ಬೆಂಗಳೂರು ಗಲಭೆಗೆ ಸರ್ಕಾರದ ವೈಫಲ್ಯವೇ ನೇರ ಕಾರಣ: ಸಿಎಂಗೆ ಪತ್ರ ಬರೆದು ಹಲವು ಪ್ರಶ್ನೆಗಳನ್ನ ಹಾಕಿದ ಸಿದ್ಧರಾಮಯ್ಯ

ಬೆಂಗಳೂರು,ಆ,19,2020(www.justkannada.in): ಬೆಂಗಳೂರಿನ ಕೆ.ಜೆ.ಹಳ್ಳಿ ಮತ್ತು ಡಿ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಆಗಸ್ಟ್ 11 ರಂದು ನಡೆದ ಘಟನೆಗಳಿಗೆ ಸರ್ಕಾರದ ವೈಫಲ್ಯವೇ ನೇರ ಕಾರಣ. ಗುಪ್ತಚರ ಇಲಾಖೆಯ ವೈಫಲ್ಯವೂ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪಿಸಿದರು.

ಗಲಭೆ ಪ್ರಕರಣ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದು 13 ಅಂಶಗಳನ್ನ ಪ್ರಸ್ತಾಪಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಸರ್ಕಾರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಬಿಟ್ಟು ವಿರೋಧ ಪಕ್ಷವಾದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. ಸರ್ಕಾರದ ವೈಫಲ್ಯದಿಂದಲೇ ಬೆಂಗಳೂರು ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ನಡೆದಿದೆ ಎಂದು ಆರೋಪಿಸಿದರು.

ಸಿಎಂ ಬಿಎಸ್ ವೈಗೆ ಬರೆದಿರುವ ಪತ್ರದಲ್ಲಿ ಈ ಕೆಳಕಂಡ ಅಂಶಗಳನ್ನ ಉಲ್ಲೇಖಿಸಿ ಮಾಜಿ ಸಿಎಂ ಸಿದ್ಧರಾಮಯ್ಯ ಸರ್ಕಾರವನ್ನ ತರಾಟೆ ತೆಗೆದುಕೊಂಡಿದ್ದು ಹೀಗೆ…

ಡಿ.ಜೆ.ಹಳ್ಳಿಯ ಘಟನೆಯ ನೈತಿಕ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು….

ಡಿ.ಜೆ.ಹಳ್ಳಿಯ ಘಟನೆಯ ನೈತಿಕ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಆಡಳಿತ ಕೇಂದ್ರದ ಕೈಯಳತೆ ದೂರದಲ್ಲಿರುವ ಈ ಪ್ರದೇಶದಲ್ಲಾದ ಅನಾಹುತವನ್ನು ನಿಭಾಯಿಸಲು ಆಗಲಿಲ್ಲವೆಂದರೆ ಸರ್ಕಾರ ಯಾಕಿರಬೇಕು. ಪ್ರವಾದಿಯವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರ ಕುರಿತು ದೂರು ಬಂದ ತಕ್ಷಣ ಪೊಲೀಸರು ಕ್ರಮ ಕೈಗೊಂಡಿದ್ದರೆ ಈ ಅನಾಹುತಕ್ಕೆ ಅವಕಾಶ ಇರುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅಭಿ ಪ್ರಾಯ ವ್ಯಕ್ತಪಡಿಸಿದ್ದಾರೆ.failure-government-direct-bangalore-riots-former-cm-siddaramaiah-letter-cm

ಹಾಗೆಯೇ ಪ್ರವಾದಿಯವರ ಬಗೆಗೆ ಕೆಟ್ಟ ಚಿತ್ರ ರಚಿಸಿ ನವೀನ್ ಎಂಬ ಹುಡುಗನಿಗೆ ಕೊಟ್ಟವರಾರು? ಆ ಚಿತ್ರಗಳು ಸೋಷಿಯಲ್ ಮೀಡಿಯಾಗಳಿಗೆ ಬಿತ್ತರಿಸಲು ಕಾರಣರಾದವರು ಯಾರ್ಯಾರು ? ಎಂದು ಪ್ರಶ್ನಿಸಿರುವ ಸಿದ್ದು,  ಇದರ ಹಿಂದೆ ದೊಡ್ಡ ಪಿತೂರಿ ಇದ್ದಂತಿದೆ. ಈ ಕುರಿತು ಸಮರ್ಪಕವಾದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಸೂಕ್ಷ್ಮವಾದ ಇಂಥ ಘಟನೆಗಳನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

ಹಾಗೆಯೇ ಅಧಿಕಾರಿಗಳ ದಕ್ಷತೆ ಬಗ್ಗೆ ಪತ್ರದಲ್ಲಿ ಪ್ರಶ್ನಿಸಿರುವ ಸಿದ್ಧರಾಮಯ್ಯ, ಪ್ರಾಮಾಣಿಕರು, ದಕ್ಷರು ಅನ್ನಿಸಿಕೊಂಡ ಹಲವು ಪೊಲೀಸ್ ಅಧಿಕಾರಿಗಳನ್ನು ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಗಳಲ್ಲಿ ಕೂರಿಸಿದ್ದೀರಿ. ಭ್ರಷ್ಟರು, ಅಸೂಕ್ಷ್ಮರು ಆದ ಹಲವರಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಲಾಗಿದೆ. ಹೀಗಾಗಿ  ಸೂಕ್ಷ್ಮವಾದ ಇಂಥ ಘಟನೆಗಳನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಘಟನೆ ನಡೆದಿರುವುದು ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ (ಈ ಹಿಂದೆಯೂ ಈ ಪ್ರದೇಶಗಳಲ್ಲಿ ಸಮಸ್ಯೆಗಳಾಗಿದ್ದವು) ಮತ್ತು ಘಟನೆಗೆ ಕಾರಣವಾದ ವಿಷಯವೂ ಅತ್ಯಂತ ಸೂಕ್ಷ್ಮವಾಗಿತ್ತು. ಇದನ್ನು ನಿರ್ಲಕ್ಷಿಸಲು ಕಾರಣವೇನು…? ಎಂದು ಚಾಟಿ ಬೀಸಿದ್ದಾರೆ.

ಪೊಲೀಸ್ ಠಾಣೆಯನ್ನೇ ರಕ್ಷಿಸಲಾಗದ ಸರ್ಕಾರ ಜನರಿಗೆ ಯಾವ ರಕ್ಷಣೆ ನೀಡಲು ಸಾಧ್ಯ…?

ಶಾಸಕರ ಮನೆಯನ್ನು, ಪೊಲೀಸ್ ಠಾಣೆಯನ್ನು ರಕ್ಷಿಸಿಕೊಳ್ಳಲಾಗದ ಸರ್ಕಾರದಿಂದ ರಾಜ್ಯದ ಜನರಿಗೆ ಯಾವ ರಕ್ಷಣೆಯನ್ನು ನೀಡಲು ಸಾಧ್ಯ?  ಇದರ ಜವಾಬ್ದಾರಿಯನ್ನು ಸರ್ಕಾರ ಹೊರುವುದನ್ನು ಬಿಟ್ಟು  ತಲೆಕೆಟ್ಟ. ಹುಡುಗರ ಮೇಲೆ ಹೊರಿಸಿ ತಮ್ಮ ಸರ್ಕಾರ ಅತ್ಯಂತ ಸಮರ್ಥವಾಗಿದೆ ಎಂದು ಹೇಳುವುದು ಅತ್ಯಂತ ದುಷ್ಟ ಮತ್ತು ನಿರ್ಲಜ್ಜ ರಾಜಕಾರಣದ ಪರಮಾವಧಿಯ ನಿಲುವು ಎಂದು ಸರ್ಕಾರಕ್ಕೆ ಕುಟುಕಿದ್ದಾರೆ.

ಗೃಹ ಸಚಿವರನ್ನು ಭೇಟಿಯಾದ ಕರಾವಳಿಯ ಕೋಮುವಾದಿಯೊಬ್ಬನಿಗೆ, ಸಚಿವರು ನಿಮ್ಮ ಮೇಲಿನ ಎಲ್ಲಾ ಪ್ರಕರಣ ವಾಪಸ್ಸು ತೆಗೆದುಕೊಳ್ಳುತ್ತೇವೆಂದು ಹೇಳುವ ಮಾತುಕತೆಯೊಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದು ನಿಜವೇ ಆಗಿದ್ದರೆ ಸಮಾಜದ ಸ್ವಾಸ್ಥ್ಯವನ್ನು ನಿಮ್ಮ ಸರ್ಕಾರ ಕಾಪಾಡಲು ಸಾಧ್ಯವೆ..?  ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಜನರನ್ನು ಕಮ್ಯುನಲ್ ಗೂಂಡಾಗಳೆಂದು ಗುರುತಿಸಿದ್ದೀರಿ? ಎಷ್ಟು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿ ಗಡಿಪಾರು ಮಾಡಿದ್ದೀರಿ? ಈ ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾ ಸಂಘಟನೆಗಳನ್ನು ನಿಷೇಧಿಸುವ ತಾಕತ್ತನ್ನು ನೀವು ಪ್ರದರ್ಶಿಸಲು ಸಾಧ್ಯವೆ? ನಿಮ್ಮ ಕಡತದಲ್ಲಿನ ದಾಖಲೆಗಳ ಪ್ರಕಾರ ನಿಮ್ಮದೇ ಪಕ್ಷದ ಅಂಗ ಸಂಘಟನೆಗಳು ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿ ಅಸಂಖ್ಯಾತ ಪ್ರಕರಣಗಳಿವೆ. ಈ ಎಲ್ಲರ ಮೇಲೆಯೂ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಿ ನಾವು ಈ ವಿಷಯದಲ್ಲಿ ನಿಮ್ಮ ಜೊತೆ ಇರುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಶೃಂಗೇರಿ ಜೀವರಾಜ್  ಮೇಲೂ ಪ್ರಕರಣ ದಾಖಲಿಸಿ ಕ್ರಮವಹಿಸಿ….

ಹಿಂದೆ ಮುಂದೆ ನೋಡದೆ ಜನರನ್ನು ಧರ್ಮದ ಆಧಾರದ ಮೇಲೆ ದೊಂಬಿಯೆಬ್ಬಿಸಲು ಪ್ರಯತ್ನಿಸಿದ ಶೃಂಗೇರಿಯ ಜೀವರಾಜ್ ಅವರ ಮೇಲೂ ಪ್ರಕರಣ ದಾಖಲಿಸಿ ಕ್ರಮವಹಿಸಿ. ಶೃಂಗೇರಿಯಲ್ಲಿ ಆರೋಪಿ ಪತ್ತೆಯಾಗುವ ಮೊದಲೇ ಅಪರಾಧಿಗಳು ಯಾರು ಎಂದು ಬಿ.ಜೆ.ಪಿ ತೀರ್ಮಾನಿಸಿತ್ತು. ಬಡ ತರಕಾರಿ ವ್ಯಾಪಾರಿಗಳು/ಬೀದಿ ಬದಿಯ ವ್ಯಾಪಾರಿಗಳೇ ಈ ಕೃತ್ಯ ಮಾಡಿರುವುದೆಂದು ಅವರ ತಲೆಗೆ ಅಪರಾಧವನ್ನು ಕಟ್ಟಲಾಗಿತ್ತು. ಮಸೀದಿಯಲ್ಲಿ ಸಿ.ಸಿ.ಟಿವಿಗಳು ಇರದಿದ್ದರೆ ಬಜರಂಗದಳದ ಮಾಜಿ ಕಾರ್ಯಕರ್ತನ ಬದಲಿಗೆ ಇನ್ಯಾರೋ ಇರುತ್ತಿದ್ದರು ಎಂದು ಸಿದ್ಧರಾಮಯ್ಯ ವಿವರಿಸಿದ್ದಾರೆ.

ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ವಸೂಲು ಒಂದು ಗುಂಪಿಗೆ, ಒಂದು ಘಟನೆಗೆ ಮಾತ್ರ ಸಂಬಂಧಿಸಿರಬಾರದು…

ಇನ್ನು ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿದವರಿಂದ ನಷ್ಟ ವಸೂಲು ಮಾಡಲು ತೀರ್ಮಾನಿಸಿರುವ ಸರ್ಕಾರದ ನಿರ್ಧಾರದ ಬಗ್ಗೆ ಉಲ್ಲೇಖಿಸಿರುವ ಸಿದ್ಧರಾಮಯ್ಯ,   ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿದವರಿಂದ ನಷ್ಟ ವಸೂಲು ಮಾಡುವುದು ಒಳ್ಳೆಯ ವಿಚಾರವೇ. ಆದರೆ ಇದು ಒಂದು ಗುಂಪಿಗೆ, ಒಂದು ಘಟನೆಗೆ ಮಾತ್ರ ಸಂಬಂಧಿಸಿರಬಾರದು. ಹಾಗೆ ಮಾಡುವುದಾದರೆ ಪೂರ್ವಾನ್ವಯಗೊಳಿಸಬೇಕು. ಕಳೆದ ಮೂವತ್ತು ವರ್ಷಗಳಿಂದೀಚೆಗೆ ಕಮ್ಯುನಲ್ ಮತ್ತಿತರ ಗಲಭೆಗಳಲ್ಲಿ ಮಾಡಿರುವ ಹಾನಿಯ ನಷ್ಟವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಆಡಳಿತ ಪಕ್ಷದಿಂದ ಸತ್ಯ ಶೋಧನಾ ತಂಡ ರಚನೆ ಪ್ರಜಾಪ್ರಭುತ್ವದ ಭೀಕರ ಅಪಹಾಸ್ಯದಂತೆ..

ಆಡಳಿತ ಪಕ್ಷವೊಂದು ಸತ್ಯ ಶೋಧನಾ ತಂಡ ರಚಿಸುವುದು ಪ್ರಜಾಪ್ರಭುತ್ವದ ಭೀಕರ ಅಪಹಾಸ್ಯದಂತೆ ಕಾಣುತ್ತಿದೆ. ಆಡಳಿತ ಪಕ್ಷವೊಂದು ಸತ್ಯ ಶೋಧನೆ ಮಾಡುತ್ತೇನೆಂದು ಹೊರಟರೆ ಅದು ತನಿಖೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಿದ್ಧರಾಮಯ್ಯ ಪತ್ರದಲ್ಲಿ ಟೀಕಿಸಿದ್ದಾರೆ.

ಘಟನೆಯಲ್ಲಿ ಎಸ್‍ಡಿಪಿಐ ಪಾತ್ರ ಇದೆ ಎಂದು ಹೇಳಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಯಾವ ಸಂಘಟನೆಯೇ ತಪ್ಪು ಮಾಡಿದ್ದರೂ ಸಮರ್ಪಕವಾದ ತನಿಖೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಹಾಗೆಯೇ  ಬೆಂಗಳೂರು ಡಿ.ಜೆ ಹಳ್ಳಿ ಕೆಜಿಹಳ್ಳಿ ಘಟನೆಯ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಬೇಕು ಎಂದು ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.

Key words: failure – government – direct -Bangalore riots-Former CM -Siddaramaiah – letter – CM