ರೇಷ್ಮೆ ಉತ್ಪಾದನೆ ದ್ವಿಗುಣಗೊಳಿಸಿ. ಮಾರುಕಟ್ಟೆ ವಿಸ್ತರಿಸಿ – ಸಚಿವ ಡಾ. ನಾರಾಯಣಗೌಡ ಸೂಚನೆ.

ಬೆಂಗಳೂರು, ಸೆಪ್ಟಂಬರ್,28,2021(www.justkannada.in): ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಲ್ಲಿ (ಕೆ.ಎಸ್‍.ಐ.ಸಿ) ವಹಿವಾಟು ವಿಸ್ತರಣೆಗೆ ಕ್ರಮವಹಿಸಿ, ಉತ್ಪಾದನೆ ಕೂಡ ದ್ವಿಗುಣಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಇರುವ ನೌಕರರನ್ನೇ ಬಳಸಿಕೊಂಡು, ಮಾರುಕಟ್ಟೆ ವಿಸ್ತರಣೆಗೆ ಕ್ರಮ ವಹಿಸಬೇಕು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಸೂಚಿಸಿದರು.

ವಿಕಾಸ ಸೌಧದಲ್ಲಿ ಇಂದು ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ನಾರಾಯಣಗೌಡ,  ಕೆ.ಎಸ್‍.ಐ.ಸಿ. ಯಲ್ಲಿ ಕಾರ್ಯವೈಖರಿಗೆ  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಹಿಂದೆಯೇ ಕೆ.ಎಸ್.ಎಮ್.ಬಿ. ಇಂದ ಕಚ್ಚಾ ರೇಷ್ಮೆ ಖರೀದಿಸಬೇಕು ಎಂದು  ಕೆ.ಎಸ್.ಐ.ಸಿ.ಗೆ ಸೂಚನೆ ನೀಡಲಾಗಿತ್ತು. ಆದರೆ ಸಲ್ಲದ ನೆಪವೊಡ್ಡಿ ಕೆ.ಎಸ್.ಎಂ.ಬಿ. ಇಂದ ಖರೀದಿಸದೆ ಖಾಸಗಿಯವರಿಂದ ಖರಿದಿಸುತ್ತಿದ್ದಾರೆ. ಇನ್ನು ಮುಂದೆ ಅಗತ್ಯವಿರುವ ಕಚ್ಚಾ ರೇಷ್ಮೆಯನ್ನು ಕೆ.ಎಸ್.ಎಂ.ಬಿ. ಇಂದಲೇ ಖರೀದಿಸಬೇಕು ಎಂದು ಸಚಿವ ನಾರಾಯಣಗೌಡ ಖಡಕ್ಕಾಗಿ ಹೇಳಿದರು.

ಮಾರುಕಟ್ಟೆ ವಿಸ್ತರಿಸಿ, ಉತ್ಪಾದನೆ ದ್ವಿಗುಣಗೊಳಿಸಿ

ಖಾಸಗಿಯವರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಕೆ.ಎಸ್‍.ಐ.ಸಿ. ಮಾರ್ಕೇಟಿಂಗ್ ಮಾಡುವ ಕೆಲಸ ಆಗುತ್ತಿಲ್ಲ. ಮಾರುಕಟ್ಟೆ ನಿರ್ವಹಣೆಗೆ ಜವಾಬ್ದಾರಿ ವಹಿಸಿ ಒಬ್ಬರನ್ನು ನೇಮಿಸಬೇಕು. ಮಾರುಕಟ್ಟೆ ವಿಸ್ತರಣೆ ಆಗಬೇಕು. ಲಕ್ಷಾಂತರ ರೂಪಾಯಿ ಬೆಲೆಬಾಳುವ ರೇಷ್ಮೆ ಸೀರೆಯನ್ನು ಖರೀದಿಸಿದವರಿಗೆ, ಅತ್ಯುತ್ತಮವಾದ ಬ್ಯಾಗ್ ಅಥವಾ ಸೂಟ್‍ ಕೇಸ್‍ನಲ್ಲಿ ಸೀರಿಯನ್ನು ಹಾಕಿ ಕೊಡಬೇಕು. ಗುಣಮಟ್ಟದ ಮತ್ತು ಆಕರ್ಷಕ ರೀತಿಯ ಮಾರ್ಕೇಟಿಂಗ್ ಅತಿ ಮುಖ್ಯ ಎಂದು ಹೇಳಿದರು. ಮಾರ್ಕೇಟಿಂಗ್ ಜೊತೆಗೆ ಹೊಸ ಹೊಸ ಡಿಸೈನ್‍ ಕೂಡ ಬರಬೇಕು. ಅದಕ್ಕಾಗಿ ಓರ್ವ ಡಿಸೈನರ್‍ ಅನ್ನು ನೇಮಿಸಿ ಅಥವಾ ಇಲಾಖೆಯಲ್ಲಿ ಇರುವವರಿಗೆ ಜವಾಬ್ದಾರಿ ನೀಡಬೇಕು. ಮೈಸೂರು ಸಿಲ್ಕ್ ಗೆ ಬೇಡಿಕೆ ಇದೆ. ಆದರೆ ಉತ್ಪಾದನೆ ಕಡಿಮೆ ಪ್ರಮಾಣದಲ್ಲಿದೆ. ಎರಡು ಪಾಳಿಯಲ್ಲಿ ಕೆಲಸ ಮಾಡುವ ಮೂಲಕ, ಉತ್ಪಾದನೆಯನ್ನು ದ್ವಿಗುಣಗೊಳಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಯುನಿಯನ್‍ ಲೀಡರ್‍ಗಳ ಜೊತೆ ಸಭೆ ಕರೆದು ಚರ್ಚೆ ನಡೆಸಬೇಕು. ರೇಷ್ಮೆ ಸೀರೆ ಎಲ್ಲ ವರ್ಗದವರಿಗೆ ಸಿಗುವ ಹಾಗೆ ವಿವಿಧ ಗುಣಮಟ್ಟದಲ್ಲಿ ಸಿದ್ದಪಡಿಸಬೇಕು ಎಂದು ಹೇಳಿದರು.

ರೇಷ್ಮೆ ನೂಲು ತೆಗೆಯುವ ಯಂತ್ರ ಹಾಸನ, ಬೆಳಗಾವಿ, ಗುಲ್ಬರ್ಗ, ಕೂಡ್ಲಗಿಯಲ್ಲಿ ಬಳಕೆಯಾಗದೆ ನಿರುಪಯುಕ್ತವಾಗಿ ಬಿದ್ದಿದೆ. ಅದನ್ನು ಸರಿಪಡಿಸಿ, ಮೈಸೂರು, ಕನಕಪುರ, ಚನ್ನಪಟ್ಟಣ ಹಾಗೂ ಟಿ.ನರಸಿಪುರದಲ್ಲಿರುವ ಕೆ.ಎಸ್.ಐ.ಸಿ.ಯ ಘಟಕಗಳಿಗೆ ತರಬೇಕು. ದುರಸ್ತಿ ಮಾಡಿ ಆ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಬೇಕು. ಅನುಪಯುಕ್ತ ರೇಷ್ಮೆ (ಸ್ಕ್ರಾಪ್‍) ಯನ್ನು ಸರಿಯಾದ ರೀತಿಯಲ್ಲಿ ಹರಾಜು ಮಾಡದಿರುವುದು ಗಮನಕ್ಕೆ ಬಂದಿದೆ. ಇ ಟೆಂಡರ್ ಮೂಲಕವೇ ಹರಾಜು ಹಾಕಬೇಕು ಎಂದು ಹೇಳಿದರು.

ಏರ್ ಪೋರ್ಟ್‍ನಲ್ಲಿ ಮಳಿಗೆ ಆರಂಭಕ್ಕೆ ಕೂಡಲೆ ಕ್ರಮ ವಹಿಸಿ

ಬೆಂಗಳೂರು ಹಾಗೂ ದೆಹಲಿ ವಿಮಾನ ನಿಲ್ದಾಣದಲ್ಲಿ ರೇಷ್ಮೆ ಉತ್ಪಾದನಾ ಮಾರಾಟ ಮಳಿಗೆ ಶೀಘ್ರವೇ ತೆರೆಯಬೇಕು. ಅದಕ್ಕಾಗಿ ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಬೇಕು. ಮುಂಬೈನಲ್ಲಿ ಅತಿ ಹೆಚ್ಚು ಕನ್ನಡಗಿರು ಇರುವ ದಾದರ ಹಾಗೂ ಮಾಟುಂಗಾ ಪ್ರದೇಶದಲ್ಲಿ ಮಳಿಗೆ ಆರಂಭಿಸುವ ಬಗ್ಗೆ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹುಬ್ಬಳ್ಳಿಯಲ್ಲಿ ರೇಷ್ಮೆ ಟೆಸ್ಟಿಂಗ್ ಲ್ಯಾಬ್, ಗುಲ್ಬರ್ಗದಲ್ಲಿ ಪರ್ಚೇಸಿಂಗ್ ಸೆಂಟರ್ ‍ಸ್ಥಾಪಿಸುವ ಸಂಬಂಧ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿದರು.

ರೇಷ್ಮೆ ಬೆಳೆಗಾರರಿಂದ ಸಮಸ್ಯೆ ಆಲಿಸಿದ ಮಾರನೆ ದಿನವೇ ಕ್ರಮ ತೆಗೆದುಕೊಂಡ ಸಚಿವ ಡಾ. ನಾರಾಯಣಗೌಡ.

ರೇಷ್ಮೆ ಬೆಳೆಗೆ ತ್ರಿಪ್ಸ್ ಆ್ಯಂಡ್ ಮೈಟ್ಸ್ ಕೀಟದ ಬಾಧೆ ಕೆಲವು ಕಡೆಗಳಲ್ಲಿ ಶುರುವಾಗಿದೆ. ಅಂತಹ ಸ್ಥಳಗಳನ್ನು ಗುರುತಿಸಿ, ಇಲಾಖೆಯಿಂದಲೇ ಔಷಧ‍ ನೀಡಿ ಸಿಂಪಡಿಸುವ ಕೆಲಸ ವಾರದೊಳಗೆ ಮಾಡಬೇಕು ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು.

ನಿನ್ನೆ ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ರೈತರೊಂದಿಗೆ ಸಂವಾದ ನಡೆಸಿದ ವೇಳೆ ರೈತರು ರೇಷ್ಮೆಗೆ ತ್ರಿಪ್ಸ್ ಆ್ಯಂಡ್ ಮೈಟ್ಸ್ ಕೀಟದಿಂದ ಸಮಸ್ಯೆ ಆಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಆಯುಕ್ತ ಪೆದ್ದಪ್ಪಯ್ಯ ಅವರಿಗೆ ಸಚಿವರು ಸೂಚನೆ ನೀಡಿದರು.

ತಕ್ಷಣ ವಿಶೇಷ ಐಡಿ ಕಾರ್ಡ್, ಸಾರಿಗೆ ವೆಚ್ಚ ನೀಡಿ

ಶಿವಮೊಗ್ಗ ಹಾಗೂ ದಾವಣೆಗೆರೆ ಭಾಗದ ರೇಷ್ಮೆ ಬೆಳೆಗಾರರು ರೇಷ್ಮೆ ಗೂಡನ್ನು ಮಾರುಕಟ್ಟೆಗೆ ಸಾಗಿಸುವಾಗ ಪೊಲೀಸರು ಹಾಗೂ ದಲ್ಲಾಳಿಗಳಿಂದ ಕಿರಿಕಿರಿ ಆಗುತ್ತಿದೆ. ವಿನಾಕಾರಣ ತಪಾಸಣೆ ನೆಪದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳಿಂದ ಮುಕ್ತಿ ನೀಡಿ ಎಂದು ರೈತರು ನಿನ್ನೆ ಶಿವಮೊಗ್ಗದಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಐಡಿ ಕಾರ್ಡ್ ನೀಡುವ ಭರವಸೆ ಕೊಟ್ಟಿದ್ದ ಸಚಿವರು, ಇಂದು ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ತಕ್ಷಣ ವಿಶೇಷ ಗುರುತಿನ ಚೀಟಿ ಮಾಡಿ ರೈತರಿಗೆ ನೀಡಬೇಕು. ಮತ್ತೆ ಈ ವಿಚಾರದಲ್ಲಿ ದೂರು ಬರಬಾರದು. ಅಲ್ಲದೆ ಈ ಮೊದಲು ಶಿವಮೊಗ್ಗ, ದಾವಣಗೆರೆಯ ರೈತರು ಮಾರುಕಟ್ಟೆಗೆ ರೇಷ್ಮೆ ತಂದಾಗ ಪ್ರತಿ ಕೆ.ಜಿ.ಗೆ 10 ರೂಪಾಯಿ ಸಾರಿಗೆ ವೆಚ್ಚ ನೀಡಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ತಕ್ಷಣವೇ ಸಾರಿಗೆ ವೆಚ್ಚ ಪ್ರತಿ ಕೆ.ಜಿ. ಗೆ 10 ರೂ. ನೀಡುವುದನ್ನು ಪುನಾರಂಭಿಸಬೇಕು. ರೇಷ್ಮೆ ಇಲಾಖೆ ಆಯುಕ್ತರು ಈ ಬಗ್ಗೆ ಕ್ರಮ ವಹಿಸಿ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದರು.

ಸಭೆಯಲ್ಲಿ ಕೆ.ಎಸ್‍.ಐ.ಸಿ. ಅಧ್ಯಕ್ಷ ಎಸ್‍.ಆರ್. ಗೌಡ, ಕೆ.ಎಸ್.ಎಂ.ಬಿ. ಅಧ್ಯಕ್ಷೆ ಸಚಿತಾ, ಕೆ.ಎಸ್.ಎಂ.ಬಿ. ಎಂ.ಡಿ. ಕನಕವಲ್ಲಿ, ಇಲಾಖೆ ಆಯುಕ್ತ ಪೆದ್ದಪ್ಪಯ್ಯ ಮತ್ತಿತರರು ಉಪಸ್ಥಿತರಿದ್ದರು.

Key words: Double – silk production- Expand – market-Minister – Narayana Gowda.