ಚಿಕ್ಕಮಗಳೂರಿನ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿಗೆ ಅಧಿಕೃತ ಚಾಲನೆ

ಬೆಂಗಳೂರು, ಡಿಸೆಂಬರ್ 10, 2021 (www.justkannada.in): ಕಾಫಿನಾಡಿನ ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯುವ ದತ್ತ ಜಯಂತಿಗೆ ಅಧಿಕೃತ ಚಾಲನೆ ದೊರೆತಿದೆ.

ಚಿಕ್ಕಮಗಳೂರಿನಲ್ಲಿ 200ಕ್ಕೂ ಅಧಿಕ ದತ್ತ ಭಕ್ತರು ಮಾಲಾಧಾರಣೆ ಮಾಡಿದ್ದಾರೆ. ಮಾಲೆ ಧರಿಸಿದ ವ್ರತದಲ್ಲಿದ್ದು 19ರಂದು ದತ್ತಪೀಠದಲ್ಲಿ ಪಾದುಕೆ ದರ್ಶನ ಮಾಡಲಿದ್ದಾರೆ.

ದತ್ತಾಜಯಂತಿ ಹಿನ್ನಲೆ ಮುಂದಿನ 11 ದಿನಗಳ ಕಾಲ ಕಾಫಿನಾಡು ಬೂದಿಮುಚ್ಚಿದ ಕೆಂಡದಂತಿದ್ದು, ಜಿಲ್ಲಾಡಳಿತ ಕೂಡ ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ರೀತಿ ಸಮಸ್ಯೆ ಆಗದಂತೆ ಕಟ್ಟೆಚ್ಚರ ವಹಿಸಿದೆ.

ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಾಲಯದಲ್ಲಿ ಬಜರಂಗದಳ ಮುಖಂಡರು ಹಾಗೂ 200ಕ್ಕೂ ಅಧಿಕ ಕಾರ್ಯಕರ್ತರು ಮಾಲೆ ಧರಿಸಿ, ಹೋಮ-ಹವನ, ಭಜನೆ ನಡೆಸಿದ್ರು. ಡಿಸೆಂಬರ್ 17ಕ್ಕೆ ಅನುಸೂಯ ಜಯಂತಿ, 18ರಂದು ಬೃಹತ್ ಶೋಭಾಯಾತ್ರೆ ಹಾಗೂ 19ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.

ರಾಜ್ಯಾದ್ಯಂತ ಸುಮಾರ 5000ಕ್ಕೂ ಅಧಿಕ ಭಕ್ತರು ಮಾಲೆ ಧರಿಸಿದ್ದು, ಡಿಸೆಂಬರ್ 19ರಂದು 15-20 ಸಾವಿರಕ್ಕೂ ಅಧಿಕ ಭಕ್ತರು ಜಿಲ್ಲೆಯ ದತ್ತಪೀಠಕ್ಕೆ ಆಗಮಿಸಲಿದ್ದಾರೆ. ಇವರೆಲ್ಲಾ 9 ದಿನಗಳ ಕಾಲ ವೃತಾಚರಣೆಯಲ್ಲಿದ್ದು 10 ಹಾಗೂ 11ನೇ ದಿನ ಬೃಹತ್ ಅನಸೂಯ ಜಯಂತಿ, ಶೋಭಾ ಯಾತ್ರೆ ನಡೆಸಲಿದ್ದಾರೆ.