ಬೆಂಗಳೂರು ಕೆರೆ, ರಾಜಕಾಲುವೆ ಒತ್ತುವರಿ ಬಗ್ಗೆ ಶ್ವೇತಪತ್ರ ಹೊರಡಿಸಿ – ಸಿಎಂ ಬೊಮ್ಮಾಯಿಗೆ ಹೆಚ್.ಡಿಕೆ ಆಗ್ರಹ.

ಬೆಂಗಳೂರು,ಸೆಪ್ಟಂಬರ್,2,2022(www.justkannada.in):  ಭೂಗಳ್ಳರಿಗೆ ನನ್ನಿಂದ ಸಹಾಯವಾಗಿದೆ ಎಂದು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೇರ  ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಯಾರು ಯಾರು ಕೆರೆ, ರಾಜಕಾಲುವೆ  ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಿ ಎಂದು  ಸಿಎಂ ಬೊಮ್ಮಾಯಿಗೆ ಹೆಚ್ ಡಿಕುಮಾರಸ್ವಾಮಿ ಆಗ್ರಹಪಡಿಸಿದರು.

ಮುಂಬರುವ ಚುನಾವಣೆ ಹಾಗೂ ಜೆಡಿಎಸ್ ನ ಪಂಚರತ್ನ ರಥ ಯಾತ್ರೆ ಕಾರ್ಯಕ್ರಮದ ಕುರಿತು ಚರ್ಚಿಸಲು ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕರೆದಿದ್ದ ಸಭೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು,  ಕಾಂಗ್ರೆಸ್ ಬಗ್ಗೆ ಸಿಎಂ ಏನು ಬೇಕಾದರೂ ಮಾತನಾಡಲಿ, ನನ್ನ ಬಗ್ಗೆ ಮಾತನಾಡುವಾಗ ನೋಡಿಕೊಂಡು ಮಾತನಾಡಲಿ. ಎಚ್ಚರಿಕೆಯಿಂದ ಮಾತನಾಡಿದರೆ ಉತ್ತಮ ಎಂದು ಅವರು  ಗರಂ ಆದರು.

ಫೆರಿಫೆರಲ್ ರಿಂಗ್ ರೋಡ್ ಗೆ 6 ಸಾವಿರ ಕೋಟಿ ರೂ. ಯೋಜನೆ ರೂಪಿಸಿದ್ದೆ. ಇಂದು  22 ಸಾವಿರ ಕೋಟಿ ರೂ. ಆಗಿದೆ. ಇದು ಕಾಂಗ್ರೆಸ್,  ಬಿಜೆಪಿಯ ಸಾಧನೆ. ಅಂದಾಜು ವೆಚ್ಚ ಹೆಚ್ಚಿಸುತ್ತಾ ಹೋಗುವುದೇ ಇವರ ಸಾಧನೆ ಎಂದು  ವಾಗ್ದಾಳಿ ನಡೆಸಿದರು.

ರಾಜಕಾಲುವೆ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿದ್ದೇನೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಾದರೆ ಅ ಹಣ ಯಾರ ಮನೆಗೆ ಹೋಯಿತು? ಧೈರ್ಯ ಇದ್ದರೆ ಒತ್ತುವರಿ ಮಾಡಿಕೊಂಡವರ ಹೆಸರುಗಳನ್ನು ಬಹಿರಂಗ ಮಾಡಲಿ. ಬೆಂಗಳೂರಿನಲ್ಲಿ ಕೆರೆ, ರಾಜಕಾಲುವೆ ಒತ್ತುವರಿದಾರರು ಯಾರು ಎನ್ನುವುದು ಜನರಿಗೂ ಗೊತ್ತಾಗಲಿ ಎಂದು ಪ್ರಶ್ನಿಸಿದರು.

ಬಿಬಿಎಂಪಿ ಬಿಜೆಪಿ  ಕೈಯಲ್ಲೇ ಇತ್ತು. ಅವರು ಏನೆಲ್ಲ ಮಾಡಿದ್ದರು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ದಾಖಲೆಗಳಿದ್ದ ಬಿಬಿಎಂಪಿ ಕಚೇರಿಗೆ ಬೆಂಕಿ ಹಾಕಿದ್ದು ಇವರ ಸಾಧನೆ ಅಷ್ಟೇ. ನನ್ನ ಎರಡು ಅವಧಿಯಲ್ಲಿ ಅಕ್ರಮಕ್ಕೆ ಪೋಷಣೆ ಮಾಡಿರುವ ದಾಖಲಾತಿ ಬಿಡುಗಡೆ ಮಾಡಲಿ ಎಂದು  ಹೆಚ್,ಡಿಕೆ ಸವಾಲು ಹಾಕಿದರು.

ಸರ್ಕಾರಿ ಜಮೀನು ಲೂಟಿ ಹೊಡೆಯುವ ಬಗ್ಗೆ ಸದನ ಸಮಿತಿ ಮಾಡಿದ್ದೆ. ಯಾರ ಕಾಲದಲ್ಲಿ ಏನಾಗಿದೆಯೆಂದು ಮುಖ್ಯಮಂತ್ರಿಗಳು ಶ್ವೇತ ಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.

ಕೆಂಪೇಗೌಡರ ಹೆಸರಿನಲ್ಲಿ ಬಿಜೆಪಿ ಪ್ರಚಾರ ಪಡೆಯುತ್ತಿದೆ:

ಈಗೇನೋ ಕೆಂಪೇಗೌಡ ಏರ್ ಫೊರ್ಟ್ ನಲ್ಲಿ  ಮಣ್ಣು ಸಂಗ್ರಹ ಮಾಡಿ ಥೀಮ್ ಪಾರ್ಕ್ ಮಾಡುತ್ತೇನೆ ಅಂತಿದ್ದಾರೆ. ಸೀಮಾಂಧ್ರದ ರಾಜಧಾನಿ ಅಮರಾವತಿ ಕಟ್ಟಲು ಮಣ್ಣು ತಂದಿದ್ದರು ಮೋದಿ. ಏನು ಆಯ್ತು ಆ ಮಣ್ಣು? ಈಗ ರಾಜ್ಯದಲ್ಲಿ ಮಣ್ಣಿನ ಸಂಗ್ರಹ ಮಾಡುತ್ತಾರಂತೆ. ಮೊದಲು ಮಳೆಯಿಂದ ಆಗಿರುವ ಸಮಸ್ಯೆಯ ಜನರಿಗೆ, ರೈತರಿಗೆ ಅನುಕೂಲ ಮಾಡಿಕೊಡ್ರಪ್ಪ ಎಂದು ವ್ಯಂಗ್ಯವಾಡಿದ ಹೆಚ್ ಡಿಕೆ, ಇವರದ್ದೆಲ್ಲ ಕೇವಲ ಪ್ರಚಾರ ಅಷ್ಟೆ. ಕಳೆದ ಬಾರಿ ಸಿಎಂ ಪ್ರದಕ್ಷಿಣೆ ಹಾಕಿದ್ದರು. ಸಮಸ್ಯೆ ಪರಿಹಾರ ಆಗಿಲ್ಲ. ಇದಕ್ಕಿಂತ ಉದಾಹರಣೆ ಬೇಕಾ? ಎಂದು ಸಿಎಂ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.

Key words: encroachment –Bangalore- Lake- Rajkaluve-HD Kumaraswamy-CM- Bommai.