ನೆರೆಹೊರೆಯಲ್ಲಿ ಕೋವಿಡ್ ಗೂಢಾಚಾರರು.

ಬೆಂಗಳೂರು, ಸೆಪ್ಟೆಂಬರ್ 28, 2021(www.justkannada.in):  ಕೋವಿಡ್ ಸಾಂಕ್ರಾಮಿಕದ ವಿಚಾರಣೆಗಳ ಸಂಬಂಧ ಬಿಬಿಎಂಪಿ ಹೊಸದಾಗಿ ಆರಂಭಿಸಿರುವ ಸಹಾಯವಾಣಿ ಸಾರ್ವಜನಿಕರ ‘ಗೂಢಾಚಾರಿಕೆ ವಾಣಿ’ಯಾಗಿ ಪರಿವರ್ತಿತಗೊಂಡಿದೆ. ಹಾಗಂದರೇನು ಎಂದು ಯೋಚಿಸುತ್ತಿರುವಿರಾ, ಹಾಗಾದರೆ ಮುಂದೆ ಓದಿ:

ಬೆಂಗಳೂರು ನಗರದಲ್ಲಿ ನಾಗರಿಕರು ತಮ್ಮ ನೆರೆ ಹೊರೆಯಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆಯ ಕುರಿತು ದೂರುಗಳನ್ನು ನೀಡಲು ಈ ಸಹಾಯವಾಣಿಯನ್ನು ಹೆಚ್ಚಾಗಿ ಬಳಸಲು ಆರಂಭಿಸಿದ್ದಾರಂತೆ. ಜೊತೆಗೆ, ಉಲ್ಲಂಘನೆ ಮಾಡುವವರು ವಿರುದ್ಧ ಕ್ರಮ ಕೈಗೊಳ್ಳಲು ಮಾರ್ಷಲ್‌ ಗಳನ್ನು ಕಳುಹಿಸುವಂತೆ ಕೋರುತ್ತಿದ್ದಾರಂತೆ, ಹುಷಾರ್.

ಕೆಲವು ಪ್ರಕರಣಗಳಲ್ಲಿ ಮಾರ್ಷಲ್‌ ಗಳು ಸ್ಥಳಕ್ಕೆ ಭೇಟಿ ನೀಡಿ ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡವನ್ನೂ ವಿಧಿಸಿದ್ದಾರೆ.

“ಮಾಸ್ಕ್ ಗಳನ್ನು ಧರಿಸದೇ ಇರುವುದು, ಸಾಮಾಜಿಕ ಅಂತರ ಪಾಲಿಸದಿರುವುದು, ಹಾಗೂ ದೊಡ್ಡ ಸಂಖ್ಯೆಯಲ್ಲಿ ಜನರು ಗುಂಪುಗೂಡುವುದು,” ಇಂತಹ ವಿಷಯಗಳ ಕುರಿತು ಈ ಸಹಾಯವಾಣಿಗೆ ಹೆಚ್ಚು ಹೆಚ್ಚು ದೂರುಗಳು ಬರಲಾರಂಭಿಸಿದೆ,” ಎನ್ನುತ್ತಾರೆ ಬಿಬಿಎಂಪಿಯ ಕೋವಿಡ್ ಸಂಬಂಧಿತ ವಿಚಾರಣೆಗಳನ್ನು ನಿರ್ವಹಿಸುವ ಸಹಾಯವಾಣಿಯ ಪ್ರಭಾರ ಅಧಿಕಾರಿ ಡಾ. ಮಹೇಶ್ವರಿ.

“ಜನರು ಕೋವಿಡ್ ನಿಯಮ ಉಲ್ಲಂಘನೆ ಕುರಿತು ನಮಗೆ ದೂರವಾಣಿ ಕರೆ ಮಾಡಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಮಾರ್ಷಲ್‌ ಗಳನ್ನು ಕಳುಹಿಸಿ ಎಂದು ಕೋರುತ್ತಾರೆ. ನಮಗೆ ಬರುವ ದೂರಗಳ ಪೈಕಿ ದೂರದಾರರ ನಿವಾಸಗಳು ಹಾಗೂ ನೆರೆಯಲ್ಲಿರುವ ವಾಣಿಜ್ಯ ಮಳಿಗೆಗಳ ಬಳಿ ದೊಡ್ಡ ಪ್ರಮಾಣದಲ್ಲಿ ಜನರು ಗುಂಪು ಗೂಡುವುದು ಸೇರಿವೆ. ದೂರುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಾವು ಆ ಕರೆಗಳನ್ನು ಮಾರ್ಷಲ್‌ ಗಳಿಗೆ ತಲುಪಿಸಲು ಕ್ರಮ ಕೈಗೊಂಡೆವು,” ಎಂದರು.

“ಸರಾಸರಿ ನಮಗೆ ಪ್ರತಿ ದಿನ ಇಂತಹ 200 ಕರೆಗಳು ಬರುತ್ತಿವೆ. ನಾವು ಪ್ರತಿ ದಿನ ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪ್ರತಿ ಪಾಳಿಯಲ್ಲಿ 25 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ನೀವು ಡಯಲ್ ಮಾಡಿದ ಕೂಡಲೇ ಸಂಪರ್ಕ ಸಾಧ್ಯವಾಗುತ್ತದೆ, ಒಂದು ಕ್ಷಣವೂ ಕಾಯುವಂತಿಲ್ಲ,” ಎಂದು ಡಾ. ಮಹೇಶ್ವರಿ ವಿವರಿಸಿದರು.

ಶನಿವಾರದಂದು ಸಹಾಯವಾಣಿಗೆ ಬಂದ ಒಂದು ಅನಾಮಧೇಯ ದೂರಿನ ಮೇರೆಗೆ ಮಾರ್ಷಲ್‌ ಗಳು ಸುಧಾಮನಗರಕ್ಕೆ ಭೇಟಿ ನೀಡಿದರು. “ದೂರುದಾರರು ತಮ್ಮ ಮನೆಯ ಹತ್ತಿರದ ಒಂದು ಪಾರ್ಟಿ ಹಾಲ್‌ ನಲ್ಲಿ ತುಂಬಾ ಜನರು ಸೇರಿರುವ ಕುರಿತು ದೂರಿದರು. ನಾವು ನಮ್ಮ ಮಾರ್ಷಲ್‌ಗಳಿಗೆ ಮಾಹಿತಿ ನೀಡಿದೆವು. ಕೇವಲ ಅರ್ಧ ಗಂಟೆಯೊಳಗೆ ಅಲ್ಲಿಗೆ ತೆರಳಿದ ಮಾರ್ಷಲ್‌ ಗಳ ತಂಡ ನಿಯಮ ಉಲ್ಲಂಘಿಸಿದವರ ವಿರುದ್ಧ ರೂ.೫೦,೦೦೦ ದಂಡ ವಿಧಿಸಿದ್ದಾರೆ.

ಅಲ್ಲಿ ಒಂದು ಮದುವೆ ಸಮಾರಂಭ ಜರುಗುತಿತ್ತು. ಆಯೋಜಕರು ಬಿಬಿಎಂಪಿಯಿಂದ ಅನುಮತಿಯನ್ನು ಪಡೆದಿರಲಿಲ್ಲ. ಮೇಲಾಗಿ ಅಲ್ಲಿ ನಿಗಧಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಜನರಿದ್ದರು. ಯಾರೂ ಸಹ ಮಾಸ್ಕ್ ಗಳನ್ನು ಧರಿಸಿರಲಿಲ್ಲ ಅಥವಾ ಸಾಮಾಜಿಕ ಅಂತರದ ಪಾಲನೆಯೂ ಆಗುತ್ತಿರಲಿಲ್ಲ,” ಎಂದು ಮುಖ್ಯ ಮಾರ್ಷಲ್ ಕರ್ನಲ್ ರಾಜ್‌ಬೀರ್ ಸಿಂಗ್ ತಿಳಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Covid- spies – neighbourhood-bangalore