಕೆ 30 ಕೋಟಿ ರೂ.ಗಳ ವೆಚ್ಚ

ಒಂದು ಶಾಲೆಗೆ 30 ಕೋಟಿ ರೂ.ಗಳ ವೆಚ್ಚವಾಗುತ್ತದೆ. ಆದರೇ 30 ಕೋಟಿ ರೂ.ಗಳನ್ನು ಖರ್ಚು ಮಾಡಿದರೂ ಮಕ್ಕಳಿಗೆ ಯಾವ ವ್ಯವಸ್ಥೆಯಾಗಬೇಕೋ ಅದು ಆಗುತ್ತಿಲ್ಲ. ಇದು ಹಿಂದಿನ ಸರ್ಕಾರಗಳಿಂದ ಬಂದಿರುವ ಬಳುವಳಿ. ಗುತ್ತಿಗೆದಾರ ಆಧರಿತ ಗುತ್ತಿಗೆ ನೀಡುವುದರಿಂದ ಪರಿಸ್ಥಿತಿ ಹೀಗಾಗಿದೆ. ಗೋವಿಂದ ಕಾರಜೋಳ ಅವರು ಸಮಾಜ ಕಲ್ಯಾಣ ಸಚಿವರಿದ್ದಾಗ ವಿಶೇಷ ಅನುದಾನವನ್ನು ಮಕ್ಕಳಿಗೆ ಡೆಸ್ಕ್, ಮಲಗುವ ಸ್ಥಳ, ಪುಸ್ತಕ ಸೇರಿದಂತೆ ಉಳಿದ ವಿಚಾರಗಳಿಗೆ ಹೆಚ್ಚಿನ ಗಮನ ನೀಡಲು ಕಳೆದ ಮೂರು ವರ್ಷಗಳಿಂದ ಪ್ರಾರಂಭಿಸಿದ್ದೇವೆ. ಸಾಕಷ್ಟು ಸುಧಾರಣೆಯೂ ಆಗಿದೆ ಎಂದರು.

ಇನ್ನಷ್ಟು ಬಲಪಡಿಸಬೇಕು

ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವಿಜ್ಞಾನ ಮೇಳ ಆಯೋಜಿಸಿರುವುದು ಸಂತೋಷದ ಸಂಗತಿ. ಈ ವಸತಿ ಶಾಲೆಗಳು ಪ್ರಾರಂಭವಾಗಿರುವುದೇ ಎಸ್.ಸಿ/ ಎಸ್.ಟಿ, ಹಿಂದುಳಿದ ವರ್ಗಗಳ ಮಕ್ಕಳಿಗೆ ಉನ್ನತ ಶಿಕ್ಷಣ, ಗುಣಾತ್ಮಕ ಶಿಕ್ಷಣ, ಎಲ್ಲಾ ವ್ಯವಸ್ಥೆಗಳಿರುವ ವಸತಿ ಶಾಲೆಗಳನ್ನು ನೀಡಬೇಕೆನ್ನುವ ಉದ್ದೇಶದಿಂದ. ಸಾವಿರಕ್ಕೂ ಹೆಚ್ಚು ಶಾಲೆಗಳು ಇಲ್ಲಿ ಭಾಗವಹಿಸಿವೆ. ಈ ಶಾಲೆಗಳ ಮೌಲ್ಯ ಮಾಪನ ಮಾಡಿದಾಗ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಗುಣಮಟ್ಟವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬೇರೆಯವರಿಗಿಂತ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ಕೀಳರಿಮೆ ಹೋಗಿ ಆತ್ಮವಿಶ್ವಾಸ ಜಾಗೃತವಾಗಿವೆ. ಹೀಗಾಗಿ ಈ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಇನ್ನಷ್ಟು ಗುಣಾತ್ಮಕ ಶಿಕ್ಷಣ, ವ್ಯಕ್ತಿ ವಿಕಸನವಾಗಬೇಕಿದೆ ಮತ್ತು ವಿಪುಲವಾದ ಅವಕಾಶಗಳನ್ನು ಈ ಮಕ್ಕಳಿಗೆ ಮಾಡಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.

ಮಕ್ಕಳ ಭವಿಷ್ಯ ನಿರ್ಮಿಸಿ

ಒಂದು ಸಾವಿರ ಶಾಲೆಗಳಿರುವ ದೊಡ್ಡ ವ್ಯವಸ್ಥೆಯಾಗಿದ್ದು, ತಂದೆತಾಯಿ ಮಕ್ಕಳನ್ನ ಇಲ್ಲಿಗೆ ಕಳುಹಿಸಿದ್ದಾರೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಅದು ನಮ್ಮ ಕರ್ತವ್ಯ. ಅವರಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿ ಅತ್ಯಂತ ಯಶಸ್ವಿಯಾಗಿ ಮಾಡಿ ಅವರಿಗೆ ಒಳ್ಳೆಯ ಭವಿಷ್ಯ ನಿರ್ಮಿಸುವ ಕೆಲಸವಾದಾಗ ಸಮಾಜದಲ್ಲಿ ಪರಿವರ್ತನೆಯಾಗುತ್ತದೆ. ಇದು ನಿಜಕ್ಕೂ ಆಗಬೇಕಿರುವ ಕೆಲಸ ಎಂದರು.

ಕೊರತೆಗಳ ಪಟ್ಟಿ ನೀಡಿ

ಯಾವ ಶಾಲೆಗಳಲ್ಲಿ ಏನು ಕೊರತೆ, ಎಷ್ಟು ಅನುದಾನ ಇದೆ ಎಂದು ಪಟ್ಟಿ ನೀಡಿದರೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದರು. ಎಲ್ಲಾ ಅಧಿಕಾರಿಗಳು ಶಾಲೆಗಳಿಗೆ ಭೇಟಿ ಮಾಡಲು ಸೂಚಿಸಿದರಲ್ಲದೇ   ಹತ್ತು ವರ್ಷಗಳಾಗಿರುವ ಶಾಲೆಗಳಲ್ಲಿ,ಎಲ್ಲಾ ವ್ಯವಸ್ಥೆಗಳಿರುವ ಶಾಲೆಗಳಲ್ಲಿ  ಮುಂದಿನ  ವರ್ಷದಿಂದ ಕಡ್ಡಾಯವಾಗಿ ಪಿ.ಯು.ಸಿ ತರಗತಿಗಳನ್ನು ಪ್ರಾರಂಭಿಸಲು ಸೂಚಿಸಿದರು.

ಮಕ್ಕಳ ಸಾಮರ್ಥ್ಯ ಬೆಳೆಸಿ.

ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಕ್ಕಳ ನಡುವೆಯೇ ನಡೆಸುವಂತೆ ಸಲಹೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಲ್ಲಿ ಮಕ್ಕಳಿಗೆ  ಸಮಾನ ಅವಕಾಶ ನೀಡಲಾಗಿದೆ. ಯಾವ ಶಾಲೆಗಳಲ್ಲಿ ಏನು ಕೊರತೆಯಿದೆ, ಏನ್ನನ್ನು ಸರಿ ಪಡಿಸಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಹೇಗೆ ತಯಾರು ಮಾಡಬೇಕೆನ್ನುವ ಸಲುವಾಗಿ ಸ್ಪರ್ಧೆ, ಪರೀಕ್ಷೆಗಳನ್ನು ನೀಡಿ, ಸಾಮರ್ಥ್ಯ ಬೆಳೆಸಿ ಎಂದರು.

ಮಕ್ಕಳೆಲ್ಲಾ ಬಹಳ ಕಷ್ಟ ಪಟ್ಟು ಈ ಶಾಲೆಗೆ  ಬಂದಿದ್ದಾರೆ. ಅವರು ಶೇ 50, 60, 70 ರಷ್ಟು ಅಂಕಪಡೆದಿರುವ ಮಕ್ಕಳು. ಹೊರಗೆ ಹೋಗುವಾಗ ಶೇ 90 ರಷ್ಟು ಅಂಕ ಪಡೆದು ಹೊರಗೆ ಹೋಗಬೇಕು. ಇದು ನಮ್ಮ ಗುರಿ. ಸಚಿವ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಉತ್ತಮ ಕೆಲಸಗಳಾಗಿವೆ.  ಮೂರು ಲಕ್ಷ ಶಾಲಾ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಿರುವುದು ದೊಡ್ಡ ಸಾಧನೆ. ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಬಹಳ ದೊಡ್ಡ ಕಾರ್ಯಕ್ರಮವನ್ನು ಸಚಿವರು ಕೈಗೊಂಡಿದ್ದಾರೆ. ಎಸ್.ಸಿ/ ಎಸ್.ಟಿ ಜನಾಂಗಕ್ಕೆ ಸೌಲಭ್ಯ ಗಳನ್ನು ನೀಡಲು ಒತ್ತಾಸೆಯಾಗಿ ಕೆಲಸ ಮಾಡಿದ್ದಾರೆ. ಅವರು ಬಂದ ನಂತರ ಪ್ರತಿ ಮನೆಗೆ 1.75 ಲಕ್ಷ ರೂ.ಗಳಿಗೆ ಹೆಚ್ಚಳ, 75 ಯೂನಿಟ್ ಉಚಿತ ವಿದ್ಯುತ್, ಜಮೀನು ಖರೀದಿಗೆ 20 ಲಕ್ಷ ರೂ.ಗಳ ಯೋಜನೆ, ಮೀಸಲಾತಿಯನ್ನು ಎಸ್.ಸಿಗೆ ಶೇ 15 ರಿಂದ.17ಕ್ಕೆ ಹಾಗೂ ಎಸ್.ಟಿ ಗೆ  ಶೇ. 3 ರಿಂದ 7 ಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ವಿಷಯಗಳಲ್ಲಿ ದೀನದಲಿತರಿಗೆ ಆತ್ಮಸ್ಥೈರ್ಯ, ಸ್ವಾಭಿಮಾನ, ಕೀಳರಿಮೆಯಿಂದ ದೂರಾಗಿ, ಅವರೂ ಮುಖ್ಯ ವಾಹಿನಿಯಲ್ಲಿ ಸೇರಲು ಬಾಬು ಜಗಜೀವನ್ ರಾಂ ಅವರ ಹೆಸರಿನಲ್ಲಿ ಪ್ರತಿ ಕ್ಷೇತ್ರಕ್ಕೆ 100 ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕಾರ್ಯಕ್ರಮ ರೂಪಿಸಿದೆ. ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ ಎಂಬ ಮೂರನ್ನೂ ದೊಡ್ಡ ಪ್ರಮಾಣದಲ್ಲಿ ಇಲಾಖೆ ಮಾಡುತ್ತಿದೆ. ಈ ಪ್ರಯಾಣವನ್ನು ಬದುಕಿನಲ್ಲಿ. ಮುಂದುವರೆಸಿ ಸಾಧಕರಾಗಬೇಕು. ತಮ್ಮಕುಟುಂಬ, ಊರು, ಸಮುದಾಯಕ್ಕೆ ಹಿಂದಿರುಗಿ ಸಹಾಯ ಮಾಡಬೇಕು. ಆಗ ಸಮಾಜ ಪರಿವರ್ತನೆಯಾಗುತ್ತದೆ. ಇದರಿಂದ ನಾಡು ಮತ್ತು ದೇಶ ಶಕ್ತಿಶಾಲಿಯಾಗಿ ಬೆಳೆಯುತ್ತದೆ. ಇದೇ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಬ್ ಕೆ ಸಾಥ್, ಸಬ್, ಕಾ ವಿಕಾಸ್, ಸಬ್ ಕ ಪ್ರಯಾಸ್ ಎಂಬ ಧ್ಯೇಯ ಎಂದರು.

ಉತ್ತಮ ಪ್ರಯೋಗ

ವಿಜ್ಞಾನ ಮೇಳ ಆಯೋಜಿಸಿದ್ದು, ಮಕ್ಕಳಲ್ಲಿರುವ ವೈಜ್ಞಾನಿಕ ಮನೋಭಾವವನ್ನು, ಪ್ರತಿಭೆ  ಪ್ರದರ್ಶಿಸಲು ಅನುಕೂಲವಾಗಿದೆ. ವಿಜ್ಞಾನ ಮತ್ತು ಅವಕಾಶವಂಚಿತ ವರ್ಗ ಬಹಳ ದೂರವಾಗಿತ್ತು. ವಿಜ್ಞಾನ ಕಲಿಯುವುದೇ ಕಷ್ಟ ಎನ್ನುವ ಕಾಲವಿತ್ತು. ಕೇವಲ ಅಕ್ಷರ ಜ್ಞಾನ ಪಡೆದರೆ ಸಾಕೆನ್ನುವ ಕಾಲವಿತ್ತು. ಈಗ ಬದಲಾವಣೆ ಆಗಿದೆ. ವಿಜ್ಞಾನವನ್ನು ಅವಕಾಶ ವಂಚಿತ ವರ್ಗದವರಿಗೆ ಸೇರಿಸಿ, ಮುನ್ನಡೆಸುತ್ತಿರುವುದು  ಬಹಳ ದೊಡ್ಡ ಬದಲಾವಣೆ ತರಲಿದೆ. ಶ್ರೇಷ್ಠ ವಿಚಾರ ಮತ್ತು ಕಾರ್ಯಕ್ರಮ ಆಯೋಜಿಸಿದ  ಕ್ರೈಸ್ ಸಂಸ್ಥೆಗೆ ಅಭಿನಂದಿಸಿದರು. ಮಕ್ಕಳು ವಿಜ್ಞಾನ, ಗಣಿತ ಎಲ್ಲಾ ರಂಗಗಳಲ್ಲಿ ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯೋಗ ಎಂದು ತಿಳಿಸಿದರು. ಇತರೆ ಊರುಗಳಲ್ಲಿಯೂ ಈ ರೀತಿಯ ವಿಜ್ಞಾನ ಮೇಳ ಏರ್ಪಡಿಸಲು ಸೂಚಿಸಿದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಗೋವಿಂದ ಕಾರಜೋಳ,  ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವನ್ನನ್ ಮೊದಲಾದವರು ಉಪಸ್ಥಿತರಿದ್ದರು.

Key words: First priority – providing -basic facilities -children-  CM –Basavaraja Bommai.