ಶೀಘ್ರದಲ್ಲೇ ಕೆಎಸ್‌ ಆರ್‌ ಟಿಸಿಗೆ ಸೇರ್ಪಡೆಗೊಳ್ಳಲಿದೆ ವಿದ್ಯುತ್ ಚಾಲಿತ ಬಸ್ಸುಗಳು.

Promotion

ಬೆಂಗಳೂರು, ಮೇ 9, 2022(www.justkannada.in): ಬೆಂಗಳೂರು ಮಹಾನಗರದ ವಿವಿಧ ಮಾರ್ಗಗಳಲ್ಲಿ ಓಡಾಟವನ್ನು ಆರಂಭಿಸಿರುವ ವಿದ್ಯುತ್ ಚಾಲಿತ ಸರ್ಕಾರಿ ಬಸ್ಸುಗಳು ಶೀಘ್ರದಲ್ಲೇ ರಾಜ್ಯದ ಇತರೆ ನಗರಗಳಿಗೂ ಪ್ರಯಾಣ ಬೆಳೆಸಲಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಇತರೆ ನಗರಗಳಿಗೂ ಸಹ ಇ-ಬಸ್ಸುಗಳ ಸೇವೆಗಳನ್ನು ಆರಂಭಿಸಲು ಯೋಜಿಸಿದೆ. ಮೊದಲಿಗೆ ಬೆಂಗಳೂರಿನಿಂದ ದಾವಣಗೆರೆ, ಶಿವಮೊಗ್ಗ, ಮೈಸೂರು, ಮಡಿಕೇರಿ, ಚಿಕ್ಕಮಗಳೂರು ಹಾಗೂ ವೀರಾಜಪೇಟೆಗಳಿಗೆ ಇ-ಬಸ್ಸುಗಳ ಸೇವೆಗಳನ್ನು ಆರಂಭಿಸಲು ಯೋಜಿಸಲಾಗಿದೆ.

ಕೆಎಸ್‌ ಆರ್‌ ಟಿಸಿ ಮೂಲಗಳ ಪ್ರಕಾರ ಈ ಇ-ಬಸ್ಸುಗಳ ಸೇವೆಗಳು, ತೀವ್ರ ಪ್ರಮಾಣದಲ್ಲಿ ಏರಿಕೆ ಆಗಿರುವ ಡೀಸೆಲ್ ದರಗಳಿಂದಾಗಿ ಅಪಾರ ನಷ್ಟ ಅನುಭವಿಸುತ್ತಿರುವಂತಹ ಕೆಎಸ್‌ ಆರ್‌ಟಿಸಿ ನಿಗಮಕ್ಕೆ ಒಂದು ವರದಾನವಾಗಲಿದೆ. ಹೊಸ ಬಸ್ಸುಗಳನ್ನು ಖರೀದಿಸಿದರೆ ನಿಗಮಕ್ಕೆ ಹೆಚ್ಚಿನ ಹೊರೆಯಾಗುತ್ತದೆ. ಹಾಗಾಗಿ ನಿಗಮ ಖಾಸಗಿ ಸಂಸ್ಥೆಯೊಂದರಿಂದ ಈ ಬಸ್ಸುಗಳನ್ನು ಗುತ್ತಿಗೆಯ ಮೇಲೆ ತೆಗೆದುಕೊಳ್ಳಲು ಆಲೋಚಿಸುತ್ತಿದೆ. ಈ ವ್ಯವಸ್ಥೆಯ ಪ್ರಕಾರ, ಕೆಎಸ್‌ಆರ್‌ಟಿಸಿ ಇ-ಬಸ್ಸುಗಳನ್ನು ಒದಗಿಸುವ ಖಾಸಗಿ ಸಂಸ್ಥೆಗೆ ಪ್ರತಿ ಕಿ.ಮೀ.ಗೆ ರೂ.೫೨ (ಚಾರ್ಜಿಂಗ್ ವೆಚ್ಚಗಳು ಸೇರಿದಂತೆ) ನೀಡಲಿದೆ. ಖಾಸಗಿ ಸಂಸ್ಥೆ ಈ ಬಸ್ಸುಗಳ ನಿರ್ವಹಣೆ ಹಾಗೂ ಚಾಲಕರನ್ನು ಒದಗಿಸುವ ಜವಾಬ್ದಾರಿಯನ್ನೂ ಹೊರಲಿದೆ. ಕೆಎಸ್‌ ಆರ್‌ ಟಿಸಿ ಹಾಲಿ ಟಿಕೆಟ್ ದರಗಳ ಪ್ರಕಾರ ಪ್ರಯಾಣಿಕರಿಗೆ ಟಿಕೆಟ್‌ ಗಳನ್ನು ಹಂಚಲು ನಿರ್ವಾಹಕರ ಸೇವೆಗಳನ್ನು ಕಲ್ಪಿಸುತ್ತದೆ. ಈ ರೀತಿಯ ವ್ಯವಸ್ಥೆಯಿಂದ ಕೆಎಸ್‌ ಆರ್‌ ಟಿಸಿ ಇಂಧನ ವೆಚ್ಚಗಳನ್ನು ಉಳಿತಾಯ ಮಾಡುವುದಲ್ಲದೆ ನಿರ್ವಹಣಾ ವೆಚ್ಚಗಳನ್ನೂ ಸಹ ಉಳಿಸಬಹುದಾಗಿದೆ. ಆದರೆ, ಈ ಇ-ಬಸ್ಸುಗಳ ಸೇವೆಗಳ ಯಶಸ್ಸು ಪ್ರಯಾಣಿಕರನ್ನು ಅವಲಂಭಿಸಿದೆ. ಮೊದಲಿಗೆ ಈ ಇ-ಬಸ್ಸುಗಳನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತದೆ. ಸೇವೆಗಳ ಯಶಸ್ಸನ್ನು ಗಮನಿಸಿ ನಂತರದಲ್ಲಿ ಇತರೆ ಮಾರ್ಗಗಳಿಗೂ ಪರಿಚಯಸಲಾಗುತ್ತದೆ.

ಆದರೆ ಪ್ರಸ್ತುತ ಇ-ಬಸ್ಸುಗಳ ಸೇವೆಗಳನ್ನು ಆರಂಭಿಸಿರುವ ಬಿಎಂಟಿಸಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದ ಕೆಎಸ್‌ಆರ್‌ಟಿಸಿ ಕಲಿತುಕೊಳ್ಳಬೇಕಿದೆ. ಬಿಎಂಟಿಸಿಗೆ ಇ-ಬಸ್ಸುಗಳ ಸೇವೆಯ ಕಾರ್ಯಾಚರಣೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ. ಬಿಎಂಟಿಸಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ನ ಹಣ ಬಳಸಿಕೊಂಡು ಎನ್‌ ಟಿಪಿಸಿ ವಿದ್ಯುತ್ ವ್ಯಾಪಾರ್ ನಿಗಮದಿಂದ ೯೦ ವಿದ್ಯುತ್ ಬಸ್ಸುಗಳನ್ನು ಗುತ್ತಿಗೆಗೆ ತೆಗೆದುಕೊಂಡಿತು. ಇದಕ್ಕೆ ಬಿಎಂಟಿಸಿ ಪ್ರತಿ ಕಿ.ಮೀ.ಗೆ ರೂ.೫೧.೬೭ ಹಣ ಪಾವತಿಸುತ್ತಿದೆ. ಆದರೆ ಈ ಇ-ಬಸ್ಸುಗಳಿಂದ ನಿಗಮಕ್ಕೆ ಅಷ್ಟು ಆದಾಯ ಬರುತ್ತಿಲ್ಲ. ಈ ವಿದ್ಯುತ್ ಬಸ್ಸುಗಳ ಸೇವೆಗಳನ್ನು ಡಿಸೆಂಬರ್ ೨೭ರಂದು ಆರಂಭಿಸಲಾಯಿತು. ಮೊದಲ ದಿನ ಆರು ಬಸ್ಸುಗಳು ಓಡಾಟವನ್ನು ಆರಂಭಿಸಿದವು. ನಂತರದ ದಿನಗಳಲ್ಲಿ ಇದರ ಸಂಖ್ಯೆಯನ್ನು ೨೬ಕ್ಕೆ ಹೆಚ್ಚಿಸಲಾಯಿತು. ಕಂಪನಿಯೇ ಎಲ್ಲಾ ೯೦ ಬಸ್ಸುಗಳನ್ನೂ ಒದಗಿಸಿದೆ. ಆದರೆ ಸೂಕ್ತ ಚಾರ್ಜಿಂಗ್ ಸೌಲಭ್ಯಗಳ ಕೊರತೆಯಿಂದಾಗಿ ಈ ವಿದ್ಯುತ್ ಬಸ್ಸುಗಳ ಕಾರ್ಯಾಚರಣೆ ಸಂಪೂರ್ಣ ಸಾಮರ್ಥ್ಯದಷ್ಟು ಆರಂಭವಾಗಲಿಲ್ಲ. ಬಿಎಂಟಿಸಿ ಕೆ.ಆರ್.ಪುರಂ, ಯಶವಂತಪುರ, ಹಾಗೂ ಕೆಂಗೇರಿ ಡಿಪೋಗಳಿಂದ ತಲಾ ೩೦ ಬಸ್ಸುಗಳ ಸೇವೆಗಳನ್ನು ಆರಂಭಿಸಲು ನಿರ್ಧರಿಸಿದೆ. ಆದರೆ ಚಾರ್ಜಿಂಗ್ ಸೌಲಭ್ಯಗಳ ಕೊರತೆಯಿಂದಾಗಿ ಈ ಮೂರೂ ಡಿಪೋಗಳಲ್ಲಿ ಇನ್ನೂ ೬೪ ಬಸ್ಸುಗಳು ಸೇವೆ ಆರಂಭಿಸದೇ ಹಾಗೇ ನಿಂತಿವೆ.

ಈ ವ್ಯವಸ್ಥೆಯ ಪ್ರಕಾರ, ಈ ವಿದ್ಯುತ್ ಬಸ್ಸುಗಳು ಪ್ರತಿ ದಿನ ಕನಿಷ್ಠ ೧೮೦ ಕಿ.ಮೀ.ನಷ್ಟು ಪ್ರಯಾಣಿಸಬೇಕು. ಈ ೧೮೦ ಕಿ.ಮೀ.ಗೆ ಪ್ರತಿ ದಿನಕ್ಕೆ ಬಿಎಂಟಿಸಿ ರೂ.೯,೩೦೦ ವೆಚ್ಚ ಭರಿಸಬೇಕಾಗುತ್ತದೆ. ಆದರೆ ಈಗ ೨೬ ಬಸ್ಸುಗಳು ಕಾರ್ಯನಿರ್ವಹಿಸುತ್ತಿದ್ದು ಇದು ಪ್ರತಿ ದಿನ ಕೇವಲ ೧೭೩ ಕಿ.ಮೀ.ಗಳನ್ನು ಮಾತ್ರ ಕ್ರಮಿಸುತ್ತಿವೆ. ಇದರಿಂದಾಗಿ ವಿದ್ಯುತ್ ಬಸ್ಸುಗಳು ನಿಗಮಕ್ಕೆ ಬಿಳಿ ಆನೆಗಳಾಗಿ ಪರಿಣಮಿಸಿವೆ. ಹಾಗಾಗಿ ಕೆಎಸ್‌ಆರ್‌ಟಿಸಿ ಈ ಅನುಭವದಿಂದ ಪಾಠ ಕಲಿತು ಈ ರೀತಿ ನಷ್ಟ ಅನುಭವಿಸದಿರುವಂತೆ ಎಚ್ಚರಿಕೆ ವಹಿಸಬೇಕು.

ವಿಮಾನನಿಲ್ದಾಣದ ಬಳಿ ಇವಿಗಳು

ಶೀಘ್ರದಲ್ಲೇ ಕೆಂಪೇಗೌಡ ವಿಮಾನನಿಲ್ದಾಣದಿಂದ ವಿದ್ಯುತ್ ಬಸ್ಸುಗಳ ಸೇವೆಗಳು ಆರಂಭವಾಗಲಿದೆ. ಟರ್ಮಿನಲ್ ೧ ಹಾಗೂ ಟರ್ಮಿನಲ್ ೨ರಿಂದ ವಿದ್ಯುತ್ ಬಸ್ಸುಗಳ ಸೇವೆಗಳನ್ನು ಆರಂಭಿಸಲು ಯೋಜಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರ ಹಸಿರು ಇಂಧನ ಬಳಸುವ ಕನಸು ಹಾಗೂ ನಿರೀಕ್ಷೆ ಇದೀಗ ಈಡೇರಲಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Electric-powered- buses -soon – KSRTC