15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಸದಬುಟ್ಟಿಗೆ ಎಸೆದ ಖಿನ್ನತೆಯಲ್ಲಿದ್ದ ಮಹಿಳೆ.

Promotion

ಚೆನ್ನೈ, ಜುಲೈ,7, 2022 (www.justkannada.in): ಇರುಳು ನಡಿಗೆ (sleep walking disorder) ಸಮಸ್ಯೆಯಿಂದಾಗಿ ಖಿನ್ನತೆಗೆ ಒಳಗಾಗಿದ್ದಂತಹ 35 ವರ್ಷ ವಯಸ್ಸಿನ ಓರ್ವ ಮಹಿಳೆ ಸುಮಾರು ರೂ.15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸೋಮವಾರ ಬೆಳಿಗ್ಗೆ ಅರೆ ನಿದ್ರಾವಸ್ಥೆಯಲ್ಲಿ ಎಟಿಎಂ ಒಂದರ ಕಸದಬುಟ್ಟಿಗೆ ಎಸೆದು ಹೋಗಿರುವ ಘಟನೆ ವರದಿಯಾಗಿದೆ.

ಕುಂದ್ರತ್ತೂರು ಮುರುಗನ್ ದೇವಾಲಯ ರಸ್ತೆಯಲ್ಲಿರುವ ಎಟಿಎಂ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿರುವ ಕೊತ್ತಂಡಮ್ ಎಂಬ ವ್ಯಕ್ತಿ ಕುಂದ್ರತ್ತೂರು ಪೋಲಿಸರಿಗೆ ಕಸದಬುಟ್ಟಿಯಲ್ಲಿ ಚಿನ್ನಾಭರಣಗಳಿರುವ ಚೀಲವೊಂದು ದೊರೆತಿರುವ ಕುರಿತು ಮಾಹಿತಿ ನೀಡಿದ್ದಾರೆ.

ಆತ ಕಸದಬುಟ್ಟಿಯಲ್ಲಿ ಚರ್ಮದ ಚೀಲವೊಂದು ಇರುವುದನ್ನು ಗಮನಿಸಿ, ಅದನ್ನು ತೆರೆದು ನೋಡಿದಾಗ ಚಿನ್ನಾಭರಣಗಳಿರುವುದು ಪತ್ತೆಯಾಗಿದೆ. ಕೂಡಲೇ ಆತ ಸಂಬಂಧಪಟ್ಟ ಎಟಿಎಂನ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರ ನೆರವಿನಿಂದ ವಿಷಯವನ್ನು ಕುಂದ್ರತ್ತೂರು ಪೋಲಿಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಆಗಮಿಸಿದ ಪೋಲಿಸರು ಸಿಸಿಟಿವಿ ಕ್ಯಾಮೆರಾ ಫೂಟೇಜ್ ಅನ್ನು ಪರಿಶೀಲಿಸಿ, ಮಹಿಳೆಯೊಬ್ಬರು ಈ ಕೈಚೀಲವನ್ನು ಕಸದಬುಟ್ಟಿಯೊಳಗೆ ಹಾಕಿ ಎಟಿಎಂನಿಂದ ಹೊರಗೆ ಹೋಗಿದ್ದನ್ನು ಗಮನಿಸಿದ್ದಾರೆ.

ಅದೇ ಸಮಯದಲ್ಲಿ ತಮ್ಮ 35 ವರ್ಷ ವಯಸ್ಸಿನ ಮಗಳು ಮನೆಯಿಂದ ಬೆಳಿಗ್ಗೆ ೪ ಗಂಟೆಯಿಂದ ಕಾಣೆಯಾಗಿದ್ದಾಳೆ ಎಂದು ಪೋಷಕರೊಬ್ಬರು ಪೋಲಿಸ್ ಠಾಣೆಗೆ ದೂರು ನೀಡಿದರು. ನಂತರ, ಆ ಪೋಷಕರು ತಮ್ಮ ಮಗಳು ಬೆಳಿಗ್ಗೆ ಸುಮಾರು ೭ ಗಂಟೆಯ ವೇಳೆಗೆ ಹಿಂದಿರುಗಿರುವುದಾಗಿಯೂ ತಿಳಿಸಿದರು. ಅನುಮಾನಗೊಂಡ ಪೋಲಿಸರು ಆ ಪೋಷಕರಿಗೆ ಎಟಿಎಂನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಂತಹ ಫುಟೇಜ್‌ ನ್ನು ಆ ಪೋಷಕರಿಗೆ ತೋರಿಸಿ, ಅದರಲ್ಲಿರುವ ಮಹಿಳೆ ಅವರ ಮಗಳೆಂಬುದನ್ನು ಖಾತ್ರಿಪಡಿಸಿಕೊಂಡರು.

ಆ ಪೋಷಕರಿಗೆ ಪೋಲಿಸರು ತಿಳಿಸುವವರೆಗೂ ತಮ್ಮ ಮಗಳು ಚಿನ್ನಾಭರಣಗಳಿರುವ ಚೀಲ ತೆಗೆದುಕೊಂಡು ಹೋಗಿರುವ ವಿಷಯವೇ ಗೊತ್ತಿರಲಿಲ್ಲ. ಪೋಲಿಸರು ಆ ಪೋಷಕರಿಗೆ ಮನೆಯಲ್ಲಿ ಚಿನ್ನಾಭರಣಗಳಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು. ಆಗ ಪೋಷಕರು ಪರಿಶೀಲಿಸಿದಾಗ ಆಭರಣಗಳು ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ಪೋಷಕರು ತಮ್ಮ ಮಗಳಿಗೆ ರಾತ್ರಿಯ ವೇಳೆ ನಡೆಯುವ ಸಮಸ್ಯೆ ಇರುವುದಾಗಿ ತಿಳಿಸಿದ್ದಾರೆ. ಜೊತೆಗೆ ಆಕೆ ಕೆಲವು ತಿಂಗಳುಗಳಿಂದ ಖಿನ್ನತೆಗೆ ಒಳಗಾಗಿದ್ದು ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿರುವುದಾಗಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

“ಎಟಿಎಂನ ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆಯಿಂದ ಪೋಲಿಸರಿಗೆ ಈ ಕುರಿತು ಮಾಹಿತಿ ನೀಡಿರದಿದ್ದರೆ, ಕಾಣೆಯಾಗಬಹುದಾಗಿದ್ದ ಚಿನ್ನಾಭರಣಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತಿತ್ತು,” ಎಂದು ಕುಂದ್ರತ್ತೂರು ಪೋಲಿಸ್ ನಿರೀಕ್ಷಕ ಚಂದ್ರು ತಿಳಿಸಿದ್ದಾರೆ.

ನಂತರ, ಪೊಲೀಸರು ಆ ಚಿನ್ನಾಭರಣಗಳಿದ್ದ ಚೀಲವನ್ನು ಆ ಕುಟುಂಬಕ್ಕೆ ಹಿಂದಿರುಗಿಸಿ, ಭದ್ರತಾ ಸಿಬ್ಬಂದಿಗೆ ಹಾಗೂ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಅವರ ಉತ್ತಮ ಕಾರ್ಯಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ

Key words: Depressed woman – threw- 15 lakhs -gold jewelery – dustbin.