ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಆಗ್ರಹ.

ಬೆಳಗಾವಿ,ಡಿಸೆಂಬರ್,12,2022(www.justkannada.in): ಗಡಿವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಕ್ಯಾತೆ ತೆಗೆಯುತ್ತಲೇ ಇದ್ದು, ಎಂಇಎಸ್ ಪುಂಡಾಟ ಮುಂದುವರೆದಿದೆ. ಈ ಮಧ್ಯೆ ಇದೀಗ ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಆಗ್ರಹ ಕೇಳಿ ಬಂದಿದೆ.

ತಾಲೂಕಿನ ಬೆಳಗುಂದಿಯಲ್ಲಿ ರವಳನಾಥ ಪಂಚಕ್ರೋಶಿ ಸಾಹಿತ್ಯ ಅಕಾಡೆಮಿ ವತಿಯಿಂದ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸಿದ್ದು, ಈ ಸಮ್ಮೇಳನದಲ್ಲಿ  ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶ ಮಾಡಿ ಎಂದು ನಾಡದ್ರೋಹಿ ನಿರ್ಣಯ ಅಂಗೀಕಾರ ಮಾಡಿದ್ದಾರೆ.

ಇನ್ನು ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ್ದ ಎಂಇಎಸ್ ಮುಖಂಡ ಶಿವಾಜಿ ಸುಂಟಕರ್ , ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಇತ್ಯರ್ಥವಾಗುವವರೆಗೂ ಗಡಿಭಾಗವನ್ನ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಿ .ಇಲ್ಲವೇ ಗಡಿಭಾಗದಲ್ಲಿ ಮರಾಠಿ ಭಾಷಿಕರಿಗೆ ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲಾತಿ ನೀಡಲಿ. ಈ ಕುರಿತು ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಲಿ ಎಂದು ಹೇಳಿದ್ದಾರೆ.

ಇನ್ನು ಮರಾಠಿ ಸಾಹಿತ್ಯ ಸಮ್ಮೇಳನದ ನಿರ್ಣಯಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಎಂಇಎಸ್ ಪುಂಡರ ವಿರುದ್ದ, ಸಮ್ಮೇಳನದ  ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿದ್ದಾರೆ.

Key words: Demand – Marathi Sahitya Sammelana – Belgaum -Union -Territory.