ದೇವರಾಜ ಮಾರುಕಟ್ಟೆ,ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮ ವಿಚಾರ: 10-15 ದಿನಗಳಲ್ಲಿ ಈ ಕಟ್ಟಡಗಳ ಬಗ್ಗೆ ನಿರ್ಧಾರ ಎಂದ ಪ್ರಮೋದಾದೇವಿ ಒಡೆಯರ್.

ಮೈಸೂರು,ಮೇ,13,2022(www.justkannada.in):  ಮೈಸೂರಿನ ಪಾರಂಪರಿಕ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮ ವಿಚಾರ ಸಂಬಂಧ ಮುಂದಿನ  10-15 ದಿನಗಳಲ್ಲಿ ಈ ಕಟ್ಟಡಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು  ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನ ಶಾಸಕ ಎಲ್. ನಾಗೇಂದ್ರ ಅವರು ಭೇಟಿಯಾಗಿ ಚರ್ಚೆ ನಡೆಸಿದರು.

ಪಾರಂಪರಿಕ ಕಟ್ಟಡಗಳ ಜೀರ್ಣೋದ್ದಾರ, ಅಭಿವೃದ್ದಿ ಹಾಗೂ ದುರಸ್ತಿ ಕುರಿತು ಚರ್ಚೆ ನಡೆಯಿತು.ಟಾಸ್ಕ್ ಫೋರ್ಸ್ ಸಮಿತಿ, ಪಾರಂಪರಿಕ ತಜ್ಞರ ಸಮಿತಿ,  ಮೈಸೂರು ಮಹಾನಗರಪಾಲಿಕೆ ಕೌನ್ಸಿಲ್ ನಿರ್ಣಯಗಳ ಬಗ್ಗೆ  ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ನ್ಯಾಯಾಲಯದ ಆದೇಶ ಹಾಗೂ ಪಾರಂಪರಿಕ ಸಂರಕ್ಷಣಾ ಸಮಿತಿಗಳು ನೀಡಿರುವ ಅಭಿಪ್ರಾಯಗಳ ಬಗ್ಗೆ ಶಾಸಕ ಎಲ್.ನಾಗೇಂದ್ರ ವಿವರಣೆ  ನೀಡಿದರು. ವಿವರಣೆ ಆಲಿಸಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಈ ಬಗ್ಗೆ ನುರಿತ ಪರಿಣಿತ ತಜ್ಞರೊಂದಿಗೆ ಚರ್ಚಿಸಿ ಅಭಿಪ್ರಾಯ ತಿಳಿಸಲಾಗುವುದುಮುಂದಿನ 10-15 ದಿವಸಗಳಲ್ಲಿ ಈ ಕಟ್ಟಡಗಳ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು. ಇದೇ ವೇಳೆ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಉಪಸ್ಥಿತರಿದ್ದರು.

Key words: Devaraja Market- Lansdowne-Building-demolition-Pramodadevi Wodeyar –MLA-N.nagendra