ಅನ್ನದಾತನ ಆದಾಯ ದ್ವಿಗುಣಗೊಳಿಸುವುದೇ ಸರ್ಕಾರದ ಪ್ರಥಮ ಆದ್ಯತೆ- ಸಿಎಂ ಬಿ.ಎಸ್. ಯಡಿಯೂರಪ್ಪ

Promotion

ಕಲಬುರಗಿ,ಜುಲೈ,10,2021(www.justkannada.in): ಅನ್ನದಾತ ರೈತನ ಬದುಕು ಹಸನಗೊಳಿಸಲು ಹತ್ತಾರು ರೈತಾಪಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.jk

ನಗರದ ಎಂ.ಎಸ್.ಕೆ ಮಿಲ್ ವಾಣಿಜ್ಯ ಬಡಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಇವರ ಜಂಟಿ ಅನುದಾನದಡಿಯಲ್ಲಿ 2 ಎಕರೆ ಪ್ರದೇಶದಲ್ಲಿ ಸುಮಾರು 26.30 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಮಾದರಿಯ ಕಾಯಿಪಲ್ಲೆ ಮಾರುಕಟ್ಟೆ ಸಂಕೀರ್ಣಕ್ಕೆ ಶನಿವಾರ ಅಡಿಗಲ್ಲು ಹಾಕಿ ಅವರು ಮಾತನಾಡಿದರು.

ಅನ್ನದಾತ ಬೆಳೆದ ಬೆಳೆ ಸೂಕ್ತ ಮಾರುಕಟ್ಟೆ ದೊರಕಬೇಕು ಎಂಬ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಹೂವು ಬೆಳೆಗಾರರಿಗೆ ಹಾಗೂ ತರಕಾರಿ ಮಾರಾಟಗಾರರು ಸೂಕ್ತ ಮಾರುಕಟ್ಟೆ ಸಿಗದೆ ಕಷ್ಟ ಅನುಭವಿಸಿದ್ದರು. ಇದನ್ನರಿತ ಕೇಂದ್ರ ಸರ್ಕಾರ ದೂರದ ಪ್ರದೇಶದಲ್ಲಿಯೂ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ಸಾಗಾಣಿಕೆಗೆ “ಕಿಸಾನ್ ರೈಲು” ಯೋಜನೆ ಜಾರಿಗೆ ತಂದಿದ್ದು, ರೈತರಿಗೆ ತುಂಬಾ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 20 ಕೊಟಿ ರೂ. ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 6.30 ಕೋಟಿ ರೂ. ಹೀಗೆ ಒಟ್ಟು 26.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಯಿಪಲ್ಲೆ ಮಾರುಕಟ್ಟೆ ಸಂಕೀರ್ಣ ರಾಜ್ಯದ ಇತಿಹಾಸದಲ್ಲೇ ಮೊದಲ ಕಟ್ಟಡವಾಗಿದ್ದು, ತುಂಬಾ ಸಂತೋಷದಿಂದ ಅಡಿಗಲ್ಲು ನೆರವೇರಿಸಿದ್ದೇನೆ. ಈ ತರಹದ ಮಾದರಿ ತರಕಾರಿ ಮಾರುಕಟ್ಟೆ ನಿರ್ಮಾಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರಲಾಗುವುದು ಎಂದರು.

ಕಲಬುರಗಿ ನಗರದ ಕಣ್ಣಿ ಮಾರುಕಟ್ಟೆಯಲ್ಲಿ ಸಿದ್ದಗೊಳ್ಳಲಿರುವ ನೂತನ ಕಾಯಿಪಲ್ಲೆ ಮಾರುಕಟ್ಟೆಯಿಂದ ಈ ಭಾಗದ ರೈತರ ಹಾಗೂ ಜನರ ಬಹುದಿನಗಳ ಕನಸು ನನಸಾಗಲಿದ್ದು, ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದ ಮತ್ತು ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದ ರೈತಾಪಿ ವರ್ಗಕ್ಕೆ ಇದರಿಂದ ನೆಮ್ಮದಿ ಸಿಕ್ಕಿದೆ. ರಸ್ತೆಯುದ್ದಕ್ಕು ಜನ ಗುಂಪಾಗಿ ಸೇರುವ ಕಾರಣ ಅಪಘಾತವಾಗುವ ಸಾಧ್ಯತೆಗಳನ್ನು ಮನಗಂಡು ನೂತನ ತರಕಾರಿ ಮಾರುಕಟ್ಟೆ ಸ್ಥಾಪಿಸಲಾಗುತ್ತಿದೆ. ಇದರಿಂದ ಪ್ರದೇಶದಲ್ಲಿನ ಮುಕ್ತ ಸಂಚಾರಕ್ಕೂ ಅನುವಾಗಲಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

ರಾಜ್ಯದಲ್ಲಿ ರೈತ ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ದೊರಕಿಸುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕೃಷಿ ನಮ್ಮ ಆದ್ಯತಾ ವಲಯವಾಗಿದ್ದು, ಕೃಷಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‍ ಗೆ ತಲಾ 10000 ರೂ. ಗಳಂತೆ 20 ಸಾವಿರ ರೈತರಿಗೆ ಪರಿಹಾರ ನೀಡಲಾಗಿದೆ. ಅದೇ ರೀತಿ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ  ಗರಿಷ್ಠ 1 ಹೆಕ್ಟೇರ್‍ ಗೆ ತಲಾ 10000 ರೂ. ಗಳಂತೆ 69000 ಸಾವಿರ ರೈತರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.

ನೂತನ ತರಕಾರಿ ಮಾರುಕಟ್ಟೆ ಕಾಂಪ್ಲೆಕ್ಸ್ ಬೇಸ್‍ಮೆಂಟ್ ಮಹಡಿ, ನೆಲ ಮಹಡಿ ಹಾಗೂ ಮೊದಲನೇ ಮಹಡಿ ಒಳಗೊಂಡಿದೆ. ಬೇಸ್‍ಮೆಂಟ್ ಮಹಡಿಯಲ್ಲಿ ವಾಹನ ನಿಲುಗಡೆ, ಲಿಫ್ಟ್, ಸ್ಟೇರ್‍ಕೇಸ್, ಸಂಪ್ ಟ್ಯಾಂಕ್, ಎಲೆಕ್ಟ್ರೀಕಲ್ ಕೋಣೆ ಇರಲಿದೆ. ನೆಲ ಮಹಡಿಯಲ್ಲಿ 62 ಅಂಗಡಿಗಳು, ತರಕಾರಿ ಮಾರಾಟಕ್ಕೆ 192 ಮಳಿಗೆ, ಸಗಟು ವ್ಯಾಪಾರ ಹರಾಜು ಪ್ರಕ್ರಿಯೆಗೆ ಪ್ಲಾಟ್‍ಫಾರ್ಮ್, ಘನತ್ಯಾಜ್ಯ ಸಂಗ್ರಹಣೆಗೆ ಸ್ಥಳ, ಕೋಲ್ಟ್ ಸ್ಟೋರೇಜ್ ಕೋಣೆ ಹಾಗೂ ಶೌಚಾಲಯ ಇರಲಿವೆ. ಮೊದಲನೇ ಮಹಡಿಯಲ್ಲಿ 47 ಅಂಗಡಿಗಳು, ಇತರೆ ಕಾರ್ಯಾಲಯ, ಬ್ಯಾಂಕ್ ಇರಲಿದ್ದು ಒಟ್ಟಾರೆ ಸಂಕೀರ್ಣದಲ್ಲಿ 301 ಅಂಗಡಿಗಳಿರಲಿವೆ ಎಂದು ಸಿ.ಎಂ. ಯಡಿಯೂರಪ್ಪನವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಮಾತನಾಡಿ,  ಕಲ್ಯಾಣ ಕರ್ನಾಟಕ ಭಾಗದಲ್ಲಿ 600 ಕೋಟಿ ರೂ.ಗಳ ವೆಚ್ಚದಲ್ಲಿ ದಿನದ 24 ಗಂಟೆಯು ಕುಡಿಯುವ ನೀರಿನ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ. ಇದಲ್ಲದೆ ಕಲಬುರಗಿ ಮಹಾನಗರ ಪ್ರದೇಶದಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆಗಾಗಿ ಇಂದು 41 ವಾಹನಗಳನ್ನು ಸಹ ಲೋಕಾರ್ಪಣೆ ಮಾಡಲಾಗಿದೆ ಎಂದರು.

ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಮಾತನಾಡಿ, ಸರ್ಕಾರ ನುಡಿದಂತೆ ನಡೆದಿದೆ. ಈ ನೂತನ ಮಾರುಕಟ್ಟೆಯಿಂದ ಪ್ರದೇಶದ ರೈತರು ಸುಲಲಿತವಾಗಿ ವ್ಯಾಪಾರ ಮಾಡಬಹುದು. ಮಳಿಗೆಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಲಿ ಎಂದು ಆಶಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಎಂ. ಕಾರಜೋಳ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ಆರ್. ನಿರಾಣಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ವಿಧಾನಸಭೆಯ ಶಾಸಕರುಗಳಾದ ಎಂ.ವೈ.ಪಾಟೀಲ, ಸುಭಾಷ ಆರ್. ಗುತ್ತೇದಾರ, ಬಸವರಾಜ ಮತ್ತಿಮಡು, ಖನೀಜ್ ಫಾತೀಮಾ, ಡಾ. ಅವಿನಾಶ ಉಮೇಶ ಜಾಧವ್, ವಿಧಾನ ಪರಿಷತ್ ಶಾಸಕರುಗಳಾದ ಸುನೀಲ್ ವಲ್ಲ್ಯಾಪುರೆ, ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ  ಶಶಿಕಲಾ ವಿ. ಟೆಂಗಳಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದು ಪಾಟೀಲ, ಭೀಮರಾಯನಗುಡಿ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಕಲಬುರಗಿ ಅಚ್ಚುಕಟ್ಟು ಪ್ರಾದೇಶಾಭಿವೃದ್ಧಿ ಪ್ರಾಧಿಕಾರ ನೀರಾವರಿ ಯೋಜನೆಗಳ ವಲಯದ ಅಧ್ಯಕ್ಷ ಹರ್ಷವರ್ಧನ್ ಗುಂಡಪ್ಪ ಗುಳಗೆ, ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಕಲಬುರಗಿ ಎ.ಪಿ.ಎಂ.ಸಿ. ಅಧ್ಯಕ್ಷ ಗುರುಬಸಪ್ಪ ಕಣಿಕಿ, ನಗರಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಎಂ.ಎನ್ ಅಜಯ ನಾಗಭೂಷಣ, ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ, ಐ.ಜಿ.ಪಿ ಮನೀ ಖರ್ಬಿಕರ್, ಕಲಬುರಗಿ ನಗರ ಪೋಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್,  ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ದಿಲೀಷ ಶಶಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ನಗರಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಚಪ್ಪಾ ಸೇರಿದಂತೆ ಇನಿತರ ಜನಪ್ರತಿನಿಧಿಗಳು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಸ್ವಾಗತಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಧಯಾಘನ್ ಧಾರವಾಡಕರ್ ಅವರು ವಂದಿಸಿದರು.

Key words:  first priority – government – double –income-farmer- CM B.S.Yeddyurappa