ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕಾರ್ಯಪಡೆಯಿಂದ 2 ದಿನಗಳಲ್ಲಿ ಸರ್ಕಾರಕ್ಕೆ ಅಂತಿಮ ವರದಿ

ಬೆಂಗಳೂರು,ನವೆಂಬರ್,5,2020(www.justkannada.in):  ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ರಚನೆ ಮಾಡಲಾಗಿರುವ ಕಾರ್ಯಪಡೆಯು ತನ್ನ ಅಂತಿಮ ಶಿಫಾರಸುಗಳ ಕರಡನ್ನು ಇನ್ನೆರಡು ದಿನಗಳಲ್ಲಿ ಸರಕಾರಕ್ಕೆ ಸಲ್ಲಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.jk-logo-justkannada-logo

“ರಾಷ್ಟ್ರೀಯ ಶಿಕ್ಷಣ ನೀತಿ-2020: ವಿಶ್ವಗುರುವಾಗುವತ್ತ ಭಾರತ” ಎಂಬ ವಿಷಯದ ಬಗ್ಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಗುರುವಾರ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಬೆಂಗಳೂರಿನಿಂದಲೇ ಪಾಲ್ಗೊಂಡು ಮಾತನಾಡಿದ ಅವರು; ನಿವೃತ್ತ ಐಎಎಸ್‌ ಅಧಿಕಾರಿ ಎಸ್.ವಿ.ರಂಗನಾಥ್‌ ಅವರ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದ್ದು, ಕಾರ್ಯಪಡೆಯು ಈಗಾಗಲೇ ಪ್ರಾಥಮಿಕ ಹಂತದ ಶಿಫಾರಸುಗಳನ್ನು ಸಲ್ಲಿಸಿದೆ. ಅಂತಿಮ ಹಂತದ ಶಿಫಾರಸುಗಳನ್ನು ಈ ಶನಿವಾರ ಸಲ್ಲಿಸಲಿದೆ ಎಂದರು.

ಉಳಿದೆಲ್ಲ ರಾಜ್ಯಗಳಿಗಿಂತ ಮೊದಲೇ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡುವುದು ಸರಕಾರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಾದ ಎಲ್ಲ ಹೆಜ್ಜೆಗಳನ್ನು ಇಡಲಾಗುತ್ತಿದೆ. ಇರುವ ವಿಶ್ವವಿದ್ಯಾಲಯಗಳಲ್ಲಿಯೇ 6 ಸಂಶೋಧನಾ ಹಾಗೂ 10 ಬೋಧನಾ ವಿವಿಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಉಳಿದಂತೆ 34 ಶಿಕ್ಷಣ ಸಂಸ್ಥೆಗಳನ್ನು ಸ್ವಾಯತ್ತ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸಲಾಗುವುದು. ಎಲ್ಲೆಡೆಯು ಬಹುವಿಷಯಗಳ ಕಲಿಕೆ ಮತ್ತು ಬೋಧನೆಗೆ ಒತ್ತಾಸೆ ನೀಡಲಾಗುತ್ತಿದೆ. ಇದರಿಂದ ಸಮಾಜದಲ್ಲಿರುವ ಸಾಮಾಜಿಕ, ಆರ್ಥಿಕ ಮತ್ತಿತರೆ ಎಲ್ಲ ಸಮಸ್ಯೆಗಳಿಗೆ ಚರಮಗೀತೆ ಹಾಡುವುದು ನಮ್ಮ ಉದ್ದೇಶವಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

ಈವರೆಗೂ ಪಠ್ಯೇತರ ಚಟುವಟಿಕೆಗೂ ಪಠ್ಯಕ್ಕೂ ಸಂಬಂಧವೇ ಇರುತ್ತಿಲ್ಲ. ಇನ್ನು ಮುಂದೆ ಹಾಗಾಗುವುದಿಲ್ಲ. ಪಠ್ಯೇತರ ವಲಯದಲ್ಲಿದ್ದ ಕ್ರೀಡೆ, ಕಲೆ, ಸಂಗೀತ ಮತ್ತಿತರೆ ವಿಷಯಗಳಲ್ಲಿಯೂ ಪಠ್ಯದ ವ್ಯಾಪ್ತಿಗೇ ಬರುತ್ತವೆ. ಆಗ ಜ್ಞಾನಾರ್ಜನೆಯ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಹೆಚ್ಚಾಗುತ್ತದೆ. ಅದರಿಂದ ಬಹ ಆಯಾಮದ ಪ್ರತಿಭೆಗಳು ನಮ್ಮ ಶೈಕ್ಷಣಿಕ ವ್ಯವಸ್ಥೆಯಿಂದ ಹೊರಹೊಮ್ಮಲಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ನುಡಿದರು.

ಗಳಿಸಿದ ಜ್ಞಾನ ಸಮಾಜಕ್ಕೆ ಇರಲಿ:

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ವಜೂಭಾಯಿ ವಾಲ ಅವರು,  ಸಮಾಜಕ್ಕೆ ಒಳ್ಳೆಯದಾಗುವ ಹಾಗೂ ಎಲ್ಲ ಹಂತಗಳಲ್ಲೂ ಜ್ಞಾನವನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಗಳಿಸಿದ ಜ್ಞಾನವನ್ನು ಸಮಾಜಕ್ಕೇ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಬೋಧಕರ ಪಾತ್ರ ಅತಿದೊಡ್ಡದು ಎಂದರು.

ವಿದ್ಯಾರ್ಥಿಗಳಿಗೆ ತಾವು ಯಾಕೆ ಶಿಕ್ಷಣ ಪಡೆಯುತ್ತಿದ್ದೇವೆ? ಅದನ್ನು ಯಾವ ದಿಕ್ಕಿನಲ್ಲಿ, ಹೇಗೆ ಬಳಕೆ ಮಾಡಬೇಕು? ಗಳಿಸಿದ ಜ್ಞಾನವನ್ನು ಸಾರ್ಥಕಗೊಳಿಸಿಕೊಳ್ಳುವುದು ಹೇಗೆ? ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾದ ಸಂಗತಿ ಎಂದು ರಾಜ್ಯಪಾಲರು ಒತ್ತಿ ಹೇಳಿದರು.final-report-2-days-task-force-implement-national-education-policy-dcm-ashwath-narayan

ಆಧ್ಯಾತ್ಮ ಮತ್ತು ತಂತ್ರಜ್ಞಾನ ಒಟ್ಟಿಗಿರಲಿ:

ವೆಬಿನಾರ್‌ ವೇದಿಕೆಯಲ್ಲಿ ಬೆಂಗಳೂರಿನಿಂದಲೇ ಭಾಗಿಯಾಗಿದ್ದ ಶ್ರೀ ರವಿಶಂಕರ್‌ ಗುರೂಜಿ ಅವರು; “ತಂತ್ರಜ್ಞಾನ ಮತ್ತು ಆಧ್ಯಾತ್ಮವನ್ನು ಬೇರೆಬೇರೆಯಾಗಿ ನೋಡಬಾರದು. ನಮ್ಮ ಮನಸ್ಸು ಮತ್ತು ದೇಹಕ್ಕೆ ಹೇಗೆ ಅವಿನಾಭಾವ ಸಂಬಂಧ ಇದೆಯೋ ಅದೇ ರೀತಿ ಆಧ್ಯಾತ್ಮಕ್ಕೂ ಟೆಕ್ನಾಲಜಿಗೂ ಸಂಬಂಧ ಇದೆ. ಈ ಹಿನ್ನೆಲೆ ಇವೆರಡೂ ಅಂಶಗಳೂ ಒಟ್ಟಾಗಿ ಇರಬೇಕು ಎಂದರು.

ನಮಗೆಲ್ಲರಿಗೂ ಗೊತ್ತಿರುವಂತೆ ತಂತ್ರಜ್ಞಾನ ಇಲ್ಲದಿದ್ದರೆ, ಜೀವನದಲ್ಲಿ ಆರಾಮ ಎನ್ನುವುದು ಇರುವುದಿಲ್ಲ. ಅದೇ ರೀತಿ ಮನಸ್ಸಿನಲ್ಲಿ ಶಾಂತಿ-ಪ್ರಸನ್ನತೆ ಇಲ್ಲದಿದ್ದರೆ ಮತ್ತೂ ಜೀವನದಲ್ಲಿ ಶಾಂತಿ ಇರುವುದಿಲ್ಲ. ನಮ್ಮಲ್ಲಿ ಅಂತರ್‌ಶಾಂತಿ, ಪ್ರಸನ್ನತೆ ಇರಬೇಕಾದರೆ ಅದಕ್ಕೆ ಆಧ್ಯಾತ್ಮ ಬೇಕೇಬೇಕು. ಹೀಗಾಗಿ ಶಿಕ್ಷಣದಲ್ಲಿ ವೀವನದ ಮೌಲ್ಯಗಳನ್ನು ಅಳವಡಿಸಬೇಕು. ಅಂದರೆ; ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ಶ್ರೀ ಗುರೂಪಿ ಅವರು ಹೇಳಿದರು.

ಉಳಿದಂತೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್‌, ಎಐಸಿಟಿಇ ಚೇರ್ಮನ್‌ ಪ್ರೊ.ಅನಿಲ್‌ ಸಹಸ್ರಬುದ್ದೆ, ವಿಟಿಯು ವಿವಿಯ ಉಪ ಕುಲಪತಿ ಪ್ರೊ.ಕರಿಸಿದ್ದಪ್ಪ ಮುಂತಾದವರು ಮಾತನಾಡಿದರು. ಜತೆಗೆ, ಶ್ರೀ ರವಿಶಂಕರ ಗುರೂಜಿ ಅವರು ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದವರು ಕೇಳಿದ ಕೆಲ ಮಹತ್ವದ ಪ್ರಶ್ನೆಗಳಿಗೆ ಉತ್ತರ ನೀಡಿದರು.

Key words: Final report – 2 days – task force – implement -National Education Policy-DCM- ashwath narayan