ದಸರಾ ಚಲನಚಿತ್ರೋತ್ಸವಕ್ಕೆ ಹೆಚ್ಚಿನ ಆದ್ಯತೆ ಅಗತ್ಯ – ಸಚಿವ ವಿ. ಸೋಮಣ್ಣ ಹೇಳಿಕೆ…

Promotion

ಮೈಸೂರು, ಸೆ.20,2019(www.justkannada.in): ದಸರಾ ಚಲನಚಿತ್ರೋತ್ಸವಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಅಭಿಪ್ರಾಯಪಟ್ಟರು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿ  ಸಚಿವ ವಿ.ಸೋಮಣ್ಣ ಮಾತನಾಡಿದರು.

ಸಿನಿಮಾ ಜಗತ್ತು ವಿದ್ಯಾವಂತರೂ ಸೇರಿದಂತೆ ಓದು ಬರಹ ಬಾರದವರಿಗೆ ಪರಿಣಾಮಕಾರಿಯಾಗಿ ತಲುಪುವ ಒಂದು ಪ್ರಭಾವಿ ಮಾಧ್ಯಮ.  ಸಮಾಜವನ್ನು ಅಭ್ಯುದಯದೆಡೆಗೆ ಕೊಂಡೊಯ್ಯುವ ಆಲೋಚನೆಗಳಿಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ನಾಡಿನ ಮೂಲೆ ಮೂಲೆಗಳಲ್ಲಿ ನಡೆಯುವ ವಿದ್ಯಮಾನಗಳನ್ನು ಸಮರ್ಥವಾಗಿ ತೆರೆಯ ಮೇಲೆ ಬಿಂಬಿಸುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ವ್ಯವಸ್ಥೆಯನ್ನು ಬದಲಾಯಿಸಬಲ್ಲ ಶಕ್ತಿ ಈ  ಸಿನಿಮಾ ರಂಗಕ್ಕಿದೆ. ಈ ನಿಟ್ಟಿನಲ್ಲಿ ಸಮಾಜವನ್ನು ಸುಧಾರಿಸುವ ಸಂದೇಶ ಸಾರುವ ಗುಣಮಟ್ಟದ ಚಿತ್ರಗಳ ನಿರ್ಮಾಣ ಸಂಖ್ಯೆ ಹೆಚ್ಚಲಿ ಎಂದು ಆಶಿಸಿದರು.

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಪ್ರಾಸ್ತವಿಕವಾಗಿ ಮಾತನಾಡಿ, ಚಲನಚಿತ್ರವೊಂದು ಉತ್ತಮ ಸಿನಿಮಾ ಎನಿಸಿಕೊಳ್ಳಲು ಅದರ ಕಥೆ ಪ್ರಮುಖ ಪಾತ್ರ ವಹಿಸುತ್ತದೆ. ಸಿನಿಮಾವೊಂದರ ಕಥೆ ಚೆನ್ನಾಗಿದ್ದರೆ, ಅದರ ಗುಣಮಟ್ಟ ಸಹಜವಾಗಿ ಹೆಚ್ಚುತ್ತದೆ. ಈ ದಿಸೆಯಲ್ಲಿ ಉತ್ತಮ ಚಿತ್ರಕಥೆಗಳನ್ನು ಆಧರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾಗಳು ತಯಾರಾಗುವಂತಾಗಲಿ ಎಂಬ ಉದ್ದೇಶದಿಂದ ದಸರಾ ಸಂದರ್ಭದಲ್ಲಿ  ಇದೇ ಮೊದಲ ಬಾರಿಗೆ ಈ ಚಿತ್ರಕಥಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ದಸರಾ ಚಲನಚಿತ್ರೋತ್ಸವವನ್ನು ಕೇವಲ ರಾಜ್ಯ, ರಾಷ್ಟ್ರಕ್ಕೆ ಸೀಮಿತಗೊಳಿಸದೆ ಅಂತರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳುವಂತೆ ಸಚಿವ ವಿ.ಸೋಮಣ್ಣಗೆ ಮನವಿ ಮಾಡಿದರು.

ಶಾಸಕ ಕೆ.ಟಿ. ಶ್ರೀಕಂಠೇಗೌಡ, ಮೇಯರ್ ಪುಷ್ಪಲತ ಜಗನ್ನಾಥ್, ಉಪ ಮೇಯರ್ ಷಫಿ ಅಹ್ಮದ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಚಲನಚಿತ್ರೋತ್ಸವ ಉಪಸಮಿತಿ ಅಧ್ಯಕ್ಷ ಜಯಪ್ರಕಾಶ್, ದಸರಾ ಉಪವಿಶೇಷಾಧಿಕಾರಿ ಬಿ.ಎನ್. ಗಿರೀಶ್, ಕಾರ್ಯಾಧ್ಯಕ್ಷ ಬಿ.ಜಿ. ಗೋವಿಂದರಾಜು, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಮೊದಲಾದವರು ವೇದಿಕೆಯಲ್ಲಿದ್ದರು.

Key words: Dasara -Film Festival- needs -more priority-Minister -V. Somanna