ಮೈಸೂರಿನ ರಾಮಕೃಷ್ಣ ಆಶ್ರಮದಿಂದ ಬಡವರಿಗೆ ಆಹಾರ ಕಿಟ್ ವಿತರಣೆ

ಮೈಸೂರು, ಏಪ್ರಿಲ್ 23, 2020 (www.justkannada.in): ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕದ ಆವರಣ ದಲ್ಲಿ ಹಮ್ಮಿಕೊಳ್ಳಲಾಗಿರುವ ಬಡವರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾನ್ಯ ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಇಂಥ ಸನ್ನಿವೇಶದಲ್ಲಿ ಸ್ವಾಮೀಜಿಯವರು ಜನತೆಗೆ ಆಹಾರ ಕಿಟ್ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದಕ್ಕೆ ನಾನು ರಾಜ್ಯ ಸರ್ಕಾರದ ಸಚಿವನಾಗಿ ಹಾಗೂ ವೈಯುಕ್ತಿಕವಾಗಿ ಅಭಿನಂದನೆ ಸಲ್ಲಿಸುವೆ. ಇದೇ ರೀತಿ ಶಾಸಕರು ಸೇರಿ ಜನಪ್ರತಿನಿಧಿಗಳೂ ಇಂತಹ ಕಾರ್ಯ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಬೇಕು ಎಂದು ಸಚಿವರು ತಿಳಿಸಿದರು.

ಸ್ವಾಮಿ ಮುಕ್ತಿದಾನಂದ ಜಿ ಮಾತನಾಡಿ, ಕೊರೋನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದು, ಅಂತರ ಕಾಯ್ದುಕೊಳ್ಳಲು ಸೋಪು, ಬಟ್ಟೆ ಸೋಪು, ಆಹಾರ ಕಿಟ್ ಸೇರಿದಂತೆ ಅಗತ್ಯ ಇರುವ ಎಲ್ಲ ವಸ್ತುಗಳನ್ನು ನೀಡಲಾಗಿದೆ. ನೀವು ಕೈಗಳನ್ನು ಆಗಾಗ ಚೆನ್ನಾಗಿ ತೊಳೆದುಕೊಂಡು ಸೋಂಕಿನಿಂದ ದೂರ ಇರಿ. ಜೊತೆಗೆ ಬಡವರು ಹಸಿದುಕೊಂಡು ಇರಬಾರದು ಎಂದು ನಾವೂ ಸಹ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ಸಚಿವರು, ವಿವೇಕ ಸ್ಮಾರಕವನ್ನು ವೀಕ್ಷಿಸಿ, ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ನಾಗೇಂದ್ರ, ಸ್ವಾಮಿ ಮುಕ್ತಿದಾನಂದ ಜಿ, ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್  ಉಪಸ್ಥಿತರಿದ್ದರು.