ಮ್ಯಾನ್​ಹೋಲ್ ನಿರ್ವಹಣೆಗೆ ದೆಹಲಿ ಮಾದರಿ: ಅಧ್ಯಯನ ನಡೆಸಿರುವ ಜಲಮಂಡಳಿ ತಂಡ, ಚಿಕ್ಕ ಜೆಟ್ಟಿಂಗ್ ಯಂತ್ರಗಳ ಖರೀದಿಗೆ ಚಿಂತನೆ

ಬೆಂಗಳೂರು:ಜುಲೈ-23: ನಗರದಲ್ಲಿರುವ ಮ್ಯಾನ್​ಹೋಲ್​ಗಳ ನಿರ್ವಹಣೆಗೆ ನವದೆಹಲಿ ಮಾದರಿಯನ್ನು ಅನುಸರಿಸಲು ಜಲಮಂಡಳಿ ತೀರ್ವನಿಸಿದೆ. ಅದಕ್ಕಾಗಿ ಅಧಿಕಾರಿಗಳ ತಂಡ ಈಗಾಗಲೇ ದೆಹಲಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಸದ್ಯದಲ್ಲೇ ವರದಿ ನೀಡಲಿದೆ.

ನಗರದಲ್ಲಿ 2.25 ಲಕ್ಷಕ್ಕೂ ಅಧಿಕ ಮ್ಯಾನ್​ಹೋಲ್​ಗಳಿವೆ. ಬಹುಪಾಲು ಮ್ಯಾನ್​ಹೋಲ್​ಗಳು ಕಿರಿದಾದ ರಸ್ತೆಯಲ್ಲಿ ಇರುವುದರಿಂದ ಅವುಗಳನ್ನು ಸ್ವಚ್ಛಗೊಳಿಸುವುದು ಜಲಮಂಡಳಿಗೆ ಸವಾಲಾಗಿದೆ. ಅಲ್ಲದೆ ಪ್ರಸ್ತುತ ಮ್ಯಾನ್​ಹೋಲ್ ಹಾಗೂ ಅದರ ನಿರ್ವಹಣೆಗಿರುವ ಜೆಟ್ಟಿಂಗ್ ಯಂತ್ರಗಳ ಸಂಖ್ಯೆಗೆ ಅಜಗಜಾಂತರವಿದ್ದು, ಯಂತ್ರಗಳ ಸಂಖ್ಯೆ ಹೆಚ್ಚಿಸುವುದಕ್ಕೂ ಜಲಮಂಡಳಿ ಮುಂದಾಗಿದೆ.

ಕಿರಿದಾಗಿರುವ ಮಾರ್ಗದಲ್ಲಿ ಸಾಗಲು ಅನುವಾಗುವಂತೆ ದೆಹಲಿಯಲ್ಲಿ ಚಿಕ್ಕಯಂತ್ರಗಳನ್ನು ಬಳಸಲಾಗುತ್ತಿದ್ದು, ಅದೇ ಮಾದರಿಯನ್ನು ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸುವುದಕ್ಕೆ ಜಲಮಂಡಳಿ ನಿರ್ಧರಿಸಿದೆ. ಅದಕ್ಕಾಗಿ ಅಧಿಕಾರಿಗಳು ವರದಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಮಲಗುಂಡಿಗಳ ಸ್ವಚ್ಛತೆಗಿಲ್ಲ ತಂತ್ರಜ್ಞಾನ: ಮ್ಯಾನ್​ಹೋಲ್​ಗಳ ನಿರ್ವಹಣೆಗೆ ಜಲಮಂಡಳಿ ಬಳಿ ಕೇವಲ 118 ವಾಹನಗಳಿದ್ದು, ಹೊಸದಾಗಿ 30 ವಾಹನಗಳನ್ನು ಖರೀದಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಪ್ರತಿದಿನ ಮ್ಯಾನ್​ಹೋಲ್​ಗಳ ಸ್ವಚ್ಛತೆಗಾಗಿ 350ಕ್ಕೂ ಅಧಿಕ ದೂರುಗಳು ಬರುತ್ತಿದ್ದು, ವಾಹನಗಳ ಕೊರತೆ ಜತೆಗೆ ಕಿರಿದಾಗಿರುವ ರಸ್ತೆಗಳಲ್ಲಿನ ಮ್ಯಾನ್​ಹೋಲ್​ಗಳ ಸ್ವಚ್ಛತೆಗೆ ಜಲಮಂಡಳಿ ಬಳಿ ಯಾವುದೇ ಸೌಕರ್ಯಗಳು ಇಲ್ಲದಿರುವುದು ಹೆಚ್ಚಿನ ಸಮಸ್ಯೆಗೆ ಕಾರಣವಾಗಿದೆ.

ಒಳಭಾಗದ ರಸ್ತೆಗಳಲ್ಲಿ ಜಲಮಂಡಳಿಯ ದೊಡ್ಡ ವಾಹನಗಳು ಸಂಚರಿಸುವುದರಿಂದ ಸಂಚಾರ ದಟ್ಟಣೆಯ ಸಮಸ್ಯೆಯೂ ಉಂಟಾಗುತ್ತಿದ್ದು, ಕೆಲವು ಪ್ರದೇಶಗಳೀಗೆ ವಾಹನಗಳು ತೆರಳಲು ಅವಕಾಶವಿಲ್ಲದಿರುವುದರಿಂದ ಕಾರ್ವಿುಕರನ್ನು ಮ್ಯಾನ್​ಹೋಲ್​ಗೆ ಇಳಿಸಿ ಮಲ ಹೊರುವ ಅನಿಷ್ಠ ಪದ್ಧತಿ ನಗರದಲ್ಲಿ ಮುಂದುವರಿದಿದೆ.

ಇದರ ಪರಿಣಾಮವಾಗಿಯೇ ಮ್ಯಾನ್​ಹೋಲ್​ಗೆ ಕಾರ್ವಿುಕರು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಜಲಮಂಡಳಿ ಇಬ್ಬರು ಹೆಚ್ಚುವರಿ ಮುಖ್ಯ ಅಭಿಯಂತರು, ಒಬ್ಬ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಒಳಚರಂಡಿ ಕಾರ್ವಿುಕರನ್ನು ಒಳಗೊಂಡ ತಂಡದಿಂದ ದೆಹಲಿಯಲ್ಲಿ ಅಧ್ಯಯನ ಮಾಡಿಸಿದೆ. ಅಧಿಕಾರಿಗಳು ನೀಡುವ ವರದಿ ಆಧರಿಸಿ ಬದಲಾವಣೆಗಳನ್ನು ತರಲು ತೀರ್ವನಿಸಿದೆ.

ಆಯೋಗದಿಂದಲೂ ಸೂಚನೆ: ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಜತೆಗೂಡಿ ದೆಹಲಿಯಲ್ಲಿ ಮಲಹೊರುತ್ತಿದ್ದ ಕಾರ್ವಿುಕರಿಗೆ ಟಾಟಾ ಏಸ್ ಮಾದರಿಯ ಚಿಕ್ಕ ವಾಹನಗಳಲ್ಲಿ ಜೆಟ್ಟಿಂಗ್ ಯಂತ್ರ ಅಳವಡಿಸಿರುವ ವಾಹನಗಳನ್ನು ನೀಡಲಾಗಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಲು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಈ ಹಿಂದೆ ಜಲಮಂಡಳಿಗೆ ಸೂಚನೆ ನೀಡಿತ್ತು. ಅದಾದ ನಂತರ ಮಂಡಳಿ ಅಧಿಕಾರಿಗಳು ದೆಹಲಿಯಲ್ಲಿ ಪರಿಶೀಲನೆ ನಡೆಸಿದ್ದು, ಅಲ್ಲಿನ ಸ್ಥಳೀಯ ಪ್ರಾಧಿಕಾರಗಳಿಂದಲೂ ನಿರ್ವಹಣೆ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಳೆಯ ಪ್ರದೇಶಗಳಲ್ಲಿ ಕಿರಿದಾದ ರಸ್ತೆಗಳಿದ್ದು, ಜನಸಂಖ್ಯೆಯೂ ಹೆಚ್ಚಾಗಿದೆ. ಅಂಥ ಸ್ಥಳಗಳಲ್ಲಿ ದೊಡ್ಡ ವಾಹನಗಳನ್ನು ಕಳುಹಿಸುವುದು ಸವಾಲಾಗುತ್ತಿದೆ. ಅಲ್ಲದೆ ಪ್ರತಿ ಮ್ಯಾನ್​ಹೋಲ್ ಸ್ವಚ್ಛತೆಗೆ ಕನಿಷ್ಠ 30 ನಿಮಿಷ ಬೇಕಾಗುವುದರಿಂದ ಬೃಹದಾಕಾರದ ಜೆಟ್ಟಿಂಗ್ ವಾಹನಗಳು ರಸ್ತೆ ಮಧ್ಯೆ ನಿಂತರೆ ಸಂಚಾರ ದಟ್ಟಣೆಯೂ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 30 ಚಿಕ್ಕ ವಾಹನಗಳನ್ನು ಖರೀದಿಸುವ ಮಾಹಿತಿಯಿದೆ. ಪ್ರಸ್ತುತ ನಗರದಲ್ಲಿರುವ 118 ವಾಹನಗಳ ಪೈಕಿ ಪ್ರತಿಯೊಂದರ ನಿರ್ವಹಣೆಗೆ 80 ಸಾವಿರ ದಿಂದ 1.20 ಲಕ್ಷ ರೂ.ಗಳನ್ನು ಪ್ರತಿ ತಿಂಗಳು ವ್ಯಯ ಮಾಡಲಾಗುತ್ತಿದೆ. ಪ್ರತಿ ವಾಹನಕ್ಕೆ 3 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಹಂತ, ಹಂತವಾಗಿ ಜಲಮಂಡಳಿ ತನ್ನ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ಬೆಂಗಳೂರಿನ ಮ್ಯಾನ್​ಹೋಲ್​ಗಳನ್ನು ನಿರ್ವಹಿಸಲು ಅಧಿಕಾರಿಗಳ ತಂಡ ದೆಹಲಿಯಲ್ಲಿ ಈಗಾಗಲೇ ಪರಿಶೀಲನೆ ನಡೆಸಿದೆ. ಅಧಿಕಾರಿಗಳು ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸದಾಗಿ 30 ವಾಹನಗಳನ್ನು ಖರೀದಿಸುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ.

| ಬಿ.ಸಿ.ಗಂಗಾಧರ್ ಜಲಮಂಡಳಿ ನಿರ್ವಹಣಾ ವಿಭಾಗದ ಮುಖ್ಯ ಅಭಿಯಂತರ
ಕೃಪೆ:ವಿಜಯವಾಣಿ

ಮ್ಯಾನ್​ಹೋಲ್ ನಿರ್ವಹಣೆಗೆ ದೆಹಲಿ ಮಾದರಿ: ಅಧ್ಯಯನ ನಡೆಸಿರುವ ಜಲಮಂಡಳಿ ತಂಡ, ಚಿಕ್ಕ ಜೆಟ್ಟಿಂಗ್ ಯಂತ್ರಗಳ ಖರೀದಿಗೆ ಚಿಂತನೆ
delhi-model-for-manhole-management