‘ದಂತಕಥೆಯಾದ ದಂತಚೋರ’ : ನರಹಂತಕ ವೀರಪ್ಪನ್‌ ಕುರಿತ ಮತ್ತೊಂದು ಪುಸ್ತಕ ಸದ್ಯದಲ್ಲೇ ಬಿಡುಗಡೆ…

ಮೈಸೂರು,ಅಕ್ಟೋಬರ್,20,2020(www.justkannada.in): ಕಾಡುಗಳ್ಳ, ನರಹಂತಕ ವೀರಪ್ಪನ್‌ ನ ಅಟ್ಟಹಾಸ, ಆತನ ವಿರುದ್ಧದ ಪೊಲೀಸ್‌ ಕಾರ್ಯಾಚರಣೆ, ಆತನ ಹತ್ಯೆ ಕುರಿತು ಮತ್ತೊಂದು  ಪುಸ್ತಕ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ರಾಜ್ಯದ  ನಿವೃತ್ತ ಪೊಲೀಸ್‌ ಮಹಾನಿರ್ದೇಶಕ, ಸಾಹಿತಿ, ಅಂಕಣಕಾರ ಡಾ.ಡಿ.ವಿ.ಗುರುಪ್ರಸಾದ್‌ ಈ ಕೃತಿಯನ್ನು ರಚಿಸಿದ್ದಾರೆ. ದಂತಕಥೆಯಾದ ದಂತಚೋರ ಎಂಬ ಈ ಕೃತಿಯಲ್ಲಿ ವೀರಪ್ಪನ್‌ ಬಾಲ್ಯದಿಂದ ಹಿಡಿದು ಆತ ಹತನಾಗುವವರೆಗಿನ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಸುಮಾರು 350 ಪುಟಗಳ ಈ ಪುಸ್ತಕ ನವೆಂಬರ್‌ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

ವೀರಪ್ಪನ್‌ ದುಷ್ಕೃತ್ಯಗಳು, ಆತನನ್ನು ಸೆರೆ ಹಿಡಿಯುವ ಕಾರ್ಯಾಚರಣೆ,  ವೀರಪ್ಪನ್‌ ನಡೆಸಿದ ಅಪಹರಣ ಪ್ರಕರಣಗಳು,  ಇನ್ನೇನು ವೀರಪ್ಪನ್‌ ಸೆರೆ ಸಿಕ್ಕ ಇಲ್ಲವೇ ಹೊಡೆದುರುಳಿಸಬೇಕೆನ್ನುಷ್ಟರಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾದ ಪೊಲೀಸರು, ವೀರಪ್ಪನ್‌ ಹತ್ಯೆಗೈದ ಕಾರ್ಯಾಚರಣೆ  ಹೀಗೆ ವಿವಿಧ ಚಿತ್ರಣವನ್ನು ಇಲ್ಲಿ ನೀಡಲಾಗಿದೆ. ಈ ಎಲ್ಲ ಚಿತ್ರಣವನ್ನು ಪ್ರತ್ಯಕ್ಷದರ್ಶಿಗಳು, ಕಾರ್ಯಾಚರಣೆ ನಡೆಸಿದ ಪೊಲೀಸರ  ಹೇಳಿಕೆ , ಪೊಲೀಸ್‌ ದಾಖಲೆಗಳ ಮೂಲಕವೇ ಮುಂದಿಡಲಾಗಿದೆ. ಡಾ. ಗುರುಪ್ರಸಾದ್‌ ಕೃತಿ ರಚಿಸುವ ಮುನ್ನ ವೀರಪ್ಪನ್‌ ದುಷ್ಕೃತ್ಯ ಎಸಗಿದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ವೀರಪ್ಪನ್‌ನಿಂದ ನೊಂದವರನ್ನು ಮಾತಾಡಿಸಿದ್ದಾರೆ. ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮೇ ಅವರ ಸಂದರ್ಶನವನ್ನೂ ನಡೆಸಿದ್ದಾರೆ.  ಇದೇ ಈ ಕೃತಿಯ ವೈಶಿಷ್ಠ್ಯ ಕೂಡ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರು ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಹೇಳುತ್ತಾರೆ-ಯಾವುದೇ ರಾಗ-ದ್ವೇಷವಿಲ್ಲದೇ ವೀರಪ್ಪನ್‌ ವ್ಯಕ್ತಿತ್ವವನ್ನು ಅವನ ಎಲ್ಲ ಓರೆ-ಕೋರೆಗಳ ಸಹಿತ ನಮ್ಮ ಮುಂದೆ ಪ್ರಸ್ತುತಪಡಿಸಲಾಗಿರುವ ಪುಸ್ತಕವಿದು. ಮುಂದಿನ ಪೀಳಿಗೆಗೆ ವೀರಪ್ಪನ್‌ ಯಾರು, ಆತನ ದುಷ್ಕೃತ್ಯಗಳು ಎಂತಹದಿತ್ತು, ಆತನ ವೈಯಕ್ತಿಕ ಬಲಗಳೇನು, ದೌರ್ಬಲ್ಯಗಳೇನು? ಅಟ್ಟಹಾಸಕ್ಕೆ ಕಾರಣಗಳೇನು, ಪೊಲೀಸ್‌ ಕಾರ್ಯಾಚರಣೆಯಲ್ಲಿಇದ್ದ ಕೊರತೆಗಳೇನು? ವೀರಪ್ಪನ್‌ ಹಿಡಿಯಲು ಅಷ್ಟು ಕಷ್ಟವಾದದ್ದೇಕೆ ಈ ಎಲ್ಲವಿಚಾರಗಳನ್ನು  ಪ್ರತ್ಯಕ್ಷದರ್ಶಿಗಳ ನೇರ ಮಾತುಗಳಲ್ಲೇ ಪರಿಚಯಿಸಿದ್ದಾರೆ.

ಈ ಕೃತಿಯನ್ನು ಓದಿರುವ ಕಿರುತೆರೆ ನಿರ್ದೇಶಕ ಟಿ.ಎನ್‌.ಸೀತಾರಾಂ ಅವರು ಕೃತಿ ಕುರಿತು ತಮ್ಮ ಅನಿಸಿಕೆಯನ್ನು ದಾಖಲಿಸಿದ್ದಾರೆ. ನಾವು ಈ ಹಿಂದೆ ವೀರಪ್ಪನ್‌ ಹೇಗಿರಬಹುದೆಂದು ಕಲ್ಪಿಸಿಕೊಂಡಿದ್ದೆವೋ ಅದಕ್ಕೆ ಭಿನ್ನವಾದ, ಮತ್ತು ವಾಸ್ತವಕ್ಕೆ ಹತ್ತಿರವಾದ ಚಿತ್ರವನ್ನು ಗುರುಪ್ರಸಾದ್‌ ಕೊಡುತ್ತಾರೆ. ನಮ್ಮ ಮನಸ್ಸಿನಾಳಕ್ಕೆ ಅವನ ರಕ್ತದಾಹವನ್ನು, ತಣ್ಣನೆಯ ಕ್ರೌರ್ಯವನ್ನು , ಮತ್ತವನ ಹಣದಾಸೆಯನ್ನು ಇಳಿಸುತ್ತಾರೆ. ಇದನ್ನು ಓದಿದ ನಂತರ  ಎರಡು ದಿನಗಳ ಕಾಲ ನನ್ನ ಮನಸ್ಸೇ ಒಂದು ರೀತಿಯಾಗಿ ಕಲಕಿ ಹೋಗಿತ್ತು. ಇಂತಹ ಪುಸ್ತಕವನ್ನು ಬರೆದಿರುವುದಕ್ಕೆ ಗುರುಪ್ರಸಾದರನ್ನು ಅಭಿನಂದಿಸಬೇಕು ಎಂದು ಟಿ.ಎನ್‌.ಸೀತಾರಾಂ ಹೇಳಿದ್ದಾರೆ.

ಹಿರಿಯ ಪತ್ರಕರ್ತ ಡಾ. ಕೂಡ್ಲಿಗುರುರಾಜ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.  ವೀರಪ್ಪನ್‌ ಅಟ್ಟಹಾಸ ಹಾಗೂ ಆತನ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಸುಮಾರು 10  ವರ್ಷಗಳ ಕಾಲ ಸಂಯುಕ್ತ ಕರ್ನಾಟಕ ಹಾಗೂ ಕನ್ನಡಪ್ರಭ ಪತ್ರಿಕೆಗಳಿಗೆ  ಹತ್ತಿರದಿಂದ ವರದಿ ಮಾಡಿರುವ ಅವರು ಈ ಕೃತಿ ಕುರಿತು ಹೀಗೆ ಹೇಳುತ್ತಾರೆ-dr-dv-guruprasad-book-dantakatheyada-danthachora-about-veerappan-release-soon

ಆಗ ವರದಿ ಮಾಡಿದ ಪತ್ರಕರ್ತರು ಕಂಡಿಲ್ಲದ ಎಷ್ಟೋ ಸೂಕ್ಷ್ಮ ಸಂಗತಿಗಳು ಈ ಪುಸ್ತಕದಲ್ಲಿ ಅಕ್ಷರರೂಪ ಪಡೆದಿದೆ. ವೀರಪ್ಪನ್‌ ಹತ್ಯೆಯಾದ ನಂತರ ಇಡೀ ವೀರಪ್ಪನ್‌ ವೃತ್ತಾಂತವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಕಾರ್ಯವನ್ನು ಲೇಖಕರು ಮಾಡಿದ್ದಾರೆ. ಇದು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಅಕಾಡೆಮಿಕ್‌ ಆಗಿಯೂ ಆಸಕ್ತಿ ಹುಟ್ಟಿಸುತ್ತದೆ. ಪೊಲೀಸರು, ಮನಶಾಸ್ತ್ರಜ್ಞರಿಗೆ ಈ ಕೃತಿ ಅಧ್ಯಯನ ಯೋಗ್ಯವಾಗಿದೆ. ಜನಸಾಮಾನ್ಯರು ಈ ಕೃತಿಯನ್ನು ಓದುವುದರಿಂದ ಕಾನನದ ರಕ್ಕಸ ವೀರಪ್ಪನ್‌ ನ ಸಂಪೂರ್ಣ ಕರಾಳ ಇತಿಹಾಸವನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೇ ಅರಿಯಬಹುದು ಎಂದಿದ್ದಾರೆ.

ವೀರಪ್ಪನ್‌ ಚಂಚಲ ಮನಸ್ಸಿನವನಾಗಿದ್ದ. ಯಾವ ಸಮಯದಲ್ಲಿ ಆತ ಹೇಗೆ ವರ್ತಿಸುತ್ತಾನೆ ಎಂದು ಊಹಿಸುವುದು ಕಷ್ಟವಾಗಿತ್ತು. ಇಂತಹ ವೀರಪ್ಪನ್‌ ವ್ಯಕ್ತಿತ್ವವನ್ನು ಈ ಕೃತಿಯಲ್ಲಿ ಅತ್ಯಂತ ಕುತೂಹಲಭರಿತವಾಗಿ ಚಿತ್ರಿಸಲಾಗಿದೆ ಎಂದಿದ್ದಾರೆ.

Key words: Dr. DV Guruprasad- book -dantakatheyada danthachora-about -Veerappan –release- soon.