ಸಂಕಷ್ಟದಲ್ಲಿ ರಾಜ್ಯ: ಮೈತ್ರಿ ಸರಕಾರ ಉರುಳಿಸುವಾಗ ಇದ್ದ ಆಸಕ್ತಿ ಬಿಜೆಪಿ ನಾಯಕರಿಗೆ ಈಗ ಏಕಿಲ್ಲ: ಮಾಜಿ ಡಿಸಿಎಂ ಪರಮೇಶ್ವರ ವಾಗ್ದಾಳಿ

Promotion

ಬೆಂಗಳೂರು, ಆಗಸ್ಟ್ 08, 2019 (www.justkannada.in): ರಾಜ್ಯ ಸರಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ನೆರೆಹಾವಳಿಯಿಂದ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಎರಡೂವರೆ ಲಕ್ಷ ಜನ ಮನೆ ತೊರೆದಿದ್ದಾರೆ. 33 ಮಂದಿ ಪ್ರವಾಹದಿಂದ ಸಾವನ್ನಪ್ಪಿದ್ದಾರೆ. ಸಾವಿರಾರು ಜಾನುವಾರುಗಳು ಮೃತಪಟ್ಟಿವೆ. ಆದರೆ ಜನರ ಸಂಕಷ್ಟ ಕೇಳಲು ಸಚಿವರೇ ಇಲ್ಲ. ಕೇಂದ್ರ ಬಿಜೆಪಿ ನಾಯಕರಿಗೆ ಮೈತ್ರಿ ಸರಕಾರ ಉರುಳಿಸುವ ಸಂದರ್ಭದಲ್ಲಿ ಇದ್ದ ಆಸಕ್ತಿ ಈಗ ಇಲ್ಲದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವ ಸಚಿವ ಸಂಪುಟ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಸಚಿವರಿದ್ದರೆ ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿತ್ತಿದ್ದರು. ಆದರೆ ಇನ್ನೂ ಸಂಪುಟವನ್ನೂ ರಚನೆ ಮಾಡಿಲ್ಲ. ಅಮಿತ್ ಶಾ, ಪ್ರಧಾನಿ ಮೋದಿಗೆ ಸರ್ಕಾರ ಉರುಳಿಸುವಾಗ ಇದ್ದ ಕಾಳಜಿ ಈಗಿಲ್ಲ. ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದವರೇ ಆಗಿದ್ದಾರೆ. ಜತೆಗೆ ಅವರು ಹಣಕಾಸು ಸಚಿವರೂ ಆಗಿರುವುದರಿಂದ ಹೆಚ್ಚು ಹಣ ಬಿಡುಗಡೆ ಮಾಡಬೇಕು. ತಕ್ಷಣ ಕೇಂದ್ರ ಅಧ್ಯಯನ ತಂಡವನ್ನ ಕಳಿಸಬೇಕು ಎಂದು ಪರಮೇಶ್ವರ್ ಒತ್ತಾಯಿಸಿದರು.