ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಗೌರವ ಸಮರ್ಪಣೆ : ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಅನೇಕ ಗಣ್ಯರು ಭಾಗಿ 

ಮೈಸೂರು, ಡಿಸೆಂಬರ್,06,2020(www.justkannada.in) : ಸಂವಿಧಾನ ಶಿಲ್ಪಿ ಬಾಬಾಸಾಹೇಬ್  ಡಾ. ಬಿ.ಆರ್. ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನದ ಅಂಗವಾಗಿ ಪುರಭವನ ಆವರಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.logo-justkannada-mysore

ಈ ಸಂದರ್ಭ ಬೌದ್ಧ ಧಮ್ಮ ಗುರುಗಳು ಬುದ್ಧವಂದನೆ ಧಮ್ಮವಂದನೆ ಸಂಘವಂದನೆ ಸಲ್ಲಿಸಿದರು. ಬುದ್ಧರ  ಪಂಚಶೀಲ ತತ್ವಗಳನ್ನು ಬೋಧಿಸಿದರು. ಉಸ್ತುವಾರಿ ಸಚಿವರು ಹಾಗೂ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಬೌದ್ಧ ತತ್ವಗಳನ್ನು ಆಲಿಸಿದರು.

ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವರು, ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಚರಣೆ ಮಾಡಿದ್ದೇವೆ‌. ಅಂಬೇಡ್ಕರ್ ಅವರು ತಮ್ಮ ಬಾಲ್ಯದಲ್ಲಿ ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯ ಅನುಭವಿಸಿದ್ದರು. ಅದರ ಆಧಾರದ ಮೇಲೆ ಸಂವಿಧಾನ ರಚಿಸಿದರು.  ಸಂವಿಧಾನದಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಡಾ.ಅಂಬೇಡ್ಕರ್ ಭವನ ಕಾಮಗಾರಿಗೆ 16 ಕೋಟಿ ರೂ. ಅನುದಾನ ಕ್ಯಾಬಿನೆಟ್‌ನಲ್ಲಿ ಅನುಮೋದನೆ 

ಮೈಸೂರಿನಲ್ಲಿ ಸ್ಥಗಿತಗೊಂಡಿರುವ ಡಾ.ಅಂಬೇಡ್ಕರ್ ಭವನ ಕಾಮಗಾರಿ ಮುಂದುವರಿಸಲು ಶಾಸಕ ಎಲ್.ನಾಗೇಂದ್ರ ಅವರ ಮನವಿ ಮೇರೆಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ಸಮಾಜ ಕಲ್ಯಾಣ ಸಚಿವರು ಕೂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳ ಸಭೆ ಮಾಡಲಾಗಿದೆ. ಹೆಚ್ಚುವರಿ 16 ಕೋಟಿ ರೂ. ಅನುದಾನ ಬೇಕಾಗಿದೆ ಎಂದು ಅಂದಾಜು ತಯಾರಿಸಲಾಗಿದೆ. ಕ್ಯಾಬಿನೆಟ್‌ನಲ್ಲಿ ಇಟ್ಟು ಅನುಮೋದನೆ ಮಾಡಿಸಲಾಗುವುದು ಎಂದರು.

ಹಿಂದೆ 20ಕೋಟಿ ರೂ. ಮಂಜೂರಾಗಿತ್ತು. ಅಷ್ಟು ಕೆಲಸ ಆಗಿದೆ. ಭಾರತದಲ್ಲೇ ಎರಡನೇ ಅತಿದೊಡ್ಡ ಅಂಬೇಡ್ಕರ್ ಭವನ ಇದಾಗಬೇಕು ಎಂದು ಶ್ರೀನಿವಾಸ್ ಪ್ರಸಾದ್ ಅವರು ಈ ಭವನವನ್ನು ಹೆಚ್ಚು ವಿಸ್ತಾರ ಮಾಡುವಂತೆ ಸಲಹೆ ಮಾಡಿದ್ದಾರೆ. ಅದರಂತೆ ಮಾಡಲು ಹೆಚ್ಚುವರಿ ವೆಚ್ಚ ಆಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ, ಆರ್.ಧರ್ಮಸೇನ, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ,  ಹರ್ಷವರ್ಧನ್, ಮೇಯರ್ ತಸ್ನಿಂ, ಮುಡಾ ಅಧ್ಯಕ್ಷ ಹೆಚ್.ವಿ‌.ರಾಜೀವ್,  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಅಪರ ಜಿಲ್ಲಾಧಿಕಾರಿ ಬಿ‌.ಎಸ್.ಮಂಜುನಾಥಸ್ವಾಮಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

key words : Dedicated-statue-Dr.BR Ambedkar-Including- Minister-S.T.Somashekhar-Many-dignitaries-involved