ರಾಜ್ಯದಲ್ಲಿ ಜು.31ರವರೆಗೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಲಾಕ್‍ ಡೌನ್ ವಿಸ್ತರಣೆ…..

Promotion

ಬೆಂಗಳೂರು,ಜು,4,2020(www.justkannada.in):  ಕೋವಿಡ್-19 ಅನ್‍ಲಾಕ್ ಹಂತ 2ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಗೃಹ ಸಚಿವಾಲಯವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಜು.31 ರವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ನೂತನ ಮಾರ್ಗಸೂಚಿಗಳು ತಕ್ಷಣದಿಂದ ಜಾರಿಗೆ ಬಂದಿದ್ದು, ಜು.31ರವರೆಗೆ ಚಾಲ್ತಿಯಲ್ಲಿ ಇರಲಿವೆ. ಬಿಬಿಎಂಪಿ ಆಯುಕ್ತರು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು ಹಾಗೂ ಇತರ ಇಲಾಖಾ ಮುಖ್ಯಸ್ಥರು ಇವುಗಳ ಅನುಷ್ಠಾನಕ್ಕೆ ಶ್ರಮಿಸುವಂತೆ ಅವರು ಸೂಚಿಸಿದ್ದಾರೆ.

ಅನ್‍ಲಾಕ್-2 ಕಂಟೈನ್ಮೆಂಟ್ ಝೋನ್‍ಗಳ ಹೊರಗೆ ಎಲ್ಲ ಬಗೆಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜು.31ರವರೆಗೆ ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು ಮುಚ್ಚಲ್ಪಟ್ಟಿರುತ್ತವೆ. ಆನ್‍ಲೈನ್ ಹಾಗೂ ದೂರಶಿಕ್ಷಣ ಮುಂದುವರೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ತರಬೇತಿ ಸಂಸ್ಥೆಗಳು ಡಿಓಪಿಟಿ ಹಾಗೂ ಡಿಪಿಎಆರ್ ಸೂಚನೆಗಳನ್ವಯ ಜು.15ರಿಂದ ಕಾರ್ಯಾರಂಭ ಮಾಡಬಹುದಾಗಿದೆ.extension-lockdown-containment-zones-state-july-31st

ರಾತ್ರಿ ಕರ್ಫ್ಯೂ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಕೈಗಾರಿಕೆ ಘಟಕಗಳಲ್ಲಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು, ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಪ್ರಮುಖ ಜಿಲ್ಲಾ ರಸ್ತೆಗಳಲ್ಲಿ ಸರಕು ಸಾಗಣೆ ಮಾಡುವ ವಾಹನಗಳು, ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗಿದೆ.

ಕಾರ್ಗೋ ವಾಹನಗಳಲ್ಲಿ ಲೋಡಿಂಗ್ ಹಾಗೂ ಅನ್ ಲೋಡಿಂಗ್ ಮಾಡುವುದು, ಬಸ್ಸು, ರೈಲು ಹಾಗೂ ವಿಮಾನದ ಮೂಲಕ ಆಗಮಿಸುವ ವ್ಯಕ್ತಿಗಳು ತಮ್ಮ ಸ್ವಸ್ಥಾನಗಳಿಗೆ ತಲುಪಲು ಅವಕಾಶ ಕಲ್ಪಿಸಲಾಗಿದೆ. ಬಿಬಿಎಂಪಿ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಹಾಗೂ ಇತರ ಸಂಬಂಧಪಟ್ಟ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಕಾನೂನು ಕಾಪಾಡುವ ನಿಟ್ಟಿನಲ್ಲಿ ಆದೇಶಗಳನ್ನು ಹೊರಡಿಸಬೇಕಿದೆ.

ರವಿವಾರ ಲಾಕ್‍ಡೌನ್ ಜುಲೈ 5ರಿಂದ ಅನ್ವಯವಾಗುವಂತೆ ಆಗಸ್ಟ್ 2ರವರೆಗೆ ಪ್ರತಿ ರವಿವಾರ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಅಗತ್ಯ ಚಟುವಟಿಕೆಗಳು ಹಾಗೂ ಈಗಾಗಲೆ ನಿಗದಿಯಾಗಿರುವ ವಿವಾಹಗಳಿಗೆ ನಿಯಮಾನುಸಾರ ಅವಕಾಶ ಕಲ್ಪಿಸಲಾಗಿದೆ.

ಸರಕಾರಿ ಕಚೇರಿಗಳು ಜು.10ರಿಂದ ಅನ್ವಯವಾಗುವಂತೆ ಎಲ್ಲ ಸರಕಾರಿ ಕಚೇರಿಗಳು, ಮಂಡಳಿಗಳು ಹಾಗೂ ನಿಗಮಗಳು(ಅಗತ್ಯ ಸೇವೆಗಳನ್ನು ನಿರ್ವಹಿಸುತ್ತಿರುವ ಕಚೇರಿಗಳು ಹೊರತುಪಡಿಸಿ) ಆಗಸ್ಟ್ 2ರವರೆಗೆ ಎಲ್ಲ ಶನಿವಾರ ಮುಚ್ಚಲ್ಪಡುತ್ತವೆ.

ಕಂಟೈನ್ಮೆಂಟ್ ಝೋನ್‍ಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳ ಅನ್ವಯ ಬಿಬಿಎಂಪಿ ಹಾಗೂ ಜಿಲ್ಲಾ ಪ್ರಾಧಿಕಾರಗಳು ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸುತ್ತವೆ. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಅಗತ್ಯ ಸೇವೆಗಳ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಕೆಲಸಗಳು ಹೊರತುಪಡಿಸಿ ಬೇರೆ ಕಾರಣಗಳಿಗಾಗಿ ಸಾಮಾನ್ಯ ಜನರ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ. ಕಂಟೈನ್ಮೆಂಟ್ ಝೋನ್‍ ಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಬಿಬಿಎಂಪಿ ಹಾಗೂ ಜಿಲ್ಲಾ ಪ್ರಾಧಿಕಾರಗಳು ಕಠಿಣವಾಗಿ ನಿರ್ವಹಣೆ ಮಾಡಬೇಕು. ಮಾರ್ಗಸೂಚಿಗಳು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.

ಕಂಟೈನ್ಮೆಂಟ್ ಝೋನ್‍ಗಳ ಹೊರಗೆ ಬಫರ್ ಝೋನ್‍ಗಳನ್ನು ಬಿಬಿಎಂಪಿ, ಜಿಲ್ಲಾ ಪ್ರಾಧಿಕಾರಗಳು ಗುರುತಿಸಬೇಕು. ಈ ಸ್ಥಳಗಳಲ್ಲಿ ನಿಬಂಧನೆಗಳನ್ನು ವಿಧಿಸಬೇಕು.

ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಸಂಚಾರಕ್ಕೆ ಯಾವುದೆ ನಿರ್ಬಂಧವಿಲ್ಲ. ಇದಕ್ಕಾಗಿ ಯಾವುದೆ ಬಗೆಯ ಪ್ರತ್ಯೇಕ ಅನುಮತಿ, ಇ-ಪರ್ಮಿಟ್ ಪಡೆಯುವ ಅಗತ್ಯವಿಲ್ಲ. ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಪ್ರಯಾಣಿಕ ರೈಲುಗಳು ಹಾಗೂ ಶ್ರಮಿಕ್ ರೈಲುಗಳು, ಸ್ಥಳೀಯ ವಿಮಾನಯಾನ ಪ್ರಯಾಣಿಕರು, ಹೊರ ದೇಶಗಳಲ್ಲಿ ಸಿಲುಕಿರುವ ಭಾರತೀಯರು ಹಾಗೂ ವಿದೇಶಕ್ಕೆ ತೆರಬೇಕಿರುವ ನಿಗದಿತ ವ್ಯಕ್ತಿಗಳು, ನಮ್ಮ ದೇಶದಲ್ಲಿ ಸಿಲುಕಿರುವ ವಿದೇಶಿಯರನ್ನು ಕಳುಹಿಸುವುದಕ್ಕೆ ಸಂಬಂಧಿಸಿದಂತೆ ಎಸ್‍ಒಪಿ ಅನ್ವಯ ಕ್ರಮ ಕೈಗೊಳ್ಳಲಾಗುವುದು.

65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಮಹಿಳೆಯರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಸುರಕ್ಷಿತವಾಗಿರಬೇಕು. ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಆರೋಗ್ಯ ಸೇತು ಆಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ವಿಜಯಭಾಸ್ಕರ್ ಆದೇಶದಲ್ಲಿ ತಿಳಿಸಿದ್ದಾರೆ.

Key words: Extension – Lockdown – Containment Zones – State -July 31st.