ಬಿಜೆಪಿ ಶಾಸಕರ ಮೇಲೆ ಎಫ್ ಐಆರ್: ಕಾಂಗ್ರೆಸ್ ಸರ್ಕಾರದ ವಿರುದ್ದ ಎನ್.ರವಿ ಕುಮಾರ್ ವಾಗ್ದಾಳಿ.

ಬೆಂಗಳೂರು,ಮೇ,25,2023(www.justkannada.in):  ಇಬ್ಬರು ಬಿಜೆಪಿ ಶಾಸಕರ ಮೇಲೆ ಎಫ್ ಐ ಆರ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಎನ್.ರವಿಕುಮಾರ್,  ಈಗ ನಿಮ್ಮ ಸರ್ಕಾರ ಬಂದಿದೆ ಪೊಲೀಸರು ಕೆಲಸ ಮಾಡುತ್ತಾರೆ. ಆಗ ನಮ್ಮ ಸರ್ಕಾರ ಇತ್ತು, ಆಗಲೂ ಕೆಲಸ ಮಾಡಿದ್ದಾರೆ. ನಮ್ಮ ಇಬ್ಬರು ಶಾಸಕರ ಮೇಲೆ ಎಫ್​ಐಆರ್ ದಾಖಲಿಸಿದ್ದಾರೆ. ಭಯೋತ್ಪಾದಕ, ನಕ್ಸಲ್ ಬೆಂಬಲಿಗರ ಪರವಾಗಿ ನಿಂತಿದ್ದೀರಾ? ಟಿಪ್ಪು ಜಯಂತಿ ಬೇಡ ಅಂತ ಹೇಳಿದ್ದಕ್ಕೆ ನಮ್ಮವರ ಮೇಲೆ ಎಫ್​ಐಆರ್ ಹಾಕುತ್ತೀರಾ? ಬಂಟ್ವಾಳದಲ್ಲಿ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡುವವರ ಮೇಲೆ ಎಫ್​​ ಐಆರ್ ಹಾಕಿಲ್ಲ, ಧರ್ಮ ರಕ್ಷಣೆ ಮಾಡುವ ನಮ್ಮ ಶಾಸಕರು, ಕಾರ್ಯಕರ್ತರ ಮೇಲೆ ಎಫ್​ಐಆರ್ ಹಾಕುತ್ತೀರಾ ಎಂದು ಕಿಡಿಕಾರಿದರು.

ಪೊಲೀಸ್ ಇಲಾಖೆ ಕೇಸರಿಕರಣ ಮಾಡಲು ಬಿಡಲ್ಲ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎನ್.ರವಿ ಕುಮಾರ್, ಒಬ್ಬ ಪೊಲೀಸ್ ಅಧಿಕಾರಿಯೂ ಕೇಸರಿ ಬಟ್ಟೆ ಧರಿಸಿ ಬಂದಿಲ್ಲ, ಕೇಸರೀಕರಣ ಮಾಡ್ತಿದ್ದೀರಾ ಅಂತ ಡಿಸಿಎಂ ಪ್ರಶ್ನೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಮೊದಲು ತಮ್ಮ ಗ್ಯಾರಂಟಿ ಕಾರ್ಡ್ ಘೋಷಣೆಯ ಹಣ ಕೊಡಲಿ‌, ಆಮೇಲೆ ಪೊಲೀಸ್ ಇಲಾಖೆ ಕೇಸರೀಕರಣ ಆಗಿದೆಯೋ ಇಲ್ಲವೋ ನೋಡೋಣ ಎಂದು ಟಾಂಗ್ ನೀಡಿದರು.

Key words: FIR -against –BJP- MLA-MLC-N. Ravi Kumar- Congress- government.