ನವೋದ್ಯಮಗಳಿಗೆ ಸುಗಮ ಸಾಲ: ಎಸ್‌ ಬಿಐ ಜತೆ ಕೆ-ಡಿಇಎಂ ಒಡಂಬಡಿಕೆ.

Promotion

ಬೆಂಗಳೂರು,ಜುಲೈ,8,2022(www.justkannada.in):  ನವೋದ್ಯಮಗಳಿಗೆ ಅಗತ್ಯವಾಗಿರುವ ಸಾಲಸೌಲಭ್ಯವನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಪ್ರತ್ಯೇಕವಾದಂತಹ ಬ್ಯಾಂಕ್ ಶಾಖೆಯನ್ನು ಎಸ್ ಬಿಐ ಆರಂಭಿಸುತ್ತಿದ್ದು, ಈ ಸಂಬಂಧ ಬ್ಯಾಂಕ್ ನ ಅಧಿಕಾರಿಗಳು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ) ಜತೆ ಶುಕ್ರವಾರ ಒಡಂಬಡಿಕೆಗೆ ಸಹಿ ಹಾಕಿದರು.

ನಗರದಲ್ಲಿ ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಡಿಇಎಂ ಪರವಾಗಿ ಅದರ ಸಿಇಒ ಸಂಜೀವ್ ಗುಪ್ತ ಮತ್ತು ಎಸ್‌ ಬಿಐ ಪ್ರಧಾನ ವ್ಯವಸ್ಥಾಪಕ ಎಸ್.ರಾಧಾಕೃಷ್ಣನ್ ಅಂಕಿತ ಹಾಕಿ, ಒಪ್ಪಂದ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ.

ಬೆಂಗಳೂರಿನ ಕೋರಮಂಗಲದಲ್ಲಿ ಎಸ್ ಬಿ ಐ, ನವೋದ್ಯಮಿಗಳ ಸಲುವಾಗಿ ಪ್ರತ್ಯೇಕ ಶಾಖೆ ತೆರೆಯುತ್ತಿದ್ದು, ಇದನ್ನು ಆಗಸ್ಟ್ ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಸಚಿವ ಅಶ್ವತ್ ನಾರಾಯಣ್ ಹೇಳಿದರು.

‘ಕೇಂದ್ರ ಸರಕಾರವು ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ ಸೌಲಭ್ಯವನ್ನು ಖಾತ್ರಿಪಡಿಸಲು ರೂಪಿಸಿರುವ ಸಿಜಿಟಿಎಸ್‌ಎಂಇ ಯೋಜನೆಯಡಿ ಒಂದು ಸಂಸ್ಥೆಗೆ ತಲಾ 2 ಕೋಟಿ ರೂ.ವರೆಗೂ ಸಾಲ ಸಿಗುತ್ತಿದೆ. ಇದನ್ನು ಬಳಸಿಕೊಂಡು, ರಾಜ್ಯದಲ್ಲಿ ನವೋದ್ಯಮಗಳಿಗೆ ಈ ನೆರವು ಒದಗಿಸಲು ತೀರ್ಮಾನಿಸಲಾಗಿದೆ’ ಎಂದರು.

ರಾಜ್ಯದಲ್ಲಿ ಒಟ್ಟು 13 ಸಾವಿರ ನವೋದ್ಯಮಗಳಿವೆ. ಇವುಗಳಲ್ಲಿ ಕೆಲವು ಸಂಸ್ಥೆಗಳಿಗೆ ಹಣಕಾಸು ನಿಧಿಯ ಕೊರತೆ ಉಂಟಾಗುತ್ತದೆ. ಇದನ್ನು ಪರಿಹರಿಸಿ, ಸುಗಮ ಸಾಲ ಸಿಗುವಂತೆ ಮಾಡಲು ಈ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಎಸ್‌ ಬಿಐ ಮುಂದಿನ ಆರು ತಿಂಗಳಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಕ್ಲಸ್ಟರ್ ಗಳಲ್ಲಿ ಕೆಡಿಇಎಂ ಜತೆಗೂಡಿ ಇಂಥದೇ ಶಾಖೆಗಳನ್ನು ತೆರೆಯಲಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರದ `ಎಲಿವೇಟ್’ ಉಪಕ್ರಮದಡಿ ವಿಜೇತವಾಗಿರುವ 750 ಸ್ಟಾರ್ಟ್ ಅಪ್ ಕಂಪನಿಗಳು ಈಗಾಗಲೇ ನಮ್ಮಲ್ಲಿವೆ. ಈ ಒಪ್ಪಂದದಿಂದಾಗಿ ಇವುಗಳ ಜತೆಗೆ ಇನ್ನೂ 250ಕ್ಕೂ ಹೆಚ್ಚು (ಒಟ್ಟು 1,000ಕ್ಕೂ ಅಧಿಕ) ನವೋದ್ಯಮಗಳಿಗೆ ಯಾವುದೇ ಅಡೆತಡೆ ಇಲ್ಲದೆ ಸಾಲ ಸಿಗಲಿದೆ. ಇದರಿಂದ ಉದ್ಯಮಶೀಲತೆಯ ಬೆಳವಣಿಗೆ ನಿರಾತಂಕವಾಗಿ ಸಾಗಲಿದೆ. ಈ ಮೂಲಕ ಎಸ್‌ಬಿಐ, ಮಂಗಳೂರಿನಲ್ಲಿ ಕೇಂದ್ರಸ್ಥಾನ ಹೊಂದಿರುವ ಫಿನ್‌ ಟೆಕ್‌ ಇನ್ನೋವೇಷನ್‌ ಹಬ್‌ ನಲ್ಲಿ ಸಹಭಾಗಿತ್ವ ಹೊಂದಲಿದೆ ಎಂದು ಅವರು ನುಡಿದರು.

ರಾಜ್ಯದಲ್ಲಿರುವ ಸ್ಟಾರ್ಟ್ ಅಪ್ ಕಾರ್ಯ ಪರಿಸರವು ಸಮರ್ಥವಾಗಿ ಮುಂದುವರಿಯಲು ಸಾರ್ವಜನಿಕ ವಲಯದ ಎಸ್‌ ಬಿಐ ಸರಕಾರದೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹವಾಗಿದೆ. ಇದರಿಂದಾಗಿ ಕರ್ನಾಟಕವು ದೇಶದ ಫಿನ್‌-ಟೆಕ್ ತೊಟ್ಟಿಲಾಗಿ ಬೆಳೆಯಲಿದೆ. ಜತೆಗೆ, ವಿಶ್ವದ ಅಗ್ರಪಂಕ್ತಿಯ ಐದು ನವೋದ್ಯಮ ಕಾರ್ಯ ಪರಿಸರದ ನಗರಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‌ಬಿಐ ಉಪಪ್ರಧಾನ ವ್ಯವಸ್ಥಾಪಕ ರಾಣಾ ಆಶುತೋಷ್ ಕುಮಾರ್ ಸಿಂಗ್, `ಕರ್ನಾಟಕ ಸರಕಾರದ ರಚನಾತ್ಮಕ ಉಪಕ್ರಮಗಳಿಂದಾಗಿ ಎಸ್‌ಬಿಐ ದೇಶದ ಪ್ರಪ್ರಥಮ ಕ್ಲಸ್ಟರ್ ಸೀಡ್‌ ಫಂಡ್ ವ್ಯವಸ್ಥೆಯನ್ನು ಆರಂಭಿಸುವುದು ಸಾಧ್ಯವಾಗಿದೆ. ಉಳಿದ ರಾಜ್ಯಗಳೂ ಹೀಗೆಯೇ ಮುಂದಡಿ ಇಟ್ಟರೆ, ಈ ಸೌಲಭ್ಯವನ್ನು ಉಳಿದೆಡೆಗಳಲ್ಲೂ ಆರಂಭಿಸಬಹುದು’ ಎಂದರು.

ಸಮಾರಂಭದಲ್ಲಿ ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಸಿಇಒ ಸಂಜೀವ್ ಗುಪ್ತ, ಎಸ್‌ ಬಿಐ ಬೆಂಗಳೂರು ವೃತ್ತದ ಪ್ರಧಾನ ವ್ಯವಸ್ಥಾಪಕ ನಂದಕಿಶೋರ್ ಉಪಸ್ಥಿತರಿದ್ದರು.

Key words: credit –K-DEM -tie-up -with -SBI.